ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಎರಡು ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದೆ. ಇನ್ನು 5 ಹಂತಗಳ ಮತದಾನ ಬಾಕಿ ಇದೆ. ಈ ಮಧ್ಯೆ ಚುನಾವಣಾ ಆಯೋಗ (Election Commission) ಎರಡೂ ಹಂತಗಳಲ್ಲಿ ನಡೆದ ಒಟ್ಟು ಮತದಾನದ ನಿಖಿರ ಅಂಕಿ ಅಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ 18ನೇ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ. 66.14ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರೆ, ಎರಡನೇ ಹಂತದಲ್ಲಿ ಶೇ. 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೊದಲ ಹಂತದಲ್ಲಿ ಏಪ್ರಿಲ್ 19ರಂದು 102 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಏಪ್ರಿಲ್ 26ರಂದು ಕರ್ನಾಟಕದ 14 ಕ್ಷೇತ್ರ ಸೇರಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. 2019ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯ ಎರಡು ಹಂತಗಳಲ್ಲಿ ಮತದಾನದ ಪ್ರಮಾಣವು ಕುಸಿತ ಕಂಡಿದೆ. 2019ರಲ್ಲಿ ಮೊದಲ ಮತ್ತು ಎರಡನೇ ಹಂತಗಳಲ್ಲಿ ಕ್ರಮವಾಗಿ ಶೇ. 69.43 ಮತ್ತು ಶೇ. 69.17ರಷ್ಟು ಮತದಾನವಾಗಿತ್ತು.
#LokSabhaElections2024 | ECI publishes Voter turnout data for Phase 1 and Phase 2 – Voter turnout of 66.14% in phase 1 and 66.71% in phase 2 pic.twitter.com/E2E7WZWQnP
— ANI (@ANI) April 30, 2024
ಅತ್ಯಧಿಕ ಎಲ್ಲಿ?
ಮೊದಲ ಹಂತದಲ್ಲಿ ಲಕ್ಷದ್ವೀಪದಲ್ಲಿ ಅತೀ ಹೆಚ್ಚು ಮತದಾನ ನಡೆದಿತ್ತು. ಇಲ್ಲಿ ಶೇ. 84.1 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಅದೇ ರೀತಿ ಅತೀ ಕಡಿಮೆ ಬಿಹಾರದಲ್ಲಿ ದಾಖಲಾಗಿತ್ತು. ಇಲ್ಲಿ ಕೇವಲ ಶೇ. 49.26ರಷ್ಟು ಮತದಾನವಾಗಿತ್ತು. ಏಪ್ರಿಲ್ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಆಯೋಜಿಸಲಾಗಿತ್ತು.
ಇನ್ನು ಎರಡನೇ ಹಂತದಲ್ಲಿ ಮಣಿಪುರದಲ್ಲಿ ಅಧಿಕ ಪ್ರಮಾಣದಲ್ಲಿ ಅಂದರೆ ಶೇ. 84.85 ಮತ ಚಲಾವಣೆಯಾದರೆ ಅತೀ ಕಡಿಮೆ ಉತ್ತರ ಪ್ರದೇಶದಲ್ಲಿ ದಾಖಲಾಗಿದೆ. ಇಲ್ಲಿ ಶೇ. 55.19 ಮಂದಿ ಮಾತ್ರ ವೋಟು ಹಾಕಿದ್ದಾರೆ. ಎರಡನೇ ಹಂತದಲ್ಲಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ವೇಳೆ 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಕರ್ನಾಟಕದಲ್ಲಿ ದಾಖಲೆಯ ಮತದಾನ
ಕರ್ನಾಟಕದ 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ. 69.23 ಮತದಾನ ದಾಖಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮೂರನೇ ಹಂತದಲ್ಲಿ ಅಂದರೆ ಮೇ 7ರಂದು ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.