ಬೆಳಗಾವಿ, ಶಿರಸಿ, ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ನರೇಂದ್ರ ಮೋದಿ (Narendra Modi) ಅವರು ಹಿಂದೆಂದಿಗಿಂತ ಹೆಚ್ಚು ಭಾವುಕರಾಗಿ, ಆಕ್ರಮಣಕಾರಿಯಾಗಿ ಮಾತನಾಡಿದರು. ನಿಮ್ಮ ಸೇವೆಗಾಗಿಯೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ. ಈ ನನ್ನ ಜೀವ ದೇಶಕ್ಕೆ ಮೀಸಲು ಎಂದರು.
ನನ್ನ ಜೀವನದ ಕ್ಷಣಕ್ಷಣವೂ ಈ ದೇಶದ ಒಳಿತಿಗಾಗಿ, ಈ ದೇಶದ ಜನರ ಒಳಿತಿಗಾಗಿ ಮೀಸಲು. 24×7 ನಾನು ಈ ದೇಶಕ್ಕಾಗಿ ದುಡಿಯುತ್ತಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಮೋದಿ ಹೇಳಿದಾಗ ವೇದಿಕೆ ಮುಂಭಾಗದ ಸಾವಿರಾರು ಮಂದಿ ಮೋದಿ ಮೋದಿ ಎಂಬ ಜಯಘೋಷ ಮೊಳಗಿಸಿದರು.
ನಿಮ್ಮ ಕನಸೇ ಮೋದಿ ಸಂಕಲ್ಪ ಎಂದು ಇಲ್ಲಿಯ ಇಡೀ ಜನಸಮೂಹಕ್ಕೆ ಭರವಸೆ ನೀಡುತ್ತೇನೆ. ನನ್ನ ಪ್ರತಿ ಕ್ಷಣವನ್ನೂ ದೇಶಕ್ಕಾಗಿ, ದೇಶದ ಜನರಿಗಾಗಿ ಮೀಸಲಿಟ್ಟು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಾ 2047ರ ವಿಕಸಿತ ಭಾರತಕ್ಕಾಗಿ ನನ್ನ ಸೇವೆ ಮುಡಿಪಾಗಿಡುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
These pictures from Belagavi and Uttara Kannada depict the mood across Karnataka! NDA is the state's preferred choice. pic.twitter.com/gn1Jj0Nsm6
— Narendra Modi (@narendramodi) April 28, 2024
ಭಯೋತ್ಪಾದಕರಿಗೆ ಕಾಂಗ್ರೆಸ್ ಕುಮ್ಮಕ್ಕು
ಕಾಂಗ್ರೆಸ್ ಬಾಂಬರ್‌ಗಳಿಗೆ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟವನ್ನು (Rameswaram cafe blast) ಮೊದಲು ಸಿಲಿಂಡರ್ ಸ್ಫೋಟವೆಂದು ಕಾಂಗ್ರೆಸ್ ಸರ್ಕಾರದವರು ಹೇಳಿದ್ದರು. ಆದರೆ, ಎನ್ಐಎ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇವಲ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ. ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಈ ಹಿಂದೆ ಮಂಗಳೂರಲ್ಲಿ ಸ್ಫೋಟ, ಬೆಂಗಳೂರಲ್ಲಿ ಸ್ಫೋಟ, ದೆಹಲಿಯಲ್ಲಿ ಸ್ಫೋಟ, ಸೂರತ್‌ನಲ್ಲಿ ಸ್ಫೋಟ ಹೀಗೆ ದೇಶದ ಎಲ್ಲ ಕಡೆ ಸ್ಫೋಟ.. ಸ್ಫೋಟವೆಂದು ನ್ಯೂಸ್ ಬರುತ್ತಿತ್ತು. ಆದರೆ, ಈಗ ಅಂದ್ರೆ 2014ರ ನಂತರ ಬಾಂಬ್ ಸ್ಫೋಟದ ಪ್ರಕರಣಗಳು ಆಗುತ್ತಾ ಇದೆಯಾ? ಕಾಂಗ್ರೆಸ್ ಪಕ್ಷದಿಂದ ಆ್ಯಂಟಿ ಸೋಷಿಯಲ್ ಹಾಗೂ ಆ್ಯಂಟಿ ನ್ಯಾಷನಲ್ ಕಾರ್ಯ ನಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ಜನರ ಆಸ್ತಿ ಮೇಲೆ ಕಾಂಗ್ರೆಸ್‌ಗೆ ಕಣ್ಣು
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ಜನರ ಆಸ್ತಿಪಾಸ್ತಿಯ ಪರಿಶೀಲನೆ ನಡೆಸುತ್ತಾರಂತೆ. ನಿಮ್ಮ ಆಸ್ತಿ, ನಿಮ್ಮ ಜಮೀನು, ನಿಮ್ಮ ಚಿನ್ನವನ್ನು ಸರ್ವೆ ಮಾಡ್ತಾರಂತೆ. ಮಹಿಳೆಯರ ಮಂಗಳ ಸೂತ್ರವನ್ನು ಸರ್ವೆ ಮಾಡುತ್ತಾರಂತೆ. ಕಾಂಗ್ರೆಸ್ ಪಕ್ಷದವರು ಹಾಗೆ ಸರ್ವೆ ಮಾಡ್ತೀನಿ ಅಂತಾ ಹೋದರೆ ಸುಮ್ಮನೆ ಬಿಡುತ್ತೇನಾ? ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ವೆ, ಎಕ್ಸ್‌ರೇ ಕಾರ್ಯವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾಂಗ್ರೆಸ್ ಶ್ರೀರಾಮನ ವಿರೋಧಿ
ಕಾಂಗ್ರೆಸ್ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.