ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 4ರಂದು ಬೆಳಿಗ್ಗೆ ಮತ ಎಣಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ದೇಶದ ಅಧಿಕಾರಿಗಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದು, ಭಯವಿಲ್ಲದೆ ರಾಷ್ಟ್ರದ ಸೇವೆ ಮಾಡುವಂತೆ ಕರೆ ನೀಡಿದ್ದಾರೆ. ಮತ ಎಣಿಕೆಗೆ ಮುಂಚಿತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಅಧಿಕಾರಿಗಳನ್ನು ಕರೆದು ಬೆದರಿಕೆ ಹಾಕಲು ಪ್ರಯತ್ನಿಸಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ ಹಿನ್ನೆಲೆಯಲ್ಲಿ ಅವರು ಈ ರೀತಿಯ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡೊರುವ ಖರ್ಗೆ, ʼʼಯಾರಿಗೂ ಹೆದರಬೇಡಿ. ಯಾವುದೇ ಅಸಂವಿಧಾನಿಕ ವಿಧಾನಗಳಿಗೆ ತಲೆಬಾಗಬೇಡಿ. ಅರ್ಹತೆಯ ಆಧಾರದ ಮೇಲೆ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ” ಎಂದು ಹೇಳಿದ್ದಾರೆ. “ಪ್ರತಿಯೊಬ್ಬ ನಾಗರಿಕ ಸೇವಕನು ‘ನಿಷ್ಠೆಯಿಂದ ಮತ್ತು ಆತ್ಮಸಾಕ್ಷಿಯಿಂದ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ ಮತ್ತು ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ, ಭಯ ಅಥವಾ ಒಲವು, ಪ್ರೀತಿ ಅಥವಾ ದುರುದ್ದೇಶವಿಲ್ಲದೆ ಎಲ್ಲ ರೀತಿಯ ಜನರನ್ನು ಸಮಾನ ದೃಷ್ಟಿಯಿಂದ ನೋಡಿ ಕಾರ್ಯ ನಿರ್ವಹಿಸುತ್ತೇನೆʼ ಎಂದು ಪ್ರಮಾಣ ವಚನ ಸ್ವೀಕರಿಸುತ್ತಾನೆ” ಎಂದು ಅವರು ನೆನಪಿಸಿಕೊಂಡಿದ್ದಾರೆ.
An Appeal to all the Civil Servants and Officers
— Mallikarjun Kharge (@kharge) June 3, 2024
My dear esteemed members of bureaucracy, our civil servants & officers,
I am writing you in the capacity of the Leader of the Opposition (Rajya Sabha) and as President of the Indian National Congress. The elections for the 18th… pic.twitter.com/mr3CzYc6k1
ಮುಂದುವರೆದು, “ಪ್ರತಿಯೊಬ್ಬ ಅಧಿಕಾರಿ ಮತ್ತು ಎಲ್ಲ ಸಿಬ್ಬಂದಿ ಆಡಳಿತ ಪಕ್ಷ ಅಥವಾ ವಿಪಕ್ಷದ ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ತಲೆಬಾಗದೆ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲಿದ್ದಾರೆ ಎನ್ನುವ ನಂಬಿಕೆ ಇದೆʼʼ ಎಂದು ಖರ್ಗೆ ಹೇಳಿದ್ದಾರೆ.
ಜೈರಾಮ್ ರಮೇಶ್ ಅವರು ಅಮಿತ್ ಶಾ ವಿರುದ್ಧ ಧ್ವನಿ ಎತ್ತಿರುವ ಆರೋಪಗಳನ್ನು ಕಾಂಗ್ರೆಸ್ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಆದರೆ ಇದನ್ನು ಚುನಾವಣಾ ಆಯೋಗ ನಿರಾಕರಿಸಿದೆ. “ನೀವು ಆರೋಪಿಸಿರುವಂತೆ ಯಾವುದೇ ಅಧಿಕಾರಿ ಅಂತಹ ದೂರನ್ನು ನೀಡಿಲ್ಲ” ಎಂದು ಆಯೋಗ ತಿಳಿಸಿದೆ. ಗೃಹ ಸಚಿವರು ಇಂತಹ ಕರೆಗಳನ್ನು ಮಾಡಿದ್ದಾರೆಂದು ಹೇಳಲಾದ 150 ಅಧಿಕಾರಿಗಳ ವಿವರಗಳನ್ನು ಹಂಚಿಕೊಳ್ಳುವಂತೆಯೂ ಆಯೋಗ ಮನವಿ ಮಾಡಿದೆ.
ಎಕ್ಸಿಟ್ ಪೋಲ್ ಹೇಳಿದ್ದೇನು?
ಎಲ್ಲ ಹಂತಗಳ ಮತದಾನ ಮುಗಿದ ಜೂನ್ 1ರಂದು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371, ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.