ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆ ಘೋಷಣೆಯಾಗಿ ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಏಪ್ರಿಲ್ 20ರಂದು ಮೋದಿ ರಾಜ್ಯಕ್ಕೆ (Modi in Karnataka) ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮೋಡಿ ಮಾಡಲಿದ್ದಾರೆ.
ಮೈಸೂರಿನ ಬೃಹತ್ ಸಮಾವೇಶ ಹಾಗೂ ಮಂಗಳೂರಿನ ರೋಡ್ ಶೋ ಯಶಸ್ಸಿನ ನಂತರ ಪುನಃ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ!
ಏಪ್ರಿಲ್ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.
ಬೆಂಗಳೂರಲ್ಲಿ ಬೃಹತ್ ರ‍್ಯಾಲಿ
ಶನಿವಾರ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪ್ರಚಾರ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೊಳಗೊಂಡಂತೆ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಬೆಂಗಳೂರು ಗ್ರಾಮಾಂತರಕ್ಕೆ ಸಿಗುವುದೇ ಮೋದಿ ಬೂಸ್ಟ್!
ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿಗಳ ನಡುವೆ ಟಫ್ ಫೈಟ್ ಏರ್ಪಟ್ಟಿದೆ. ಕಾರಣ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮತಗಳು ಕ್ರೋಡೀಕರಣಗೊಂಡರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಗೆಲುವಿನ ಹಾದಿ ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್ ರಾತ್ರಿ – ಹಗಲು ಎನ್ನುವಂತೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಕ್ಷೇತ್ರದ ಗೆಲುವಿಗೆ ನಾನಾ ಕಸರತ್ತುಗಳನ್ನು, ರಣತಂತ್ರಗಳನ್ನು ಹೆಣೆಯುತ್ತಾ ಬರುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಸಹ ಬರಲಿದ್ದು, ಅವರು ಪಕ್ಷದ ಅಭ್ಯರ್ಥಿಯಾದ ಡಾ. ಸಿ.ಎನ್. ಮಂಜುನಾಥ್ ಪರ ಏನು ಹೇಳಲಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ವಿರುದ್ಧ ಯಾವ ಬಾಂಬ್ ಎಸೆಯಲಿದ್ದಾರೆ? ಇದು ಮತದಾರರ ಮೇಲೆ ಬೀರುವ ಪರಿಣಾಮ ಏನು ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.
ಇದನ್ನೂ ಓದಿ: Lok Sabha Election 2024: ಎಚ್.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಿರಿಕ್; ಚುನಾವಣಾ ಆಯೋಗಕ್ಕೆ ದೂರು
ಮೈಸೂರು ಸಮಾವೇಶದಲ್ಲಿ ಗುಡುಗಿದ್ದ ಮೋದಿ!
ಮೈಸೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ, ಹಿಂದುತ್ವದ ವಿರುದ್ಧ ಆ ಪಕ್ಷ ಹಾಗೂ ಮಿತ್ರ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದರು. ಇನ್ನು ದೇಶದ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇಲ್ಲಿನ ಕಾಂಗ್ರೆಸ್ ಸರ್ಕಾರವು ಎಟಿಎಂ ಆಗಿದ್ದು, ನೂರಾರು ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್ 20 ರಂದು ನಡೆಯಲಿರುವ ಎರಡು ಸಮಾವೇಶಗಳಲ್ಲಿ ಮೋದಿ ಏನು ಮಾತನಾಡಲಿದ್ದಾರೆ? ಯಾವೆಲ್ಲ ಹೊಸ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.