ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election)ಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಕೊನೆಯ ಹಂತದ ಮತದಾನ ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ರಿಸಲ್ಟ್ ಹೊರ ಬೀಳಲಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಬೆಟ್ಟಿಂಗ್ ಮಾರುಕಟ್ಟೆ ಬಿಜೆಪಿ ಮತ್ತೊಮ್ಮೆ ಸುಲಭವಾಗಿ ಅಧಿಕಾರಕ್ಕೆ ಮರಳಲಿದೆ ಎಂದು ಭವಿಷ್ಯ ನುಡಿದಿದೆ. ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಪಟ್ಟಕ್ಕೇರುತ್ತಾರೆ ಎಂದು ಅಂದಾಜಿಸಿದ್ದರೂ ಬಿಜೆಪಿ ‘400 ಸೀಟು’ ಗಳಿಸಬಹುದು ಎನ್ನುವ ವಿಚಾರದಲ್ಲಿ ಸಂದೇಹ ವ್ಯಕ್ತಪಡಿಸಿದೆ. ಜತೆಗೆ ಫಲೋಡಿ ಸಟ್ಟಾ ಬಜಾರ್ ಮಾರ್ಕೆಟ್ (Phalodi Satta Bazar) ಸಂಸ್ಥೆಯು ಸಮೀಕ್ಷಾ ವರದಿ ಪ್ರಕಟಿಸಿದ್ದು, ಕಾಂಗ್ರೆಸ್ (Congress) ಎಷ್ಟು ಸೀಟು ಗಳಿಸಬಹುದು ಎನ್ನುವುದನ್ನು ಅಂದಾಜಿಸಿದೆ. ಆ ಕುರಿತಾದ ವಿವರ ಇಲ್ಲಿದೆ.
ಬಿಜೆಪಿ 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ 55-65 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಆರಂಭದಲ್ಲಿ ಬಿಜೆಪಿಗೆ 315ರಿಂದ 325 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 45ರಿಂದ 55 ಸ್ಥಾನಗಳು ಸಿಗಲಿವೆ ಎಂದು ಊಹಿಸಲಾಗಿತ್ತು.
ಬದಲಾದ ಚಿತ್ರಣ
ಮೂರು ಹಂತಗಳ ಮತದಾನದ ನಂತರ ಬಿಜೆಪಿಗೆ 270ರಿಂದ 280 ಮತ್ತು ಕಾಂಗ್ರೆಸ್‌ಗೆ 70ರಿಂದ 80 ಸೀಟು ಸಿಗಬಹುದು ಎಂದು ಭವಿಷ್ಯವಾಣಿಯಲ್ಲಿ ಅಂದಾಜಿಸಲಾಗಿತ್ತು. ಆರು ಹಂತಗಳ ಮತದಾನ ಮುಗಿದ ಬಳಿಕ ಚಿತ್ರಣ ಬದಲಾಗಿದ್ದು, ಬಿಜೆಪಿಗೆ 295ರಿಂದ 305 ಮತ್ತು ಕಾಂಗ್ರೆಸ್‌ಗೆ 55ರಿಂದ 65 ಸೀಟು ಲಭಿಸಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಬಿಜೆಪಿಗೆ 400 ಸೀಟು ಸಿಗುವ ಸಾಧ್ಯತೆ ಇಲ್ಲ. ಅಲ್ಲದೆ ಬೆಟ್ಟಿಂಗ್ ದರದ ಪ್ರಕಾರ 350 ಸೀಟುಗಳು ಸಹ ಅಸಾಧ್ಯವೆಂದು ಎಂದು ಮೂಲಗಳು ತಿಳಿಸಿವೆ. ಚುನಾವಣೆ ಘೋಷಣೆಯಾದ ನಂತರ 8ರಿಂದ 9 ಲಕ್ಷ ಕೋಟಿ ರೂ.ಗಳ ಬೆಟ್ಟಿಂಗ್ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.
ಗೆಲುವು ಸಾಧಿಸಬಹುದಾದ ಸಂಭಾವ್ಯ ಅಭ್ಯರ್ಥಿಗಳು
ಕ್ಷೇತ್ರ | ಪಕ್ಷ | ಅಭ್ಯರ್ಥಿ |
ಅಮೇಥಿ | ಬಿಜೆಪಿ | ಸ್ಮೃತಿ ಇರಾನಿ |
ರಾಯ್ಬರೇಲಿ | ಕಾಂಗ್ರೆಸ್ | ರಾಹುಲ್ ಗಾಂಧಿ |
ವಯನಾಡ್ | ಕಾಂಗ್ರೆಸ್ | ರಾಹುಲ್ ಗಾಂಧಿ |
ನಾಗ್ಪುರ | ಬಿಜೆಪಿ | ನಿತಿನ್ ಗಡ್ಕರಿ |
ಚಂದ್ರಾಪುರ | ಕಾಂಗ್ರೆಸ್ | ಪ್ರತಿಭಾ ಧನೋರ್ಕರ್ |
ಗಾಂಧಿನಗರ | ಬಿಜೆಪಿ | ಅಮಿತ್ ಶಾ |
ಮೈನ್ಪುರಿ | ಎಸ್ಪಿ | ಡಿಂಪಲ್ ಯಾದವ್ |
ಲಕ್ನೋ | ಬಿಜೆಪಿ | ರಾಜನಾಥ್ ಸಿಂಗ್ |
ಮಥುರಾ | ಬಿಜೆಪಿ | ಹೇಮಾ ಮಾಲಿನಿ |
ಯವತ್ಮಾಲ್ | ಯುಬಿಟಿ ಸೇನಾ | ಸಂಜಯ್ ದೇಶ್ಮುಖ್ |
ಅಮರಾವತಿ | ಕಾಂಗ್ರೆಸ್ | ಬಲ್ವಂತ್ ವಾಂಖೆಡೆ |
ಬಾರಾಮತಿ | ಶರದ್ ಪವಾರ್ ಪಕ್ಷ | ಸುಪ್ರಿಯಾ ಸುಳೆ |
ಮುಂಬೈ ಉತ್ತರ | ಬಿಜೆಪಿ | ಪಿಯೂಷ್ ಗೋಯಲ್ |
ಕೊಲ್ಹಾಪುರ | ಕಾಂಗ್ರೆಸ್ | ಶಾಹು ಛತ್ರಪತಿ ಮಹಾರಾಜ್ |
ಹೈದರಾಬಾದ್ | ಎಐಎಂಐಎಂ | ಅಸಾದುದ್ದೀನ್ ಓವೈಸಿ |
ಕನೌಜ್ | ಎಸ್ಪಿ | ಅಖಿಲೇಶ್ ಯಾದವ್ |
ನಾಸಿಕ್ | ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ | ಹೇಮಂತ್ ಗೋಡ್ಸೆ |
ಫಲೋಡಿ ಸಟ್ಟಾ ಮಾರುಕಟ್ಟೆ ಇತಿಹಾಸವೇನು?
ಚುನಾವಣಾ ಫಲಿತಾಂಶದ ಭವಿಷ್ಯವಾಣಿಗಾಗಿ ರಾಜಸ್ಥಾನ ಮೂಲಕ ಫಲೋಡಿ ಸಟ್ಟಾ ಬಜಾರ್‌ನತ್ತ ಎಲ್ಲರೂ ಮುಖಮಾಡಿದ್ದಾರೆ. ಫಲೋಡಿ ಸಟ್ಟಾ ಮಾರುಕಟ್ಟೆಯು ಶತಮಾನಗಳ ಇತಿಹಾಸ ಹೊಂದಿದೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್, ಐಪಿಎಲ್ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.
ಇದನ್ನೂ ಓದಿ: PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ