Site icon Vistara News

Narendra Modi: ಕಾಂಗ್ರೆಸ್, ಡಿಎಂಕೆಯಿಂದ ಹಿಂದೂ ಧರ್ಮಕ್ಕೆ ನಿರಂತರ ಅವಮಾನ; ಮೋದಿ ವಾಗ್ದಾಳಿ

modi

modi

ಚೆನ್ನೈ: ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಎನ್‌ಡಿಎ ಸರ್ಕಾರವನ್ನು ಟೀಕಿಸಲು ʼಶಕ್ತಿʼ ಪದವನ್ನು ಪ್ರಯೋಗಿಸಿದ್ದರು. ಇದೀಗ ಬಿಜೆಪಿ (BJP) ಇದನ್ನೇ ಪ್ರತ್ಯಸ್ತ್ರವಾಗಿ ಕೈಗೆತ್ತಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ಪದವನ್ನು ಬಳಸಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ (INDIA bloc)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಮಾತನಾಡಿದ ಮೋದಿ, ʼʼಕಾಂಗ್ರೆಸ್ ಮತ್ತು ಡಿಎಂಕೆ ಹಿಂದೂ ಧರ್ಮವನ್ನು ಅವಮಾನಿಸುವ ಪ್ರವೃತ್ತಿಯನ್ನು ಹೊಂದಿವೆ. ಆ ಪಕ್ಷಗಳ ನಾಯಕರು ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲʼʼ ಹೇಳಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಹೇಳಿಕ

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನಿ, “ಇಂಡಿಯಾ ಮೈತ್ರಿಕೂಟ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಹಿಂದೂ ಧರ್ಮದ ವಿರುದ್ಧ ಯೋಜನೆ ರೂಪಿಸಲಾಗುತ್ತಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿ ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲ. ಆದರೆ ಅವರು ಹಿಂದೂ ಧರ್ಮವನ್ನು ಅವಮಾನಿಸಲು ಒಂದು ಕ್ಷಣವೂ ಯೋಚಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.

ʼʼಡಿಎಂಕೆ, ಕಾಂಗ್ರೆಸ್‌ ಮತ್ತು ʼಇಂಡಿಯಾʼ ಮೈತ್ರಿ ಕೂಟಗಳು ಶಕ್ತಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿವೆ. “ತಮಿಳುನಾಡಿನಲ್ಲಿ ಮಾರಿಯಮ್ಮನ್, ಕಾಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಕೂಡ ‘ಶಕ್ತಿ’ಯೇ. ಕಾಂಗ್ರೆಸ್, ಡಿಎಂಕೆ ಮತ್ತು ʼಇಂಡಿಯಾʼ ಮೈತ್ರಿಕೂಟವು ಈ ಶಕ್ತಿಯನ್ನು ನಾಶಪಡಿಸುವುದಾಗಿ ಹೇಳುತ್ತಿವೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಹಿಳಾ ಶಕ್ತಿ, ತಾಯಿಯ ಶಕ್ತಿʼʼ ಎಂದು ಮೋದಿ ಹೇಳಿದ್ದಾರೆ.

ಒಂದೇ ನಾಣ್ಯದ ಎರಡು ಮುಖಗಳು

ಡಿಎಂಕೆ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣಕ್ಕೆ ಇವು ಒತ್ತು ನೀಡುತ್ತವೆ. ಕಾಂಗ್ರೆಸ್‌ನಿಂದ ಅಧಿಕಾರವನ್ನು ದೂರ ಇಟ್ಟಾಗ ದೇಶವು 5 ಜಿ ತಂತ್ರಜ್ಞಾನವನ್ನು ತಲುಪಿತು. ಆದರೆ ತಮಿಳುನಾಡಿನಲ್ಲಿ ಡಿಎಂಕೆ ತನ್ನದೇ ಆದ 5 ಜಿ ನಡೆಸುತ್ತಿದೆ- ಅಂದರೆ ಇಲ್ಲಿನ 5 ಜಿ ಎಂದರೆ ತಮಿಳುನಾಡಿನ ಮೇಲೆ ನಿಯಂತ್ರಣ ಸಾಧಿಸಲು ಒಂದು ಕುಟುಂಬದ ಐದನೇ ತಲೆಮಾರಿನ ಪ್ರಯತ್ನ ಎಂದರ್ಥʼʼ ಎಂದು ಅವರು ಟೀಕಿಸಿದ್ದಾರೆ.

“ಇಂಡಿಯಾʼ ಮೈತ್ರಿಕೂಟವು ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಬದುಕಿದ್ದಾಗ ಡಿಎಂಕೆ ನಾಯಕರು ಅವರೊಂದಿಗೆ ಹೇಗೆ ವರ್ತಿಸಿದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದು ಡಿಎಂಕೆಯ ನಿಜವಾದ ಮುಖ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Lok Sabha Election 2024: ರಾಹುಲ್‌ ಗಾಂಧಿ ‘ಶಕ್ತಿ’ ಹೇಳಿಕೆಗೆ ತಿರುಗಿ ಬಿದ್ದ ಬಿಜೆಪಿ ನಾಯಕರು ಹೇಳಿದ್ದೇನು?

ರಾಹುಲ್‌ ಗಾಂಧಿ ಹೇಳಿದ್ದೇನು?

ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾವ ಮಾಡಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದಿಯಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ. ಇವಿಎಂ, ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲ್ಲದೆ ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version