Site icon Vistara News

Modi in Shivamogga : ಕರ್ನಾಟಕದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ಇದು ಮೋದಿ ಲೆಕ್ಕ!

Modi in Shivamogga sabhe CMs of Karnataka

ಶಿವಮೊಗ್ಗ : ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಆಡಳಿತ ನಡೆಸುವ ಒಂದು ಅವಕಾಶವನ್ನು ಜನರು ಒದಗಿಸಿದ್ದರು. ಆದರೆ, ಆ ಪಕ್ಷ ಅದನ್ನೂ ಹಾಳು ಮಾಡಿಕೊಂಡಿದೆ. ಕಾಂಗ್ರೆಸ್‌ ರಾಜ್ಯವನ್ನು ಪಕ್ಷದ ಎಟಿಎಂ ಆಗಿ (Karnataka Congress) ಬಳಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ (Modi in Shivamogga) ನಡೆದ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನೂ (How many CMs in Karnataka) ತೆರೆದಿಟ್ಟರು.

ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದ ಈ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಕೈಯಲ್ಲಿ ಅಭಿವೃದ್ಧಿಯ ಒಂದೇ ಒಂದು ಅಜೆಂಡಾ ಇಲ್ಲ ಎಂದು ಆರೋಪಿಸಿದರು. ಕರ್ನಾಟಕದಲ್ಲಂತೂ ಅಭಿವೃದ್ಧಿ ಮಾಡಲು ಒಂದು ನಯಾ ಪೈಸೆ ಕೂಡಾ ಇಲ್ಲ ಎಂದು ಹೇಳಿದರು.

ಇಲ್ಲಿ ಹಲವು ಮುಖ್ಯಮಂತ್ರಿಗಳಿದ್ದಾರೆ: ಪ್ರಧಾನಿ ಮೋದಿ ಲೆಕ್ಕ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಅಧಿಕಾರ ದಾಹದಿಂದ ಬಳಲುತ್ತಿದೆ ಎಂದು ಆಪಾದಿಸಿದ ನರೇಂದ್ರ ಮೋದಿ ಅವರು, ಇಲ್ಲಿ ರಾಜ್ಯದಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಲ್ಲ. ಹಲವು ಮುಖ್ಯಮಂತ್ರಿಗಳಿದ್ದಾರೆ ಎಂದರು.

ಇಲ್ಲಿ ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಒಬ್ಬರು ಸಿಎಂ ಆಗಲು ಕಾಯುತ್ತಿದ್ದಾರೆ, ಅವರು ಸಿಎಂ ಇನ್‌ ವೇಟಿಂಗ್‌, ಇಲ್ಲಿ ಹಲವರು ಮುಂದಿನ ಸಿಎಂ ಆಗಲು ಆಕಾಂಕ್ಷಿಗಳಾಗಿದ್ದಾರೆ, ಕಾತರರಾಗಿದ್ದಾರೆ. ಇಲ್ಲಿ ಸೂಪರ್‌ ಸಿಎಂಗಳಿದ್ದಾರೆ, ಶ್ಯಾಡೋ (ಛಾಯಾ) ಸಿಎಂಗಳಿದ್ದಾರೆ. ಇವರ ನಡುವೆ ದಿಲ್ಲಿಯ ಒಬ್ಬ ಕಲೆಕ್ಷನ್‌ ಮಿನಿಸ್ಟರ್‌ ಕೂಡಾ ಇದ್ದಾರೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ನ ಈ ಎಲ್ಲ ಅಪಸವ್ಯಗಳಿಂದ ಜನರು ಎಷ್ಟೊಂದು ಅಕ್ರೋಶಿತರಾಗಿದ್ದಾರೆ ಎಂದರೆ ಈ ಬಾರಿ ಎಲ್ಲ 28 ಸಂಸತ್‌ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು ಪ್ರಧಾನಿ ಮೋದಿ. ದೇಶದಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಹನ ರ‍್ಯಾಲಿಯಲ್ಲಿ ಅಲ್ಲಮ ಪ್ರಭು ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಸಭಾಂಗಣದ ಒಳಗೆ ತೆರೆದ ವಾಹನದ ರ‍್ಯಾಲಿ ನಡೆಸಿ ಎಲ್ಲರನ್ನೂ ಆತ್ಮೀಯವಾಗಿ ಎದುರ್ಗೊಂಡರು. ಅಲ್ಲಿಂದ ವೇದಿಕೆಗೆ ತೆರಳಿದಾಗ ಇಡೀ ಮೈದಾನದಲ್ಲಿ ಹೈ ಮೋದಿ, ಜೈ ಶ್ರೀರಾಮ್‌ ಎಂಬ ಘೋಷ ವಾಕ್ಯ ಮೊಳಗಿತು.

ಇದನ್ನೂ ಓದಿ : Modi in Shivamogga : ಈ ಬಾರಿ 400 ಮೀರಿ; ಶಿವಮೊಗ್ಗದಲ್ಲಿ ನರೇಂದ್ರ ಮೋದಿ ಘೋಷವಾಕ್ಯ

ಈ ಬಾರಿ ಯಾಕೆ ಬಿಜೆಪಿಗೆ 400 ಸ್ಥಾನ ಬೇಕು?

ಈ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ನೂರಕ್ಕೂ ಅಧಿಕ ಸ್ಥಾನ ಕೊಡಬೇಕು ಎಂದು ಕೇಳಿದ ಅವರು ಅದಕ್ಕೆ ಕೆಲವು ಕಾರಣಗಳನ್ನು ನೀಡಿದರು. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ, ಯುವಜನರ ಆಶಾವಾದ ಪೂರೈಸಲು, ಬಡವರ ಕಲ್ಯಾಣಕ್ಕಾಗಿ, ರೈತರ ಅಭಿವೃದ್ಧಿಗಾಗಿ, ಭಯೋತ್ಪಾದನೆ ನಿಗ್ರಹಕ್ಕಾಗಿ, ಕಾಶ್ಮೀರದ ಅಭಿವೃದ್ಧಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಬೇಕು ಎಂದು ಕೇಳಿದರು.

ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಸಮಾವೇಶ ಇದಾಗಿದ್ದು, ಬಿಜೆಪಿ ಅಭ್ಯರ್ಥಿಗಳಾd ಬಿ.ವೈ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ್‌, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್‌ ಚೌಟ ಭಾಗವಹಿಸಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Exit mobile version