ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಈಗಾಗಲೇ ಮೊದಲ ಪಟ್ಟಿಯನ್ನು ಸಹ ಬಿಜೆಪಿ ಪ್ರಕಟ ಮಾಡಿದೆ. ಆ ಮೂಲಕ ಇತರ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಈಗ ಎರಡನೇ ಪಟ್ಟಿ ಬಿಡುಗಡೆಗೂ ಸಿದ್ಧತೆ ಮಾಡಿಕೊಂಡಿದ್ದು, ಕರ್ನಾಟಕದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕ ಸಭೆ ನಡೆದಿದ್ದು, ಈ ನಡುವೆ ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೊಡಬೇಕೋ? ಬೇಡವೋ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.
ಈಗ ಕೆಲ ಹಾಲಿ ಸಂಸದರ ಬದಲಾವಣೆ ಭವಿಷ್ಯ ಬಿಜೆಪಿ ಹೈ ಕಮಾಂಡ್ ಕೈಯಲ್ಲಿದೆ. ಬುಧವಾರ ನವ ದೆಹಲಿಯಲ್ಲಿ 5 ಗಂಟೆಗಳ ಕಾಲ ಸಭೆ ನಡೆಸಿದರೂ ಕೆಲವು ಹಾಲಿ ಸಂಸದರ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರು ತುಟಿ ಬಿಚ್ಚಲಿಲ್ಲ ಎಂದು ತಿಳಿದು ಬಂದಿದೆ. ಹಾಲಿ ಸಂಸದರ ಬಗ್ಗೆ ಈಗಾಗಲೇ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.
ಅಭಿಪ್ರಾಯವನ್ನು ಮಾತ್ರ ಹೇಳಿ!
ಕರ್ನಾಟಕ ಬಿಜೆಪಿ ನಾಯಕರ ಜತೆ ನಡೆದ ಸಭೆಯಲ್ಲಿ ಎಲ್ಲ ಕ್ಷೇತ್ರದ ಹಾಲಿ ಸಂಸದರ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯವನ್ನು ಮಾತ್ರ ಪಡೆಯಲಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಹೇಳಿ, ತೀರ್ಮಾನವನ್ನು ನಾವು ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯ ನಾಯಕರು ಹಾಲಿ ಸಂಸದರ ಬಗ್ಗೆ ತಮ್ಮ ವರದಿಯನ್ನು ಒಪ್ಪಿಸಿ ಬಂದಿದ್ದಾರೆ. ಈ ವೇಳೆ ಸಂಸದರ ಪರ ಹಾಗೂ ವಿರೋಧಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ರಾಜ್ಯ ನಾಯಕರು ಹೇಳಿದ್ದಾರೆ. ಈ ಸಂಬಂಧ ಅಮಿತ್ ಶಾ ಸಹ ಮೂರು ರಿಪೋರ್ಟ್ ಅನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ವರದಿಗಳ ಆಧಾರದ ಮೇಲೆ ಮುಖ್ಯ ಚುನಾವಣಾ ಸಮಿತಿ (CEC) ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.
ಹಾಲಿ ಸಂಸದರ ವಿರೋಧದ ಬಗ್ಗೆ ಏನು ಚರ್ಚೆ?
ಸಭೆಯಲ್ಲಿ ಮೂರು ವರದಿಗಳನ್ನು ಇಟ್ಟುಕೊಂಡಿರುವ ಅಮಿತ್ ಶಾ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪಕ್ಷ ನಡೆಸಿರುವ ಸರ್ವೆ, ಅಮಿತ್ ಶಾ ನಡೆಸಿರುವ ಸರ್ವೆ ಹಾಗೂ ರಾಜ್ಯ ನಾಯಕರ ಅಭಿಪ್ರಾಯ ವರದಿಯನ್ನಿಟ್ಟುಕೊಂಡು ಪಾಸಿಟಿವ್ ಮತ್ತು ನೆಗೆಟಿವ್ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಇವರನ್ನು ಮುಂದುವರಿಸಿದರೆ ಚುನಾವಣೆ ಮೇಲೆ ಆಗುವ ಪರಿಣಾಮ ಏನು? ಗೆಲುವು ಸಾಧ್ಯವೇ? ಈಗ ಇರುವ ವಿರೋಧ ಯಾರದ್ದು? ಕಾರ್ಯಕರ್ತರ ನಡುವಿನ ವಿರೋಧವೇ? ಶಾಸಕರ ವಿರೋಧವೇ? ಜನಸಾಮಾನ್ಯರ ನಾಡಿಮಿಡಿತ ಹೇಗಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಐದು ಕ್ಷೇತ್ರಗಳ ಬಗ್ಗೆ ಹೆಚ್ಚು ಚರ್ಚೆ
ಸಭೆಯಲ್ಲಿ ಐದು ಕ್ಷೇತ್ರಗಳ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಬೀದರ್, ಬೆಳಗಾವಿ, ಹಾವೇರಿ, ದಾವಣಗೆರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಬಗ್ಗೆ ಫೋಕಸ್ ಮಾಡಲಾಗಿದೆ. ಈ ವೇಳೆ ಬೀದರ್ ಸಂಸದ ಕೇಂದ್ರ ಸಚಿವ ಭಗವಂತ್ ಖೂಬಾ ಬಗ್ಗೆ ತುಂಬಾ ವಿರೋಧ ಇರುವ ಬಗ್ಗೆ ಮಾತುಗಳು ಕೇಳಿಬಂದಿವೆ. ಕ್ಷೇತ್ರದ ಶಾಸಕರು, ನಾಯಕರಿಂದಲೇ ವಿರೋಧ ಇರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆ ಸಂದರ್ಭದಲ್ಲಿ ಎರಡನೇ ಆಯ್ಕೆ ಯಾರು ಎಂಬ ಬಗ್ಗೆ ಹೈಕಮಾಂಡ್ ಪ್ರಶ್ನೆ ಮಾಡಿದೆ. ಆಗ ಗುರುನಾಥ್ ಕೊಳ್ಳುರ್ ಹೆಸರು ಕೇಳಿಬಂದಿದೆ ಎನ್ನಲಾಗಿದೆ.
ಬೆಳಗಾವಿಗೆ ಶೆಟ್ಟರ್?
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಕಂಡಿದ್ದ ಮಂಗಳಾ ಅಂಗಡಿ ಅವರ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ. ಹೀಗಾಗಿ ಅವರ ಜಾಗಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ಆದರೆ, ಜಗದೀಶ್ ಶೆಟ್ಟರ್ ವಿಚಾರವನ್ನು ನಮಗೆ ಬಿಡಿ ಎಂದ ಹೈಕಮಾಂಡ್ ಹೇಳಿದೆ. ಹೀಗಾಗಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಕುತೂಹಲ ಮೂಡಿದೆ.
ಹಾವೇರಿಗೆ ಬೊಮ್ಮಾಯಿ ಹೆಸರು ಪ್ರಸ್ತಾಪ
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಈ ಬಾರಿ ಸ್ಪರ್ಧೆ ಮಾಡಲು ಆಸಕ್ತಿ ತೋರಿಲ್ಲ. ಅವರು ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರಿಂದ ಈಗ ಆ ಜಾಗಕ್ಕಾಗಿ ಪೈಪೋಟಿ ನಡೆದಿದೆ. ಈ ಜಾಗದ ಮೇಲೆ ಈಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣಿಟ್ಟಿದ್ದು, ಅವರ ಹೆಸರು ಪ್ರಸ್ತಾಪವಾಗಿದೆ.
ದಾವಣಗೆರೆ ಬಗ್ಗೆಯೂ ಚರ್ಚೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿ ಜಿ.ಎಂ. ಸಿದ್ದೇಶ್ವರ್ ಇದ್ದಾರೆ. ಆದರೆ, ಅವರನ್ನು ಬದಲಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪಟ್ಟು ಹಿಡಿದಿದ್ದಾರೆ. ಅವರ ವಿರುದ್ಧವಾಗಿ ಈಗಾಗಲೇ ಓಡಾಡುತ್ತಿದ್ದಾರೆ. ಇದೂ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸಿದ್ದೇಶ್ವರ್ ಅವರ ಬದಲಿಗೆ ಯಾರು ಅಭ್ಯರ್ಥಿಯಾಗಬಹುದು? ಎಂಬ ಬಗ್ಗೆ ಚರ್ಚೆ ನಡೆದಿದೆ.
ಚಿಕ್ಕಬಳ್ಳಾರಪುರಕ್ಕೆ ಯಾರು?
ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಗ್ಗೆ ಭಾರಿ ಚರ್ಚೆ ನಡೆದಿದೆ. ಈ ಕ್ಷೇತ್ರವನ್ನು ಜೆಡಿಎಸ್ ಸಹ ಕೇಳಿತ್ತು. ಆದರೆ, ಇನ್ನೂ ಮೈತ್ರಿ ಸೀಟು ಹಂಚಿಕೆ ಫೈನಲ್ ಆಗಿಲ್ಲ. ಆದರೆ, ಇಲ್ಲಿ ಬಹುತೇಕ ಬಿಜೆಪಿ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಮಾಜಿ ಸಚಿವ ಡಾ. ಸುಧಾಕರ್ ರೇಸ್‌ನಲ್ಲಿದ್ದಾರೆ. ಅವರು ಈಗಾಗಲೇ ಒಂದು ಸುತ್ತು ಕೇಂದ್ರ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಜತೆಗೆ ಅಲೋಕ್ ವಿಶ್ವಾನಾಥ್ ಹೆಸರು ಸಹ ಚರ್ಚೆಯಾಗಿದೆ.
ಬಿಎಸ್‌ವೈ ಹೇಳೋದೇನು?
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹೈಕಮಾಂಡ್ ನಾಯಕರ ಜತೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. 28 ಲೋಕಸಭಾ ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ, ಆದರೆ, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಇಂದು ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಾಗುತ್ತದೆ. ಇಂದು ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಮೈಸೂರು ಬಿಜೆಪಿ ಅಭ್ಯರ್ಥಿಯಾಗಿ ಒಡೆಯರ್? ಹೈಕಮಾಂಡ್ ಮಟ್ಟದಲ್ಲಿ ಭಾರಿ ಚರ್ಚೆ!
ಜೆಡಿಎಸ್‌ಗೆ 2ರಿಂದ 3 ಕ್ಷೇತ್ರ
ಹಲವು ಸಂಸದರಿಗೆ ಟಿಕೆಟ್ ಕೈತಪ್ಪಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್. ಯಡಿಯೂರಪ್ಪ, ಸದ್ಯ ಆ ರೀತಿಯಾಗಿ ಏನೂ ಇಲ್ಲ. ಜೆಡಿಎಸ್‌ಗೆ ಸೀಟು ಬಿಟ್ಟುಕೊಡುವ ವಿಚಾರದ ಬಗ್ಗೆಯೂ ಯಾವುದೇ ಚರ್ಚೆ ಆಗಿಲ್ಲ. ಎರಡರಿಂದ ಮೂರು ಕ್ಷೇತ್ರವನ್ನು ಬಿಟ್ಟು ಕೊಡಬಹುದು ಎಂದು ಹೇಳಿದರು.