ಹೈದರಾಬಾದ್: ಲೋಕಸಭೆ ಚುನಾವಣೆ (Lok Sabha Election 2024)ಯ ಕಣ ರಂಗೇರಿದೆ. ವಿವಿಧ ರಾಜಕೀಯ ಪಕ್ಷಗಳು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಘಟಾನುಘಟಿಗಳು ಸ್ಪರ್ಧಿಸುತ್ತಿರುವ ಕೆಲವೊಂದು ಕ್ಷೇತ್ರ ಈಗಾಗಲೇ ದೇಶದ ಗಮನ ಸೆಳೆದಿದೆ. ಈ ಪೈಕಿ ಹೈದರಾಬಾದ್ ಲೋಕಸಭೆ ಕ್ಷೇತ್ರವೂ ಒಂದು. ಇಲ್ಲಿ ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಸ್ಪರ್ಧಿಸಲು ಬಿಜೆಪಿ ಹಿಂದು ಫೈರ್‌ಬ್ರ್ಯಾಂಡ್ ಡಾ. ಮಾಧವಿ ಲತಾ ಕೊಂಪೆಲ್ಲ (Madhavi Latha Kompella) ಅವರಿಗೆ ಟಿಕೆಟ್ ನೀಡಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಸೋಮವಾರ (ಏಪ್ರಿಲ್ 8) ಮಾಧವಿ ಲತಾ ಅವರಿಗೆ ಸಿಆರ್‌ಪಿಎಫ್ (CRPF)ನ ವೈ+ (Y+) ಭದ್ರತೆಯನ್ನು ಒದಗಿಸಿದೆ.
ಮಾಧವಿ ಅವರಿಗೆ ಕೆಲವು ಬೆದರಿಕೆ ಕರೆ ಬಂದ ಕಾರಣ ತೆಲಂಗಾಣದಲ್ಲಿ ಅವರಿಗೆ ಈ ಭದ್ರತೆ ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 11 ಮಂದಿ ಭದ್ರತಾ ಸಿಬ್ಬಂದಿ ಪೈಕಿ ಆರು ಮಂದಿ ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಐದು ಮಂದಿ ಗಾರ್ಡ್‌ಗಳಿದ್ದಾರೆ. ಇವರನ್ನು ಮಾಧವಿ ಅವರ ನಿವಾಸದಲ್ಲಿ ನಿಯೋಜಿಸಲಾಗಿದೆ.
ಯಾರಿವರು ಮಾಧವಿ ಲತಾ?
ಹಿಂದು ಧರ್ಮದ ಕುರಿತು ಪ್ರಖರವಾಗಿ ಮಾತನಾಡುವ, ಹೈದರಾಬಾದ್‌ನಲ್ಲಿ ಎಐಎಂಐಎಂ ಪಕ್ಷದ ವೈಫಲ್ಯಗಳನ್ನು ತೋರಿಸುವ ಛಾತಿ ಹೊಂದಿರುವ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಹಿಂದು ಫೈರ್ ಬ್ರ್ಯಾಂಡ್ ಎನಿಸಿದ್ದಾರೆ. ಇವರಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿಯು ಹೈದರಾಬಾದ್ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಹಾಗಾಗಿ, ಈ ಬಾರಿ ಹೈದರಾಬಾದ್‌ನಲ್ಲಿ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಅಸಾದುದ್ದೀನ್ ಓವೈಸಿ ಅವರಿಗೆ ತೀವ್ರ ಪೈಪೋಟಿ ನೀಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಧವಿ ಲತಾ ಅವರು ಬಹುಮುಖ ಪ್ರತಿಭೆ ಎನಿಸಿದ್ದಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಇವರು ಉದ್ಯಮದ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ, ಆರೋಗ್ಯ ಸೇವೆ ಹಾಗೂ ಆಹಾರ ವಿತರಣೆಯ ಮೂಲಕ ಇವರು ಜನಮಾನಸದಲ್ಲಿ ಜಾಗ ಪಡೆದಿದ್ದಾರೆ. ಭರತನಾಟ್ಯ ಪ್ರವೀಣೆಯೂ ಆಗಿರುವ ಇವರು ಹಿಂದು ಧರ್ಮದ ಕುರಿತು ಮಾಡುವ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಹೆಚ್ಚು ಅಭಿಮಾನಿಗಳನ್ನು ನೀಡಿದೆ.
ತ್ರಿವಳಿ ತಲಾಕ್ ವಿರುದ್ಧ ಹೋರಾಟ
ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್ ವಿರುದ್ಧ ಮಾಧವಿ ಲತಾ ಅವರು ಹೋರಾಟ ನಡೆಸಿದ್ದರು. ಅದರಲ್ಲೂ, ಕೇಂದ್ರ ಸರ್ಕಾರವು ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಅಸಾದುದ್ದೀನ್ ಓವೈಸಿ ಅವರು ಇದನ್ನು ಅಸಾಂವಿಧಾನಿಕ ಎಂದು ಕರೆದಿದ್ದರು. ಆಗ, ತ್ರಿವಳಿ ತಲಾಕ್ ಕುರಿತು ಜನರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕುರಿತು ಮಾಧವಿ ಲತಾ ಅವರು ಅಭಿಯಾನ ಆರಂಭಿಸಿದ್ದರು. ಆಗಲೇ ಅಸಾದುದ್ದೀನ್ ಓವೈಸಿ ಅವರಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರು. ಈಗ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಚುನಾವಣೆಯ ಕುತೂಹಲ ಜಾಸ್ತಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ