Site icon Vistara News

Lok Sabha Election 2024: ಗೌಡರ ಅಳಿಯನೇ ಜೆಡಿಎಸ್‌ ಬಿಟ್ಟಿದ್ದಾರೆ; ಕಾಂಗ್ರೆಸ್‌ ಸೇರಲು ದಳ ಕಾರ್ಯಕರ್ತರಿಗೆ ಡಿಕೆಸು ಆಹ್ವಾನ!

Lok Sabha Elections 2024 DK Suresh invites JDS workers to join Congress

ರಾಮನಗರ: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ಅಳಿಯ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರೇ ಜೆಡಿಎಸ್ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ಮುಂದಿನ ತೀರ್ಮಾನ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಸಂಸದ ಡಿ.ಕೆ. ಸುರೇಶ್ (DK Suresh) ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಡಾ. ಮಂಜುನಾಥ್ ಅವರು ರಾಜಕಾರಣಕ್ಕೆ ಬರುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಅವರು ದೇವೇಗೌಡರ ಕುಟುಂಬದವರು. ಇದು ನನ್ನ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಜಕಾರಣಕ್ಕೆ ಹೊಸತೇನಲ್ಲ. ಹೀಗಾಗಿ ನಿಮ್ಮ (ಮಾಧ್ಯಮಗಳ) ನೇತೃತ್ವದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಮಂಜುನಾಥ್ ಅವರು ಮೃದು ಸ್ವಭಾವದವರು ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಯಾರು ಏನು ಚರ್ಚೆ ಮಾಡುತ್ತಿದ್ದಾರೆ ಎಂಬುದು ನನಗೆ ಮುಖ್ಯವಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿಯಿಲ್ಲ ಎಂದು ಅವರ ಅಳಿಯ ತೀರ್ಮಾನ ಮಾಡಿರುವುದರ ಬಗ್ಗೆ ಜನತಾದಳದ ಕಾರ್ಯಕರ್ತರು ಚಿಂತನೆ ಮಾಡಬೇಕು. ದೇವೇಗೌಡರ ಬುದ್ಧಿವಂತ ಅಳಿಯನವರೇ ಬೇರೆ ಪಕ್ಷ ಆಯ್ಕೆ ಮಾಡಿಕೊಂಡ ನಂತರ ಅವರ ಕಾರ್ಯಕರ್ತರು ಉಳಿದ ವಿಚಾರ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.

ದೇವೇಗೌಡರು ಕಟ್ಟಿದ ಪಕ್ಷಕ್ಕೆ ಈಗ ಜನಪ್ರಿಯತೆ ಇಲ್ಲ

ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ನನಗೆ ಆ ಬಗ್ಗೆ ಗೊತ್ತಿಲ್ಲ. ಇದೆಲ್ಲವನ್ನು ಈಗ ಅವರ ಅಳಿಯನವರೇ ಹೇಳುತ್ತಿದ್ದಾರೆ. ದೇವೇಗೌಡರ ಅಳಿಯನವರು ಚುನಾವಣೆ ಕಣದಲ್ಲಿದ್ದಾರೆ. ದೇವೇಗೌಡರ ಸಲಹೆ ಏನಿದೆಯೋ ಗೊತ್ತಿಲ್ಲ. ಆದರೆ, ದೇವೇಗೌಡರು ಕಟ್ಟಿದ ಪಕ್ಷಕ್ಕೆ ಈಗ ಜನಪ್ರಿಯತೆ ಇಲ್ಲ ಎಂಬುದನ್ನು ಅವರ ಕುಟುಂಬದ ಹಿರಿಯ ಸದಸ್ಯರೇ ಸ್ಪಷ್ಟಪಡಿಸುತ್ತಿದ್ದಾರೆ” ಎಂದು ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರು ಏನು ಮಾಡಬೇಕು ಎಂದು ಕೇಳಿದಾಗ, “ಆ ಪಕ್ಷ ಇಲ್ಲವೆಂದು ದೇವೇಗೌಡರ ಅಳಿಯನವರೇ ನಿರ್ಧರಿಸಿರುವಾಗ ಉಳಿದ ವಿಚಾರವನ್ನು ನೀವೇ ಮುಂದುವರಿಸಬೇಕು” ಎಂದರು.

ಕನಕಪುರದ ಕಿರಾತಕರಿಗೆ ಪಾಠ ಕಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ನಾಮಪತ್ರ ಸಲ್ಲಿಸಿದ ನಂತರ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.

ಸುರೇಶ್ ಅವರನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ಭಯವಿದೇಯೇ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪಕ್ಷ ಹಾಗೂ ಅವರ ನಾಯಕತ್ವಕ್ಕೆ ಅಸ್ತಿತ್ವವಿಲ್ಲ ಎಂದು ಅವರದೇ ಕುಟುಂಬದವರು ಹೇಳುತ್ತಿದ್ದಾರೆ ಅಷ್ಟೇ ” ಎಂದರು.

ಜೆಡಿಎಸ್‌ ಕಾರ್ಯಕರ್ತರಿಗೆ ಮುಕ್ತ ಆಹ್ವಾನ

ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ನೀವು ಆಹ್ವಾನ ನೀಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಜೆಡಿಎಸ್ ನಾಯಕರ ಕುಟುಂಬ ಸದಸ್ಯರೇ ಬೇರೆ ಪಕ್ಷದ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸುತ್ತಿರುವಾಗ, ಜೆಡಿಎಸ್ ಕಾರ್ಯಕರ್ತರು ಏನು ಮಾಡಬೇಕು? ನಾನು ಮಾಧ್ಯಮಗಳ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತೇನೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಗ. ನಿಮ್ಮ ಸಹೋದರನಾಗಿ ಈ ಜಿಲ್ಲೆ ಹಾಗೂ ಇಲ್ಲಿನ ತಾಲೂಕುಗಳ, ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ನೀವೆಲ್ಲರೂ ಪಕ್ಷಭೇದ ಮರೆತು ಬನ್ನಿ ಎಂದು ತುಂಬು ಹೃದಯದಿಂದ ಕರೆಯುತ್ತೇನೆ” ಎಂದರು.

ಕುಟುಂಬ ರಾಜಕಾರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನೀವು ಹೇಗೆ ನಿಮ್ಮ ಅಭಿಪ್ರಾಯದ ಮೇಲೆ ನನಗೆ ಪ್ರಶ್ನೆ ಕೇಳುತ್ತಿದ್ದೀರೋ ಅದೇ ರೀತಿ ಅವರವರು ತಮ್ಮ ಅಭಿಪ್ರಾಯದ ಮೇರೆಗೆ ಚರ್ಚೆ ಮಾಡುತ್ತಿರಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ. ಅದಕ್ಕೆ ನಾನು ಉತ್ತರ ನೀಡಲು ಆಗುವುದಿಲ್ಲ” ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆಯನ್ನು ತಳಮಟ್ಟದಲ್ಲಿ ಕಾರ್ಯಕರ್ತರೇ ಒಪ್ಪುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ನನಗೆ ಆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿರುವ ವಿಚಾರ ಒಂದೇ. ಅದು ನಾನು ಮಾಡಿರುವ ಕೆಲಸಕ್ಕೆ ಜನರ ಬಳಿ ಕೂಲಿ ಕೇಳುವುದು” ಎಂದರು.

ಮಂಜುನಾಥ್ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಅವರು ಹರಕೆಯೋ, ಕುರಿಯೋ ನನಗೆ ಗೊತ್ತಿಲ್ಲ. ತಿಳಿವಳಿಕಸ್ಥರನ್ನೇ ಕೇಳಿ” ಎಂದರು.

ಮಂಜುನಾಥ್ ಅವರ ಸ್ಪರ್ಧೆ ಬಗ್ಗೆ ಜನರಲ್ಲಿ ಅಭಿಪ್ರಾಯ ಹೇಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ನನಗೆ ದೇವೇಗೌಡರ ಅಳಿಯ ಎಂದಷ್ಟೇ ಗೊತ್ತಿತ್ತು. ಈಗ ಅವರು ಮೈತ್ರಿ ಅಭ್ಯರ್ಥಿಯಾಗಿ ಗೊತ್ತಾಗಿದ್ದಾರೆ. ಅವರು ರಾಜಕಾರಣಕ್ಕೆ ಬಂದಿದ್ದಾರೆ, ಹೀಗಾಗಿ ಅವರನ್ನು ಸ್ವಾಗತಿಸಿದ್ದೇನೆ” ಎಂದರು.

ಇನ್ನು ಯಾರ ಕಥೆ ಏನಾಗಲಿದೆಯೋ ಗೊತ್ತಿಲ್ಲ

ಹಾಸನದಿಂದ ನಿಮ್ಮನ್ನು ಸೋಲಿಸಲು ಬರುತ್ತಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಎಲ್ಲವನ್ನು ಒಂದೇ ದಿನ ಚರ್ಚೆ ಮಾಡುವುದು ಬೇಡ. ಈಗಷ್ಟೇ ನನಗೆ ಟಿಕೆಟ್ ಸಿಕ್ಕಿದೆ. ಈಗ ಬಿಜೆಪಿಯಲ್ಲಿ ಪ್ರತಾಪ್ ಸಿಂಹ, ಕಟೀಲ್ ಅವರಂತಹ ಪಕ್ಷ ಕಟ್ಟಿದವರಿಗೆ ಕೈ ಕೊಡಲಾಗಿದೆ. ನನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದವರು ಈಗ ಬಂಡಾಯ ಎನ್ನುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೊರಟವರ ಕಥೆ ಏನಾಯ್ತೋ ಗೊತ್ತಿಲ್ಲ. ಇನ್ನು ಯಾರ ಕಥೆ ಏನಾಗಲಿದೆಯೋ ಗೊತ್ತಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ದೇವೇಗೌಡರ ಪಾರ್ಟಿ ಸರಿ ಇಲ್ಲವೆಂದು ತೀರ್ಮಾನಿಸಿದ ಬುದ್ಧಿವಂತ ಅಳಿಯ: ಡಿ.ಕೆ. ಸುರೇಶ್

ಪ್ರತಾಪ್‌ ಜತೆ ಸಲಹೆ, ಸಹಕಾರ ಇದೆ

ಡಿಕೆಸು ಒಳ್ಳೆಯ ಕೆಲಸಗಾರ ಎಂದು ಪ್ರತಾಪ್ ಸಿಂಹ ಹೊಗಳುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್‌, “ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ರಸ್ತೆ ಮಾಡುವ ವಿಚಾರದಲ್ಲಿ ನಾನು, ಅವರು ಜತೆಗೂಡಿ ಕೆಲಸ ಮಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವಾಗ ನನಗೆ ಅವರು, ಅವರಿಗೆ ನಾನು ಸಲಹೆ ಮತ್ತು ಸಹಕಾರ ನೀಡಿದ್ದೇವೆ. ಹೀಗಾಗಿ ನಮ್ಮ ನಡುವೆ ವಿಶ್ವಾಸವಿದೆ. ವಿಶ್ವಾಸ ಬೇರೆ, ಪಕ್ಷ ಬೇರೆ. ರಾಜಕಾರಣ ಬಂದಾಗ ಬೇರೆ” ಎಂದು ತಿಳಿಸಿದರು.

Exit mobile version