Site icon Vistara News

Modi 3.0 Cabinet: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪೇಜಾವರ ಶ್ರೀ

Modi 3.0 Cabinet

Modi 3.0 Cabinet

ಉಡುಪಿ: ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwa Prasanna Swamiji) ಅವರೂ ಭಾಗವಹಿಸಲಿದ್ದು, ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಶನಿವಾರ ಕಿರಿಯ ಪೇಜಾವರ ಶ್ರೀಗಳಿಗೆ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಆಹ್ವಾನ ಲಭಿಸಿತ್ತು. ತಡರಾತ್ರಿ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಆಹ್ವಾನಿಸಲಾಗಿತ್ತು. ಹೀಗಾಗಿ ಇಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 11.30ಕ್ಕೆ ಹೊರಡಲಿರುವ ವಿಮಾನದಲ್ಲಿ ಶ್ರೀಗಳು ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೇಜಾವರ ಶ್ರೀಗಳು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯರಾಗಿದ್ದಾರೆ. ದೇಗುಲ ನಿರ್ಮಾಣ ಕಾರ್ಯ ಹಾಗೂ ಯೋಜನೆಯಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ. ಅವರು ಜನವರಿಯಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಹಾಗೂ ದೇಗುಲದ ಧಾರ್ಮಿಕ ವಿಧಿ, ವಿಧಾನಗಳಲ್ಲೂ ಮಾರ್ಗದರ್ಶನ ನೀಡಿದ್ದರು.

ಸಿದ್ಧತೆ ಪೂರ್ಣ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8,000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ಮಹಾತ್ಮ ಗಾಂಧೀಜಿ ಅವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಇದಾದ ನಂತರ ತಮ್ಮ ರಾಜಕೀಯ ಗುರುವಾದ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳವಾದ ಸದೈವ ಅಟಲ್‌ಗೆ ಭೇಟಿ ನೀಡಿ, ಅವರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

7 ವಿದೇಶಿ ನಾಯಕರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Modi 3.0 Cabinet: ಮೋದಿ 3ನೇ ಅವಧಿಯಲ್ಲಿ ಯಾರಿಗೆಲ್ಲ ಮಂತ್ರಿ ಭಾಗ್ಯ? ರೇಸ್‌ನಲ್ಲಿ ಯಾರಿದ್ದಾರೆ? ಇಲ್ಲಿದೆ ಪಟ್ಟಿ

ಸದ್ಯ ಯಾರಿಗೆಲ್ಲ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಜತೆಗೆ ಟಿಡಿಪಿಯ ರಾಮ್‌ ಮೋಹನ್‌ ನಾಯ್ಡು, ಲಾಲನ್‌ ಸಿಂಗ್‌, ಸಂಜಯ್‌ ಝಾ, ಜೆಡಿಯುನ ರಾಮನಾಥ್‌ ಠಾಕೂರ್‌, ಲೋಕ ಜನ ಶಕ್ತಿ ಪಕ್ಷದ ಚಿರಾಗ್‌ ಪಾಸ್ವಾನ್‌, ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version