Site icon Vistara News

Loksabha Election 2024: ಕೆ ಅಣ್ಣಾಮಲೈ ಗೆಲುವು ಸಾಧಿಸಬಹುದೆ? ಪ್ರಬಲ ಪೈಪೋಟಿಗೆ ಸಾಕ್ಷಿಯಾಗಲಿದೆ ಕೊಯಮತ್ತೂರು

Loksabha election-2024

ಕೊಯಮತ್ತೂರು: ಲೋಕಸಭಾ ಚುನಾವಣೆಯಲ್ಲಿ (Loksabha election 2024) ಈ ಬಾರಿ ದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ತಮಿಳುನಾಡಿನ (tamilnadu) ಎಲ್ಲಾ 39 ಸ್ಥಾನಗಳಿಗೆ ಏಪ್ರಿಲ್ 19ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಈ ಬಾರಿ ಇಲ್ಲಿ ಬಿಜೆಪಿ (BJP), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)ಯು ಡಿಎಂಕೆಗೆ (DMK) ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ತಮಿಳುನಾಡಿನ ಕೊಯಮತ್ತೂರು (coimbatore) ಕ್ಷೇತ್ರದಲ್ಲಿ ಡಿಎಂಕೆ ನಾಯಕ ಗಣಪತಿ ಪಿ. ರಾಜ್ ಕುಮಾರ್ (Ganapathy P. Raj Kumar) ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K. Annamalai), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ (Singhai Ramachandran) ಕಣಕ್ಕೆ ಇಳಿದಿದ್ದು, ಈ ಕ್ಷೇತ್ರ ಭಾರೀ ಪೈಪೋಟಿಗೆ ಸಾಕ್ಷಿಯಾಗಲಿದೆ.

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿದಿದ್ದರೂ ಗೆಲವು ಸಾಧಿಸಿಲ್ಲ. ಭಾರಿ ಮತಗಳ ಅಂತರದಿಂದ ಸೋಲು ಅನುಭವಿಸಿದೆ. ಆದರೆ ಈ ಬಾರಿ ಗೆಲುವಿನ ನಿರೀಕ್ಷೆ ಮೂಡಿಸಿರುವುದು ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಅಣ್ಣಾಮಲೈ. ಆದರೂ ಇಲ್ಲಿ ಗೆಲುವು ಅಷ್ಟು ಸುಲಭವೇನಲ್ಲ. ಯಾಕೆಂದರೆ ಡಿಎಂಕೆ, ಎಐಎಡಿಎಂಕೆಯಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಂದು ಪ್ರಹ್ಲಾದ್‌ ಜೋಶಿ, ಅಣ್ಣಾಸಾಹೇಬ್‌ ಜೊಲ್ಲೆ, ಗೀತಾ ಶಿವರಾಜ್‌ಕುಮಾರ್‌ ನಾಮಪತ್ರ

ಬಿಜೆಪಿಗೆ ಸತತ ಸೋಲು

2014 ಮತ್ತು 2019ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಕೊಯಮತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸತತ ಸೋಲು ಅನುಭವಿಸಿದ್ದರು.
2014ರಲ್ಲಿ ಎಐಎಡಿಎಂಕೆಯ ಪಿ. ನಾಗರಾಜನ್ ಅವರು ಸಿ.ಪಿ. ರಾಧಾಕೃಷ್ಣನ್ ಅವರನ್ನು ಸೋಲಿಸಿ 42,016 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

2019ರಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರ ವಿರುದ್ಧ ಕಣಕ್ಕೆ ಇಳಿದಿದ್ದ ಸಿಪಿಐ (ಎಂ) ಸಂಸದ ಪಿ.ಆರ್. ನಟರಾಜನ್ ಅವರು 1,79,143 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಸಿ.ಪಿ.ರಾಧಾಕೃಷ್ಣನ್ ಅವರು ಶೇ. 31.3. ಹಾಗೂ ಪಿ.ಆರ್.ನಟರಾಜನ್ ಶೇ.45.7ರಷ್ಟು ಮತಗಳನ್ನು ಪಡೆದಿದ್ದರು.


ಕೆ ಅಣ್ಣಾಮಲೈ ಪ್ರಬಲ ಸ್ಪರ್ಧೆ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಕಳೆದ ಶುಕ್ರವಾರ ಲೋಕಸಭೆ ಚುನಾವಣೆಯ ಕೊಯಮತ್ತೂರು ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೊಯಮತ್ತೂರು ನಗರದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಚೇರಿಗಳನ್ನು ಸ್ಥಾಪಿಸುವ ಭರವಸೆಗಳನ್ನು ನೀಡಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿನಲ್ಲಿ ದಿನದ 24 ಗಂಟೆಗಳ ಕಾಲ ಮೊಬೈಲ್ ಆಹಾರ ವ್ಯಾನ್‌ಗಳನ್ನು ಪರಿಚಯಿಸುವುದಾಗಿ ಬಿಜೆಪಿ ಘೋಷಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅಣ್ಣಾಮಲೈ ಅವರು, ಕೊಯಮತ್ತೂರು ಲೋಕಸಭಾ ಕ್ಷೇತ್ರವನ್ನು ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನಾಗಿ ಮಾಡುವ ಉದ್ದೇಶದ ಆಧಾರದ ಮೇಲೆ ನಾವು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ 100 ಭರವಸೆಗಳನ್ನು ನೀಡಿದ್ದೇವೆ. ನನ್ನ ಕನಸು ನಮ್ಮ ಕೊಯಮತ್ತೂರು ಎಂದು ಹೇಳಿದ್ದಾರೆ. ಯುವ ಮತದಾರರನ್ನು ಅಣ್ಣಾಮಲೈ ವಿಶೇಷವಾಗಿ ಸೆಳೆಯುತ್ತಿದ್ದಾರೆ. ಅಣ್ಣಾಮಲೈ ತಿಂಗಳ ಹಿಂದೆ ಯಾತ್ರೆ ನಡೆಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯ ಬಲವೃದ್ಧಿಗೆ ಪ್ರಯತ್ನಿಸಿದ್ದಾರೆ. ಅಣ್ಣಾಮಲೈ ಪ್ರಭಾವದಿಂದ ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಡಿಎಂಕೆ

ಡಿಎಂಕೆ ಅಭ್ಯರ್ಥಿ ಗಣಪತಿ ಪಿ. ರಾಜ್‌ಕುಮಾರ್ ಅವರು ಕೊಯಮತ್ತೂರಿನಲ್ಲಿ ಬಿಜೆಪಿ ಏನನ್ನೂ ಮಾಡಿಲ್ಲ. ಹೀಗಾಗಿ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾರೂಢ ತಮಿಳುನಾಡು ಪಕ್ಷಕ್ಕೆ ಕೊಯಮತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಾವು ಕ್ಷೇತ್ರದಲ್ಲಿದ್ದೇವೆ, ಜನರನ್ನು ಭೇಟಿಯಾಗುತ್ತೇವೆ. ನಾವು ತಳಮಟ್ಟಕ್ಕೆ ಹೋಗುತ್ತೇವೆ ಮತ್ತು ಸಿಎಂ ಎಂ.ಕೆ. ಸ್ಟಾಲಿನ್ ಅವರ ಯೋಜನೆ ಅವರಿಗೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೇಳಿದ್ದೇವೆ. ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆ. ಅಣ್ಣಾಮಲೈ ಜನರಿಗೆ ಏನು ಭರವಸೆ ನೀಡಿದರು ಮತ್ತು ಅವರು ಜನರಿಗೆ ಏನು ಮಾಡಿದ್ದಾರೆ ಎಂಬುದರ ಕುರಿತು ಅವರು ಏನು ಹೇಳುತ್ತಾರೆ, ಏನೂ ಇಲ್ಲ, ಎಂದು ಹೇಳಿದ್ದಾರೆ.


ಬಿಜೆಪಿ ಪ್ರಚಾರ

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿ ಕಳೆದ ತಿಂಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ನಡೆಸಿದರು. 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಸಂತ್ರಸ್ತರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಈ ವರ್ಷ ತಮಿಳುನಾಡಿಗೆ ಸಾಕಷ್ಟು ಭರವಸೆಗಳನ್ನು ಪ್ರಧಾನಿ ನರೇಂದ ಮೋದಿ ನೀಡಿದ್ದಾರೆ. ಅಲ್ಲದೇ ಹಲವಾರು ಯೋಜನೆಗಳಿಗೆ ಚಾಲನೆಯನ್ನು ಕೊಟ್ಟಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?

2019 ರ ಲೋಕ ಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಈ ಬಾರಿಯೂ ಅದೇ ದಾಖಲೆ ಬರೆಯುವ ಉತ್ಸಾಹದಲ್ಲಿದೆ.

Exit mobile version