ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತುಮಕೂರಿನ ತುರವೇಕೆರೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಚಾರ ಭಾಷಣ ಮಾಡುವ ವೇಳೆ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಆಡಿದ ಮಾತುಗಳು ಈಗ ರಾಜಕೀಯ ಟರ್ನ್ ತೆಗೆದುಕೊಂಡಿದೆ. ಈ ಸಂಬಂಧ ಕೆಪಿಸಿಸಿ ನಿಯೋಗದಿಂದ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಲಾಗಿದೆ. ಇನ್ನು ಎಚ್‌ಡಿಕೆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಈಗ ಮಹಿಳಾ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಅಲ್ಲದೆ, ಇದನ್ನು ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಈ ವಿಷಯವನ್ನು ಆದಷ್ಟು ಜೀವಂತವಾಗಿಟ್ಟುಕೊಳ್ಳುವ ಸಲುವಾಗಿ ಪ್ರತಿಭಟನೆ ನಡೆಸಲು ರಾಜ್ಯಾದ್ಯಂತ ಕಾಂಗ್ರೆಸ್ ಮುಂದಾಗಿದೆ. ಈಗ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿದ್ದು, “ದಾರಿ ತಪ್ಪಿದ ಕುಮಾರಸ್ವಾಮಿಗೆ ಧಿಕ್ಕಾರ” ಎಂದು ಘೋಷಣೆಯನ್ನು ಕೂಗಲಾಗಿದೆ. ಮಹಿಳೆಯರೇ ಬಿಜೆಪಿ- ಜೆಡಿಎಸ್ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಿ ಎಂದು ಪೋಸ್ಟರ್ ಪ್ರದರ್ಶನ ಮಾಡಲಾಗಿದೆ. ವ್ಯಕ್ತಿಯೊಬ್ಬರಿಗೆ ಕುಮಾರಸ್ವಾಮಿ ಮುಖವಾಡ ಹಾಕಲಾಗಿತ್ತು. ಬಳಿಕ ಎಚ್‌ಡಿಕೆ ಫೋಟೊಗೆ ಪೊರಕೆಯಲ್ಲಿ ಹೊಡೆದು ಆಕ್ರೋಶವನ್ನು ಹೊರಹಾಕಲಾಗಿದೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನಿಂದ ಇಂದು ದೂರು
ಹಳ್ಳಿ ತಾಯಿಂದಿರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸಿ ಕೆಪಿಸಿಸಿ ನಿಯೋಗವು ಸೋಮವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ ಮಾಡಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ದೂರು ನೀಡಲು ನಿರ್ಧಾರ ಮಾಡಲಾಗಿದೆ.
ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ
ನನ್ನ ಹೇಳಿಕೆಯಿಂದ ಯಾವುದೇ ಮಹಿಳೆಯರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ವಿಷಯದಲ್ಲಿ ಪ್ರತಿಷ್ಠೆ ಇಲ್ಲ. ಗ್ಯಾರಂಟಿಗಳಿಂದ ಕಾಂಗ್ರೆಸ್ ದಾರಿತಪ್ಪಿಸುತ್ತಿದೆ ಎಂದಿದ್ದೇನೆಯೇ ಹೊರತು ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ನಾನು ಹೇಳಿಲ್ಲ. ಈ ಕುರಿತಾದ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಹೀಗಾಗಿ ರಾಜ್ಯದ ತಾಯಂದಿರಗೆ ನೋವು ಆಗಿದ್ದರೆ ನಾನು ಮತ್ತೊಮ್ಮೆ ವಿಷಾದಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತುಮಕೂರಿನ ತುರವೇಕೆರೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಚಾರ ಭಾಷಣ ಮಾಡುವ ವೇಳೆ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.
ಮಂಡ್ಯದಲ್ಲಿ ನನ್ನ ವಿರುದ್ಧ ಮಹಿಳೆಯರಿಂದ ಗೋಬ್ಯಾಕ್ ಕುಮಾರಸ್ವಾಮಿ ಪ್ರತಿಭಟನೆ ಮಾಡಲಾಗಿದೆ. ಹಣ ಕೊಟ್ಟಿದ್ದಕ್ಕೆ ಬಂದಿದ್ದೇವೆ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಮಮಾಲಿನಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದು ಮಹಿಳೆಯರಿಗೆ ಕೊಡುವ ಗೌರವವೇ? ಇವರು ಮಹಿಳೆಯರಿಗೆ ಗೌರವ ಕೊಡುವ ಮಹಾನುಭಾವರೇ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಮರುಳಾಗಬೇಡಿ, ದಾರಿ ತಪ್ಪಬೇಡಿ ಎಂದಿದ್ದೇನೆ
ನಾನು ಏನು ಅಂತಹ ಹೇಳಿಕೆ ಕೊಟ್ಟಿದ್ದೇನೆ? ಎರಡು ಸಾವಿರಕ್ಕೆ ಮರುಳಾಗಬೇಡಿ, ದಾರಿ ತಪ್ಪಬೇಡಿ ಎಂದಿದ್ದೇನೆ. ನನ್ನ ಕಾರ್ಯಕ್ರಮ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ. ನಾನು ಮಹಿಳೆಯರು ಬಗ್ಗೆ ಅಶ್ಲೀಲವಾದ ಪದವನ್ನು ಎಲ್ಲಿ ಬಳಕೆ ಮಾಡಿದ್ದೇನೆ? ಇವರಿಗೆ ರಾಜಕೀಯ ಮಾಡಲು ನನ್ನ ಬಗ್ಗೆ ಯಾವ ವಿಚಾರವೂ ಇಲ್ಲ. ಅದಕ್ಕೆ ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನಿಮ್ಮಿಂದ ನಾನು ಕಲಿಯಬೇಕಾ?
ಕಂಗನಾ ರಾಣಾವತ್‌ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕಾಗಿ ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ್ದೀರಿ. ಅದಕ್ಕೆ ಡಿ.ಕೆ. ಶಿವಕುಮಾರ್ ಏನು ಹೇಳುತ್ತಾರೆ? ರಾಜ್ಯದಲ್ಲಿ ರಮೇಶ್ ಕುಮಾರ್ ವಿಧಾನಸಭೆ ಕಲಾಪ ನಡೆಯುವ ವೇಳೆ ಏನು ಹೇಳಿಕೆ ಕೊಟ್ಟಿದ್ದರು? ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕು ಎಂದಿದ್ದರು. ಇಂತಹ ನೂರಾರು ನಿರ್ದೇಶನ ಇದೆ. ಎಷ್ಟು ಕುಟುಂಬಗಳನ್ನು ಆಸ್ತಿಯ ದುರಾಸೆಗೆ ಏನು ಮಾಡಿದ್ದೀರಿ ಎಂಬ ಬಗ್ಗೆ ನನ್ನ ಬಳಿ ಬೇಕಾದಷ್ಟು ಉದಾಹರಣೆ ಇದೆ. ನಿಮ್ಮಿಂದ ನಾನು ಕಲಿಯಬೇಕಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ನನ್ನ ಹೇಳಿಕೆಯಿಂದ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳು ದುಃಖಕ್ಕೆ ಒಳಗಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ದಾರಿ ತಪ್ಪಿದಾಗ ನನ್ನ ಹೆಂಡತಿ ಸರಿ ದಾರಿಗೆ ತಂದಿದ್ದಾರೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ರಾಜ್ಯದ ತಾಯಂದಿರಿಗೆ ನೋವು ಆಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಿಮಗೆ ನೂರಾರು ಸಾಕ್ಷಿ ಕೊಡಬಲ್ಲೆ
ನಿಮ್ಮ ಶಿವಶಂಕರಪ್ಪ ಮಹಿಳೆಯರನ್ನು ಅಡಿಗೆ ಮನೆಯಿಂದ ಹೊರಗೆ ತರಬಾರದು ಎಂದು ಹೇಳಿದ್ದಾರೆ. ಅದಕ್ಕೆ ನೀವೇ ಕ್ಷಮೆ ಕೋರಿದ್ದೀರಿ. ನಿಮಗೆ ನೂರಾರು ಸಾಕ್ಷಿ ಕೊಡಬಲ್ಲೆ. ಡಿಕೆ ಶಿವಕುಮಾರ್ ಅವರೇ, ಎಷ್ಟು ಕುಟುಂಬಗಳನ್ನು ಆಸ್ತಿ ದುರಾಸೆಗೆ ಏನೇನು ಮಾಡಿದ್ದೀರಿ ಎಂಬುದಕ್ಕೆ ಸಾಕ್ಷಿ ಕೊಡಬಲ್ಲೆ. ನನಗೆ ಪ್ರತಿಷ್ಠೆ ಇಲ್ಲ, ನನ್ನ ಹೇಳಿಕೆಯಿಂದ ಯಾರಿಗೇ ನೋವಾಗಿದ್ದರೂ ವಿಷಾದಿಸುತ್ತೇನೆ. ಈಗ ಗೋಬ್ಯಾಕ್ ಎಂದು ಪ್ರತಿಭಟನೆ ಮಾಡೋದನ್ನು ಮಾತ್ರ ಕಾಂಗ್ರೆಸ್‌ನವರು ಚೆನ್ನಾಗಿ ಕಲಿತಿದ್ದಾರೆ. ತಪ್ಪು ಮಾಡದವರು ನಿಮ್ಮ ಗೋಬ್ಯಾಕ್‌ಗೆ ಹೆದರಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಅಪಾರ್ಟ್ಮೆಂಟ್ ನಿವಾಸಿಗಳಿಗೆ ಧಮ್ಕಿ
ಅಪಾರ್ಟ್ಮೆಂಟ್‌ಗೆ ಎನ್‌ಒಸಿ ಕೊಡಲು ತಮ್ಮನಿಗೆ ಮತ ಹಾಕಬೇಕು ಎಂದು ನೀವು ಧಮ್ಕಿ ಹಾಕುತ್ತಿದ್ದೀರಿ. ನೀನು ಅಳಬೇಡಪ್ಪಾ, ನಿನಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನೀನು ಆನಂದವಾಗಿರು. ನೀನು ದುಖಃ ಪಡಬೇಡಪ್ಪಾ. ಕಾಂಗ್ರೆಸ್ ಮಹಿಳೆಯರಿಗೆ ಮನವಿ ಮಾಡುತ್ತೇನೆ. ಈಗ ಬಿಸಿಲು ಹೆಚ್ಚಿದೆ. ಹೀಗಾಗಿ ಬೀದಿಗೆ ಹೋಗಬೇಡಿ ಎಂದು ಎಚ್‌ಡಿಕೆ ಮನವಿ ಮಾಡಿದರು.
ಎಚ್ಚರವಾಗಿರಿ, ದಾರಿ ತಪ್ಪಬೇಡಿ ಎಂದು ಹೇಳಿದ್ದೇನೆ. ಇದು ತಪ್ಪಾ?
ನಾನು ಏನೂ ತಪ್ಪು ಮಾಡಿಲ್ಲ. ಎಲ್ಲವನ್ನೂ ರಾಜ್ಯದ ಜನರ ವಿವೇಚನೆಗೆ ಬಿಡುತ್ತೇನೆ. ನಾನು ಹೇಳಿರುವ ಅರ್ಥ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತೆರಿಗೆ ಲೂಟಿ ಆಗುತ್ತಿದೆ. ಸಾಲದ ಹೊರೆ ನಿಮ್ಮ ಮೇಲೆ ಹಾಕುತ್ತಿದ್ದಾರೆ. ಆ ಸಾಲದಿಂದ ರಾಜ್ಯ ದಿವಾಳಿಯಾಗುತ್ತದೆ. ಅದಕ್ಕೆ ಮರುಳಾಗಬೇಡಿ, ಎಚ್ಚರವಾಗಿರಿ, ದಾರಿ ತಪ್ಪಬೇಡಿ ಎಂದು ಹೇಳಿದ್ದೇನೆ. ಇದು ತಪ್ಪಾ? ದೇವೇಗೌಡರನ್ನು ಯಾವ ತಪ್ಪಿಗೆ ಅಧಿಕಾರದಿಂದ ಇಳಿಸಿದಿರಿ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ನಮ್ಮ ತೋಟಕ್ಕೆ ಒಮ್ಮೆ ಬಂದು ನೋಡಿ
ನಮ್ಮ ಮೈತ್ರಿ ಬಗ್ಗೆ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಅಂತಾರೆ. ಅವತ್ತು ನಮ್ಮ ಮನೆ ಬಾಗಿಲಿಗೆ ಬಂದಿದ್ದಿರಲ್ಲವೇ ನೀವು? ಆಗ ನೀವು ನಾಯಿ ಸ್ಥಾನದಲ್ಲಿ ಇದ್ದಿರಾ? ಹಳಸಿದ ಅನ್ನದ ಸ್ಥಾನದಲ್ಲಿದ್ದಿರಾ? ನಾನು ಅವರ ತರ ಕೊಳ್ಳೆ ಹೊಡೆದಿಲ್ಲ. ನಮ್ಮ ತೋಟದಲ್ಲಿ ಬಂದು ನೋಡಿ, ಏನೇನು ಬೆಳೆಗಳನ್ನು ಬೆಳೆಸಿದ್ದೇನೆ? ಅವುಗಳಿಂದ ಎಷ್ಟು ಲಾಭ ಬಂದಿದೆ ಅಂತ ಒಮ್ಮೆ ಗಮನಿಸಿ. ಅವರ ತರ ಕಲ್ಲು ಬಂಡೆ ಕದ್ದು ವಿದೇಶಕ್ಕೆ ಕಳಿಸುತ್ತಿಲ್ಲ ನಾನು ಎಂದು ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುಮೋಟೊ ಕೇಸ್‌ಗೆ ಉತ್ತರ ಕೊಡುತ್ತೇನೆ
ನಿಮ್ಮ ನಾಯಕರ ಹೇಳಿಕೆ ಬಗ್ಗೆ ಸಾಕಷ್ಟು ಪ್ರಸ್ತಾಪಿಸಬಲ್ಲೆ. ಇದರಿಂದ ನನ್ನ ಹೆದರಿಸಲು ಬರುತ್ತೀರಾ? ಅದಕ್ಕೆಲ್ಲ ಹೆದರಲ್ಲ. ನನಗೆ ಬುದ್ಧಿವಾದ ಹೇಳೊದಕ್ಕೆ ಬರುತ್ತೀರಾ? ಇವರಿಂದ ನಾನು ಮಹಿಳೆಯರ ಗೌರವದ ಬಗ್ಗೆ ಪಾಠ ಕಲಿಯಬೇಕಾ? ಇವರ ರೀತಿ ಕೆನ್ನೆ ನೆಕ್ತಾರೆ, ರೇಟ್ ಫಿಕ್ಸ್ ಮಾಡಿದ್ರಾ ಎಂದು ಕೇಳಿದ್ನಾ…? ಆ ರೀತಿಯ ಸಂಸ್ಕೃತಿ ನನ್ನದಲ್ಲ. ಮಹಿಳಾ ಆಯೋಗದವರು ಸುಮೋಟೊ ಕೇಸ್ ದಾಖಲಿಸಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕಲ್ಲುಬಂಡೆ ಕದ್ದು ಮಾರಾಟ ಮಾಡುವುದಕ್ಕೆ ಕಷ್ಟ ಪಟ್ಟಿದ್ರಾ?
ನನಗೆ 45 – 48 ಎಕರೆ ಜಮೀನಿದೆ. ಸಿನಿಮಾದಲ್ಲಿ ದುಡಿದು ಆಸ್ತಿ ತೆಗೆದುಕೊಂಡಿದ್ದು. ರಾಜಕೀಯಕ್ಕೆ ಬಂದು ಆಸ್ತಿ ಖರೀದಿಸಿಲ್ಲ. ಕೊಬ್ಬರಿ, 50 ಟನ್ ಕಲ್ಲಂಗಡಿ, 55 ಲಕ್ಷ ರೂ ಮೌಲ್ಯದ ಬಾಳೆಹಣ್ಣುಗಳನ್ನು ಬೆಳೆದಿದ್ದೇನೆ. ಅವರು ಯಾವ ಕಷ್ಟ ಪಟ್ಟಿದ್ದಾರೆ? ಕಲ್ಲುಬಂಡೆ ಕದ್ದು ಮಾರಾಟ ಮಾಡುವುದಕ್ಕೆ ಕಷ್ಟ ಪಟ್ಟಿದ್ರಾ? ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು.
ಇನ್ನೊಮ್ಮೆ ಸಿಎಂ ಆಸೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಒಂದು ಬಾರಿ ಪೆನ್ನು ಪೇಪರ್ ಕೊಟಿದ್ದಕ್ಕೆ ನೀರು ತಮಿಳುನಾಡಿಗೆ ಹರಿಯುತ್ತಿಲ್ವಾ? ಅದಕ್ಕೆ ಇನ್ನೊಮ್ಮೆ ಕೊಡಬೇಕಂತಾ? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.
ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದು ಯಾರು?
ಕುಮಾರಸ್ವಾಮಿ ಕುಟುಂಬಕ್ಕೆ ಒಳ್ಳೆಯದು ಮಾಡಿದ್ದೇನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ನನ್ನ ಕುಟುಂಬಕ್ಕೆ ಏನು ಒಳ್ಳೆಯದನ್ನು ಮಾಡಿದ್ದಾರೆ? ರಾಮನಗರಕ್ಕೆ ಎಂಟ್ರಿಯಾಗಲು ಆಗಿರಲಿಲ್ಲ. ಉಪ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಚುನಾವಣೆಗೆ ನಿಂತರಲ್ಲ. ದೇವೇಗೌಡರನ್ನು ನಾವೇ ಪ್ರಧಾನಿ ಮಾಡಿದ್ದು ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಸಹಾಯ ಮಾಡಿದಿರಿ. ಹಾಗೇ ಅಧಿಕಾರದಿಂದ ಇಳಿಸಿದಿರಲ್ಲವೇ? ಯಾವ ತಪ್ಪಿಗಾಗಿ ಇಳಿಸಿದಿರಿ? ಯಾವ ತಪ್ಪನ್ನು ದೇವೇಗೌಡರು ಮಾಡಿದ್ದರು? ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನ ಮಂತ್ರಿ ಮಾಡಿಲ್ಲ. ಮೈತ್ರಿ ಪಕ್ಷದವರು ಸೇರಿ ಪ್ರಧಾನಿ ಅಂತ ಹೇಳಿದ್ದು ಎಂಬುದಾಗಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.