ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಇನ್ನೂ ಮೂರು ಹಂತಗಳ ಮತದಾನ ಬಾಕಿ ಇದ್ದು, ನಾಯಕರ ಅಬ್ಬರದ ಪ್ರಚಾರ ಮುಂದುವರಿದಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬುಲ್ಡೋಜರ್‌ನಿಂದ ರಾಮಮಂದಿರವನ್ನು ನೆಲಸಮಗೊಳಿಸಲಿದೆ ಎನ್ನುವ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ʼʼನಾವು ಇಲ್ಲಿಯ ತನಕ ಬುಲ್ಡೋಜರ್ ಬಳಸಿಲ್ಲ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಸ್ವತಃ ಪ್ರಧಾನಿಯೇ ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರು ಜನರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದ ನಂತರ, ನಮ್ಮ ಸಂವಿಧಾನದ ಪ್ರಕಾರ ಎಲ್ಲವನ್ನೂ ಸಂರಕ್ಷಿಸಲಾಗುವುದು, ನಾವು ಸಂವಿಧಾನವನ್ನು ಅನುಸರಿಸುತ್ತೇವೆ” ಎಂದು ಖರ್ಗೆ ಹೇಳಿದ್ದಾರೆ.
बुलडोजर तो भाजपा चलाती है। हमने किसी पर आज तक बुलडोजर नहीं चलाया। जो भगवान् का मंदिर अभी ट्रस्ट की ओर से बनने में है, उसपर ऐसी बात बोलने के लिए चुनाव आयोग को मोदी जी और भाजपा पर कार्रवाई करनी चाहिए। ऐसी बातें करके वो जनता में एक रोष पैदा करने का काम कर रहें हैं। जनता को भड़का रहे… pic.twitter.com/ksvXGzboPT
— Mallikarjun Kharge (@kharge) May 18, 2024
ಎನ್‌ಸಿಪಿ-ಎಸ್‌ಪಿ ನಾಯಕ ಶರದ್ ಪವಾರ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಮಹಾರಾಷ್ಟ್ರದಲ್ಲಿ ʼನಿಜವಾದ ಪಕ್ಷಗಳʼ ಬದಲು ಬಿಜೆಪಿಯನ್ನು ಬೆಂಬಲಿಸುವ ಬಣಗಳಿಗೆ ಪಕ್ಷದ ಚಿಹ್ನೆಗಳನ್ನು ನೀಡಿದ ಚುನಾವಣಾ ಆಯೋಗದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
“ದ್ರೋಹ ಮತ್ತು ಪಿತೂರಿಯ ಆಧಾರದ ಮೇಲೆ ಮಹಾರಾಷ್ಟ್ರದ ಅಕ್ರಮ ‘ಮಹಾಯುತಿ’ ಸರ್ಕಾರವನ್ನು ರಚಿಸಲಾಗಿದೆ ಮತ್ತು ಸ್ವತಃ ಪ್ರಧಾನಿಯೇ ಅದನ್ನು ಬೆಂಬಲಿಸುತ್ತಿದ್ದಾರೆ. ಅವರು ಹೋದಲ್ಲೆಲ್ಲ ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಾರೆ” ಎಂದು ಅವರು ಆರೋಪಿಸಿದ್ದಾರೆ. ”ನಿಜವಾದ ಪಕ್ಷಗಳಿಂದ ಚಿಹ್ನೆಯನ್ನು ಕಸಿದುಕೊಂಡು ಬಿಜೆಪಿ ಬೆಂಬಲಿತರಿಗೆ ನೀಡಲಾಗಿದೆ. ಇದು ಕೋರ್ಟ್ ಮತ್ತು ಚುನಾವಣಾ ಆಯೋಗದ ನಿರ್ಧಾರವಾಗಿದ್ದರೂ ಅವರಿಗೆ ಹೀಗೆ ಮಾಡಿ ಎನ್ನುವ ಸಲಹೆಯನ್ನು ಮೋದಿ ನೀಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ʼಇಂಡಿಯಾʼ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಖರ್ಗೆ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ʼಇಂಡಿಯಾʼ ಮೈತ್ರಿಕೂಟ 46ರಲ್ಲಿ ಜಯ ದಾಖಲಿಸಲಿದೆ. ಇದನ್ನು ನಾವು ಹೇಳುತ್ತಿಲ್ಲ; ಬದಲಿಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಿ ನಮ್ಮ ಮೈತ್ರಿಕೂಟ ಗೆಲುವಿನ ನಗೆ ಬೀರಲಿದೆʼʼ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒಂದಾಗಿ ಹೋರಾಟ ನಡೆಸುತ್ತಿದ್ದರೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಪ್ ಪರಸ್ಪರ ವಿರುದ್ಧವಾಗಿ ಸೆಣಸುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಕಾಂಗ್ರೆಸ್ ಅಧ್ಯಕ್ಷರು, “ಇದು ಪ್ರಜಾಪ್ರಭುತ್ವ, ಇದು ನಿರಂಕುಶ ಪ್ರಭುತ್ವವಲ್ಲ. ಬಿಜೆಪಿಯನ್ನು ಸೋಲಿಸಲು ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Narendra Modi: ಕಾಂಗ್ರೆಸ್ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!
ಮಹಾರಾಷ್ಟ್ರದ ಧುಲೆ, ದಿಂಡೊರಿ, ನಾಸಿಕ್, ಕಲ್ಯಾಣ್, ಪಲ್ಘರ್, ಭಿವಾಂಡಿ ಮತ್ತು ಥಾಣೆ ಸೇರಿದಂತೆ ಇತರ ರಾಜ್ಯಗಳ ಹಲವು ಕ್ಷೇತ್ರಗಳಲ್ಲಿ ಮೇ 20ರಂದು 5ನೇ ಹಂತದ ಮತದಾನ ನಡೆಯಲಿದೆ.