ಕೋಲ್ಕತ್ತಾ: ಕೊನೆಗೂ ಹಲವು ದಿನಗಳ ಕುತೂಹಲಕ್ಕೆ ತೆರೆ ಎಳೆದು ಶುಕ್ರವಾರ (ಮೇ 3) ಕಾಂಗ್ರೆಸ್ ರಾಯ್ ಬರೇಲಿ (Rae Bareli) ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ (Lok Sabha Election 2024). ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕಣಕ್ಕಿಳಿದಿದ್ದಾರೆ. ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ರಾಹುಲ್ ಗಾಂಧಿ ಇದೀಗ ಉತ್ತರ ಪ್ರದೇಶದಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಡೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ. ವಯನಾಡಿನಲ್ಲಿ ಸೋಲುವ ಭೀತಿಯಿಂದ ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ʼʼರಾಹುಲ್ ಗಾಂಧಿ ಅಮೇಥಿ ಬಿಟ್ಟು ರಾಯ್ಬರೇಲಿಗೆ ಓಡಿದ್ದಾರೆ. ಭಯ ಪಡಬೇಡಿ, ಓಡಬೇಡಿʼʼ ಎಂದು ತಮಾಷೆ ಮಾಡಿದ್ದಾರೆ. ವಯನಾಡಿನಲ್ಲಿ ಮತದಾನ ಮುಗಿದ ತಕ್ಷಣ ರಾಹುಲ್ ಗಾಂಧಿ ಬೇರೆ ಕ್ಷೇತ್ರವನ್ನು ಹುಡುಕಲಿದ್ದಾರೆ ಎಂದು ತಾವು ಹಿಂದೆ ಹೇಳಿದ್ದನ್ನು ನೆನಪಿಸಿಕೊಂಡ ಮೋದಿ, ʼʼವಯನಾಡಿನಲ್ಲಿ ರಾಹುಲ್ ಗಾಂಧಿ ಸೋಲುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಮತದಾನ ಮುಗಿದ ತಕ್ಷಣ ಅವರು ಬೇರೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದೆ. ಅದು ನಿಜವಾಗಿದೆ. ಅಮೇಥಿಯಲ್ಲಿ ಸೋಲಾಗುತ್ತದೆ ಎನ್ನುವ ಭೀತಿಯಿಂದ ರಾಯ್ ಬರೇಲಿಗೆ ಪಲಾಯನ ಮಾಡಿದ್ದಾರೆ. ಹೆದರಬೇಡಿ, ಓಡಬೇಡಿʼʼ ಎಂದು ಹೇಳಿದ್ದಾರೆ.
TMC, Left and Congress should know – this is Modi, he isn’t scared of their foul language and threats. pic.twitter.com/JkIS0SoxNl
— Narendra Modi (@narendramodi) May 3, 2024
ನಿರಂತರವಾಗಿ ಆಯ್ಕೆಯಾಗುತ್ತಿದ್ದ ರಾಯ್ ಬರೇಲಿ ಕ್ಷೇತ್ರವನ್ನು ಬಿಟ್ಟು ರಾಜ್ಯಸಭೆಯತ್ತ ಮುಖ ಮಾಡಿದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನಡೆಯನ್ನೂ ಮೋದಿ ಟೀಕಿಸಿದ್ದಾರೆ. ʼʼಕಾಂಗ್ರೆಸ್‌ನ ಹಿರಿಯ ನಾಯಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಭಯಪಡುತ್ತಾರೆ ಮತ್ತು ಕಣದಿಂದ ಓಡಿ ಹೋಗುತ್ತಾರೆ ಎನ್ನುವ ವಿಚಾರವನ್ನು ನಾನು ಮೊದಲೇ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದೆ. ಅದರಂತೆ ಅವರು (ಸೋನಿಯಾ ಗಾಂಧಿ) ರಾಯ್ ಬರೇಲಿಯಿಂದ ರಾಜ್ಯಸಭೆಗೆ ಪಲಾಯನ ಮಾಡಿದ್ದಾರೆʼʼ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ.
ಕುತೂಹಲ ಕೆರಳಿಸಿದ್ದ ಕ್ಷೇತ್ರಗಳು
ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು. ಕೊನೆಗೂ ಇಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್ ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಥಿಯಿಂದ ರಾಹುಲ್ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಇತ್ತ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆ ದಿನೇಶ್ ಪ್ರತಾಪ್ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?
ಇನ್ನು ದಿನೇಶ್ ಪ್ರತಾಪ್ ಕಳೆದ ಬಾರೀ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಅಮೇಥಿಯಲ್ಲಿ 2004, 2009, 2014ರವರೆಗೆ ರಾಹುಲ್ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲನ್ನು ಅನುಭವಿಸಿದ್ದರು. ಈ ಬಾರಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಅವರನ್ನು ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಸಿ ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.