Site icon Vistara News

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Lok Sabha Election

ತಿರುವನಂತಪುರಂ: ಲೋಕಸಭಾ ಚುನಾವಣೆ (Lok Sabha Election)ಯ ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್‌ 19) ನಡೆದಿದೆ. ಎರಡನೇ ಹಂತದಲ್ಲಿ ಕರ್ನಾಟಕ, ಕೇರಳ ಸೇರಿ ಹಲವೆಡೆ ಏಪ್ರಿಲ್‌ 26ರಂದು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಮಧ್ಯೆ ಮತದಾನಕ್ಕೆ ಕೇವಲ 6 ದಿನಗಳು ಬಾಕಿ ಇರುವಂತೆ ಮಾದರಿ ನೀತಿ ಸಂಹಿತೆ (Model code of conduct) ಉಲ್ಲಂಘನೆಗೆ ಸಂಬಂಧಿಸಿ ಕೇರಳದಲ್ಲಿ ಬರೋಬ್ಬರಿ 2,09,661 ದೂರು ದಾಖಲಾಗಿದೆ. ಈ ಪೈಕಿ 2,06,152 ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ (Chief Electoral Officer) ಸಂಜಯ್ ಕೌಲ್ (Sanjay Kaul) ಶನಿವಾರ ತಿಳಿಸಿದ್ದಾರೆ.

ಚುನಾವಣಾ ಆಯೋಗ ಸ್ಥಾಪಿಸಿದ ಸಿವಿಜಿಲ್ (cVIGIL) ಮೊಬೈಲ್ ಅಪ್ಲಿಕೇಶನ್ ಮೂಲಕ ಈ ದೂರುಗಳನ್ನು ಸ್ವೀಕರಿಸಲಾಗಿದೆ. ಮಾರ್ಚ್ 16ರಿಂದ ಏಪ್ರಿಲ್ 20ರವರೆಗೆ ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು ಪ್ರಸ್ತುತ 426 ದೂರುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೌಲ್ ಹೇಳಿದ್ದಾರೆ.

ಪ್ರಮುಖ ದೂರುಗಳಿವು

ಸಿವಿಜಿಲ್ ಮೂಲಕ ಸ್ವೀಕರಿಸಿದ ಹೆಚ್ಚಿನ ದೂರುಗಳು ಅನಧಿಕೃತ ಪೋಸ್ಟರ್‌, ಬ್ಯಾನರ್, ಬೋರ್ಡ್‌, ಗೋಡೆ ಬರಹಗಳು, ಕಡ್ಡಾಯ ಮಾಹಿತಿಯಿಲ್ಲದ ಪೋಸ್ಟರ್‌, ಆಸ್ತಿಗೆ ಹಾನಿ, ಅನಧಿಕೃತ ಆರ್ಥಿಕ ವಹಿವಾಟುಗಳು, ಅನುಮತಿಯಿಲ್ಲದೆ ವಾಹನಗಳ ಬಳಕೆ, ಮದ್ಯ ವಿತರಣೆ, ಉಡುಗೊರೆ, ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ದ್ವೇಷ ಭಾಷಣಗಳಿಗೆ ಸಂಬಂಧಿಸಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಈ ಪೈಕಿ ಸ್ವೀಕರಿಸಿದ ಒಟ್ಟು ದೂರುಗಳಲ್ಲಿ 3,083 ಆಧಾರರಹಿತವಾಗಿದ್ದರಿಂದ ಅವನ್ನು ತಳ್ಳಿ ಹಾಕಲಾಗಿದೆ ಎಂದು ಕೌಲ್ ವಿವರಿಸಿದ್ದಾರೆ.

ಸಿವಿಜಿಲ್ (Citizens Vigil) ಮೊಬೈಲ್‌ ಅಪ್ಲಿಕೇಶನ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟ ಸಾರ್ವಜನಿಕರು ದೂರುಗಳನ್ನು ದಾಖಲಿಸಹುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಕೌಲ್ ತಿಳಿಸಿದ್ದಾರೆ. ಹೀಗೆ ಆ್ಯಪ್ ಮೂಲಕ ಕಳುಹಿಸಲಾದ ದೂರುಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗುವುದೂ ಎಂದು ಅವರು ತಿಳಿಸಿದ್ದಾರೆ.

ಕಣ್ಣೂರಿನ ವೃದ್ಧರೊಬ್ಬರ ಮನೆಯಲ್ಲಿ ಮತದಾನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮತಗಟ್ಟೆ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಸಂಜಯ್ ಕೌಲ್ ಹೇಳಿದ್ದಾರೆ. ಈ ಬಾರಿ ಚುನಾವಣಾ ಆಯೋಗ ಕೆಲ ವೃದ್ಧ, ಅಸಕ್ತ, ನಡೆಯಲು ಬಾರದ ಮತದಾರರಿಗೆ ಮನೆಯಿಂದಲೇ ವೋಟು ಹಾಕುವ ಅವಕಾಶವನ್ನು ಕಲ್ಪಿಸಿದೆ. ಈ ವೋಟ್‌ ಪ್ರಮ್ ಹೋಮ್‌ ವೇಳೆ ಕಣ್ಣೂರಿನ ಮನೆಯೊಂದರಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿತ್ತು. ಅವರನ್ನು ಅಮಾನತು ಮಾಡಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಶುಕ್ರವಾರ ನಡೆದ ಮೊದಲ ಹಂತದ ಮತದಾನ ಶೇ. 60ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Exit mobile version