Site icon Vistara News

Lok Sabha Election: ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಪಕ್ಷ ತೊರೆದ ಇಬ್ಬರು ನಾಯಕರು

tmc leader

tmc leader

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಗೆ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ (Trinamool Congress)ಗೆ ಬಹು ದೊಡ್ಡ ಆಘಾತ ಎದುರಾಗಿದೆ. ಟಿಎಂಸಿಯ ಇಬ್ಬರು ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಬರಾಕ್ಪುರವನ್ನು ಪ್ರತಿನಿಧಿಸುತ್ತಿರುವ ಅರ್ಜುನ್ ಸಿಂಗ್ ಮತ್ತು ತಮ್ಲುಕ್ ಕ್ಷೇತ್ರದ ಸಂಸದ ದಿಬ್ಯೇಂದು ಅಧಿಕಾರಿ ಶುಕ್ರವಾರ ದೆಹಲಿಯಲ್ಲಿ ಬಿಜೆಪಿಗೆ ಸೇಪರ್ಡೆಗೊಂಡರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಮತ್ತು ಪಶ್ಚಿಮ ಬಂಗಾಳದ ಸಹ ಉಸ್ತುವಾರಿ ಅಮಿತ್ ಮಾಳವೀಯ ಅವರ ಸಮ್ಮುಖದಲ್ಲಿ ಈ ಇಬ್ಬರು ಸಂಸದರು ಬಿಜೆಪಿಗೆ ಸೇಪರ್ಡೆಗೊಂಡರು. ಇತ್ತೀಚೆಗೆ ಟಿಎಂಸಿ ಬಿಡುಗಡೆ ಮಾಡಿದ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಅರ್ಜುನ್ ಸಿಂಗ್ ಅವರ ಹೆಸರಿರಲಿಲ್ಲ. ಇದರಿಂದ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಇನ್ನು ದಿಬ್ಯೇಂದು ಅಧಿಕಾರಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಸಹೋದರ.

ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ದಿಬ್ಯೇಂದು ಅಧಿಕಾರಿ, ʼʼಇಂದು ನನಗೆ ವಿಶೇಷ ದಿನ. ಯಾಕೆಂದರೆ ನಾನು ಬಿಜೆಪಿಯ ಕುಟುಂಬಕ್ಕೆ ಸೇರುತ್ತಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ನನಗೆ ಸ್ಫೂರ್ತಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆʼʼ ಎಂದು ಹೇಳಿದ್ದಾರೆ.

ವಿಶೇಷ ಎಂದರೆ ಅರ್ಜುನ್ ಸಿಂಗ್ ಟಿಎಂಸಿ ತೊರೆದು 2019ರಲ್ಲಿ ಬಿಜೆಪಿಗೆ ಸೇರಿದ್ದರು. 2022ರಲ್ಲಿ ಮತ್ತೆ ಟಿಎಂಸಿಗೆ ಮರಳಿದ್ದರು. ಇದೀಗ ಮರಳಿ ಗೂಡಿಗೆ ಎಂಬಂತೆ ಕೇಸರಿ ಪಕ್ಷಕ್ಕೆ ಹಾರಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರ ರಾಜಕೀಯ ಹಿಂಸಾಚಾರ ನಡೆದ ರೀತಿಯಿಂದ ಬೇಸತ್ತಿದ್ದೇನೆ. ಗಲಭೆಯಿಂದ ನಮ್ಮ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ನಾನು ನನ್ನ ಮೇಲಿನ ದೌರ್ಜನ್ಯವನ್ನು ಸಹಿಸುತ್ತಿದ್ದೆ. ಆದರೆ ಕಾರ್ಯಕರ್ತರನ್ನು ಉಳಿಸಲು, ನಾನು ಕೆಲವು ದಿನಗಳವರೆಗೆ ಬಿಜೆಪಿ ಸ್ವಲ್ಪ ದೂರವಿರಬೇಕಾಯಿತು” ಎಂದು ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಟಿಎಂಸಿ ತೊರೆದಿದ್ದ ಪಸ್​ ರಾಯ್

ಕೆಲವು ದಿನಗಳ ಹಿಂದೆ ಟಿಎಂಸಿ ಹಿರಿಯ ನಾಯಕ, ಶಾಸಕ ತಪಸ್​ ರಾಯ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. “ಪಕ್ಷದ ಕಾರ್ಯವೈಖರಿಯಿಂದ ನನಗೆ ನಿಜವಾಗಿಯೂ ನಿರಾಶೆಯಾಗಿದೆ. ಪಕ್ಷ ಮತ್ತು ಸರ್ಕಾರದ ವಿರುದ್ಧ ಕೇಳಿಬಂದ ಅನೇಕ ಭ್ರಷ್ಟಾಚಾರದ ಆರೋಪಗಳಿಂದ ಬೇಸತ್ತಿದ್ದೇನೆ. ಅಲ್ಲದೆ ಸಂದೇಶ್‌ಖಾಲಿ ಹಿಂಸಾಚಾರವನ್ನು ಪಕ್ಷ ಭಾಯಿಸಿದ ರೀತಿಯೂ ನನಗೆ ಸರಿ ಕಂಡಿಲ್ಲʼʼ ಎಂದು ಅವರು ರಾಜೀನಾಮೆಯ ಕಾರಣವನ್ನು ವಿವರಿಸಿದ್ದರು. ಈ ಹಿಂದೆಯೂ ಅವರು ಸಂದೇಶ್‌ಖಾಲಿ ಪ್ರಕರಣದಲ್ಲಿ ಪಕ್ಷವನ್ನು ಟೀಕಿಸಿದ್ದರು. ಇದೀಗ ಮತ್ತಿಬ್ಬರು ನಾಯಕರು ಪಕ್ಷ ತೊರೆದಿರುವುದು ಟಿಎಂಸಿಗೆ ಬಹುದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: Lok Sabha Election: ಬಿಜೆಪಿ 411 ಪ್ಲಸ್‌; ಬಂಗಾಳ, ತೆಲಂಗಾಣದಲ್ಲಿ ಬಂಪರ್!

ನಾಳೆ ವೇಳಾಪಟ್ಟಿ ಪ್ರಕಟ

ನಾಳೆ (ಮಾರ್ಚ್ 16ರಂದು) ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗುವುದು. ಘೋಷಣೆ ಮಾಡಿದ ಕೂಡಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version