Site icon Vistara News

Lok Sabha Election Results 2024: ಎರಡೂ ಕಡೆಗಳಲ್ಲಿ ರಾಹುಲ್‌ ಗಾಂಧಿಗೆ ಭರ್ಜರಿ ಮುನ್ನಡೆ

Lok Sabha Election Results 2024

Lok Sabha Election Results 2024

ನವದೆಹಲಿ: ಕಾಂಗ್ರೆಸ್‌ನ ಲೆಕ್ಕಾಚಾರ ವರ್ಕೌಟ್‌ ಆಗಿದ್ದು, ಎರಡೂ ಕಡೆಗಳಲ್ಲಿ ರಾಹುಲ್‌ ಗಾಂಧಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ರಾಹುಲ್‌ ಗಾಂಧಿ (Rahul Gandhi) ಎರಡೂ ಕಡೆ ಮುನ್ನಡೆ ಸಾಧಿಸಿದ್ದಾರೆ (Lok Sabha Election Result).

ವಯನಾಡು, ರಾಯ್‌ಬರೇಲಿಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಮುನ್ನಡೆ

ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಸದ್ಯ ಬರೋಬ್ಬರಿ 1 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ ರಾಹುಲ್ ಗಾಂಧಿ ಎರಡನೇ ಬಾರಿ ಇಲ್ಲಿಂದ ಕಣಕ್ಕೆ ಇಳಿದಿದ್ದಾರೆ. ಇನ್ನು ರಾಯ್‌ಬರೇಲಿಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದು, ಎರಡೂ ಕಡೆ ಗೆಲುವು ಸಾಧಿಸುವ ನಿರೀಕ್ಷೆ ಇದೆ. ವಯನಾಡಿನಲ್ಲಿ ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. 

ವಯನಾಡಿನ ಜತೆಗೆ ರಾಹುಲ್‌ ಗಾಂಧಿ ಅವರು ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್‌ ಬರೇಲಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್‌ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈ ಪಡೆ ರಾಹುಲ್‌ ಗಾಂಧಿ ಅವರನ್ನು ಕಣ್ಕಗಕ್ಕಿಳಿಸಿತ್ತು. ಸದ್ಯ ಈ ಲೆಕ್ಕಾಚಾರ ಕೈ ಹಿಡಿಯುವ ಲಕ್ಷಣ ಕಂಡು ಬಂದಿದೆ.

ಬಿಜೆಪಿಯ ದಿನೇಶ್‌ ಪ್ರತಾಪ್‌ ಸಿಂಗ್‌ ಸವಾಲು

ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋಲನುಭವಿಸಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌ ಅವರಿಗೆ ಬಿಜೆಪಿ ಮತ್ತೆ ಟಿಕೆಟ್‌ ನೀಡಿತ್ತು. 2004ರಲ್ಲಿ ಸಮಾಜವಾದಿ ಪಕ್ಷದ ತಾಲೂಕು ಮಟ್ಟದ ನಾಯರಾಗಿದ್ದ ದಿನೇಶ್‌ ಪ್ರತಾಪ್‌ ನಂತರ ದಿನಗಳಲ್ಲಿ ಬಹುಜನ ಸಮಾಜ ಪಾರ್ಟಿ(BSP)ಯಿಂದ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು. 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದು ಅವರ ರಾಜಕೀಯ ಬದುಕಿನ ಬಹುದೊಡ್ಡ ತಿರುವಾಗಿತ್ತು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರೂ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಗಳಿಸಿದ್ದರು. ಅವರು ಆ ಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ರಾಯ್‌ಬರೇಲಿಯಲ್ಲಿ ಬಿಎಸ್‌ಪಿಯಿಂದ ಠಾಕೂರ್‌ ಪ್ರಸಾದ್‌ ಯಾದವ್‌ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: Election Results 2024: “ಜನ ಹೃದಯವನ್ನೂ ನನಗೆ ಕೊಟ್ಟಿದ್ದಾರೆ…” 1 ಲಕ್ಷ ಮತಗಳ ಅಂತರದಿಂದ ಡಾ. ಮಂಜುನಾಥ್ ಗೆಲುವಿನತ್ತ

ರಾಯ್‌ಬರೇಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತದೆ. ಈ ಬಾರಿ ಮತ್ತೆ ಇದು ಸಾಬೀತಾಗುವ ಸಾಧ್ಯತೆ ಇದೆ. ಇಲ್ಲಿ ಸೋನಿಯಾ ಗಾಂಧಿ 2004ರಿಂದ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 

Exit mobile version