Site icon Vistara News

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

Narendra Modi Election Live

Narendra Modi Speech After Lok Sabha Election Result 2024

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election) 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸೇರಿ ಹಲವು ಮುಖಂಡರು ಏಳನೇ ಹಂತದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಾರಾಣಸಿ ಕ್ಷೇತ್ರದಿಂದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2014ರಿಂದ ಅವರು ಇಲ್ಲಿಂದ ಸ್ಪರ್ಧಿಸುತ್ತಿದ್ದು, ಸದ್ಯ ಈ ಕಣ ದೇಶದ ಗಮನ ಸೆಳೆದಿದೆ.

ಮೋದಿ ವಿರುದ್ಧ ಈ ಬಾರಿ ಆರು ಮಂದಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ ಅಜಯ್ ರಾಯ್ ಅವರನ್ನು ಮೂರನೇ ಬಾರಿಗೆ ಕಣಕ್ಕಿಳಿಸಿದೆ. ಇನ್ನು ಯುಗ ತುಳಸಿ ಪಾರ್ಟಿಯಿಂದ ಕೋಳಿಶೆಟ್ಟಿ ಶಿವಕುಮಾರ್, ಬಹುಜನ ಸಮಾಜ ಪಕ್ಷದಿಂದ ಅಥೆರ್‌ ಜಮಾಲ್‌ ಲಾರಿ, ಗಗನ್‌ ಪ್ರಕಾಶ್‌ ಯಾದವ್‌ (ಅಪ್ನಾ ದಳ, ಕಮರೇವಾಡಿ), ಸ್ವತಂತ್ರವಾಗಿ ದಿನೇಶ್‌ ಕುಮಾರ್‌ ಯಾದವ್‌ ಮತ್ತು ಸಂಜಯ್‌ ಕುಮಾರ್‌ ತಿವಾರಿ ಪ್ರಧಾನಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅವರ ಕುರಿತಾದ ವಿವರ ಇಲ್ಲಿದೆ.

ಅಜಯ್‌ ರಾಯ್

53 ವರ್ಷದ ಕಾಂಗ್ರೆಸ್‌ ನಾಯಕ ಅಜಯ್‌ ರಾಯ್ ಸತತ ಮೂರನೇ ಬಾರಿ ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ. ಇವರು 2014 ಮತ್ತು 2019ರಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅಜಯ್‌ ರಾಯ್ ವಿರುದ್ಧ ಸುಮಾರು 18 ಪ್ರಕರಣಗಳು ದಾಖಲಾಗಿವೆ. ಇವರು ಆರಂಭದಲ್ಲಿ ಆರ್‌ಎಸ್‌ಎಸ್‌, ಎಬಿವಿಪಿ ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. 1996, 2002 ಮತ್ತು 2007ರಲ್ಲಿ ಇವರು ಬಿಜೆಪಿಯಿಂದ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. 2009ರಲ್ಲಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಅಜಯ್‌ ರಾಯ್ 6.66 ಲಕ್ಷ ರೂ.ಗಳ ಚರಾಸ್ತಿ ಮತ್ತು 1.25 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇವರನ್ನು ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಅಥೆರ್‌ ಜಮಾಲ್‌ ಲಾರಿ

ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ 70 ವರ್ಷದ ಅಥೆರ್‌ ಜಮಾಲ್‌ ಲಾರಿ ವಿರುದ್ಧವೂ ಪ್ರಕರಣವಿದೆ. ಅವರ ಹೆಸರಿನಲ್ಲಿ 1 ಪ್ರಕರಣ ದಾಖಲಾಗಿದೆ.

ಕೋಳಿಶೆಟ್ಟಿ ಶಿವಕುಮಾರ್‌

46 ವರ್ಷದ ಕೋಳಿಶೆಟ್ಟಿ ಶಿವಕುಮಾರ್‌ ಹೈದರಾಬಾದ್‌ ಮೂಲದವರು. ಈ ಹಿಂದೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಇವರು ಈ ಮೊದಲು ತಿರುಮಲ ತಿರುಪತಿ ದೇವಸ್ಥಾನಂ ಮೋರ್ಡ್‌ ಸದಸ್ಯರಾಗಿದ್ದರು.

ಗಗನ್‌ ಪ್ರಕಾಶ್‌ ಯಾದವ್‌

ಅಪ್ನಾ ದಳದಿಂದ ಕಣಕ್ಕಿಳಿದಿರುವ 39 ವರ್ಷದ ಗಗನ್‌ ಪ್ರಕಾಶ್‌ ಯಾದವ್‌ ಅವರ ಹೆಸರಿನಲ್ಲಿ 5 ಪ್ರಕರಣ ದಾಖಲಾಗಿದೆ. ಈ ಹಿಂದೆ ಇವರು ಸಮಾಜವಾದಿ ಪಾರ್ಟಿಯಲ್ಲಿದ್ದರು.

ದಿನೇಶ್‌ ಕುಮಾರ್‌ ಯಾದವ್‌

ಸತಂತ್ರ ಅಭ್ಯರ್ಥಿ ದಿನೇಶ್‌ ಕುಮಾರ್‌ ಯಾದವ್‌ ಈ ಹಿಂದೆ ಬಿಜೆಪಿಯಲ್ಲಿದ್ದರು. ಇವರ ವಿರುದ್ಧ ಯಾವುದೇ ಕೇಸ್‌ಗಳಿಲ್ಲ.

ಸಂಜಯ್‌ ಕುಮಾರ್‌ ತಿವಾರಿ

ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ ಇವರು. ಇವರು ದೆಹಲಿ ಮೂಲದ ಸಾಮಾಜಿಕ ಕಾರ್ಯಕರ್ತರು. ಇವರು ಗಾಂಧಿ ತತ್ವದ ಪ್ರತಿಪಾದಕರು.

ದಾಖಲೆಯ ಗೆಲುವು ಕಂಡಿದ್ದ ಮೋದಿ

ಮೋದಿ ಈ ಹಿಂದೆ ಎರಡು ಬಾರಿಯೂ ವಾರಾಣಸಿ ಕ್ಷೇತ್ರದಲ್ಲಿ ದಾಖಲೆಯ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. 2014ರ ಚುನಾವಣೆಯಲ್ಲಿ ಮೋದಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸ್ಪರ್ಧಿಸಿದ್ದರು. ಆಗ ಮೋದಿ 3.37 ಲಕ್ಷ ಮತಗಳ ಅಂತರಿಂದ ಗೆದ್ದಿದ್ದರು. ಇನ್ನು 2019ರಲ್ಲಿ ಮೋದಿ ಅವರು ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಶಾಲಿನಿ ಯಾದವ್‌ ಅವರನ್ನು 4.80 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

Exit mobile version