Site icon Vistara News

Narendra Modi: ಲೋಕಸಭಾ ಚುನಾವಣೆ ಫಲಿತಾಂಶದ 6 ತಿಂಗಳ ಬಳಿಕ ‘ರಾಜಕೀಯ ಭೂಕಂಪ’; ಮೋದಿನ ಮಾತಿನ ಮರ್ಮವೇನು?

Narendra Modi

Narendra Modi

ಕೋಲ್ಕತ್ತಾ: ಲೋಕಸಭಾ ಚುನಾವಣೆ (Lok Sabha Election)ಯ ಕೊನೆಯ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಜೂನ್‌ 4ರಂದು ಫಲಿತಾಂಶ ಹೊರ ಬೀಳಲಿದ್ದು, ಈಗಾಗಲೇ ಈ ಕುರಿತಾದ ಲೆಕ್ಕಾಚಾರ ಆರಂಭವಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಕಾಕ್ದ್ವೀಪ್‌ನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು, ಚುನಾವಣಾ ಫಲಿತಾಂಶ ಘೋಷಣೆಯಾದ ಆರು ತಿಂಗಳ ಬಳಿಕ ಬಹುದೊಡ್ಡ ಬದಲಾವಣೆಯಾಗಲಿದ್ದು, ‘ರಾಜಕೀಯ ಭೂಕಂಪ’ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಲ್ಲಿನ ಜನಸಂಖ್ಯಾಶಾಸ್ತ್ರವು ಒಳನುಸುಳುವಿಕೆಯಿಂದಾಗಿ ಬದಲಾಗುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ, ತೃಣಮೂಲ ಕಾಂಗ್ರೆಸ್ (TMC) ಅಕ್ರಮ ವಲಸಿಗರು ಬಂಗಾಳದಲ್ಲಿ ನೆಲೆಸಲು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಹೇಳಿದ್ದೇನು?

ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದೆ. ಈ ಮೂಲಕ ಮುಸ್ಲಿಮರಿಗೆ ʼಮೂಲʼ ಒಬಿಸಿಗಳ ಹಕ್ಕುಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. “ಬಂಗಾಳದ ಗಡಿ ಪ್ರದೇಶಗಳಲ್ಲಿನ ಜನಸಂಖ್ಯಾಶಾಸ್ತ್ರವನ್ನು ಒಳ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಬದಲಾಯಿಸಲಾಗುತ್ತಿದೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದನ್ನು ಟಿಎಂಸಿ ವಿರೋಧಿಸುತ್ತದೆ. ಟಿಎಂಸಿ ನಾಯಕರು ಸಿಎಎಯನ್ನು ಏಕೆ ವಿರೋಧಿಸುತ್ತಿದ್ದಾರೆ? ಸಿಎಎ ಬಗ್ಗೆ ಏಕೆ ಸುಳ್ಳು ಹೇಳುತ್ತಿದ್ದಾರೆ?ʼʼ ಎಂದು ಮೋದಿ ಪ್ರಶ್ನಿಸಿದ್ದಾರೆ.

ಮಾಟುವಾ ಸಮುದಾಯದ ಸದಸ್ಯರು ತಮಗೆ ಸಲ್ಲಬೇಕಾದ ಎಲ್ಲ ಗೌರವದೊಂದಿಗೆ ಭಾರತೀಯ ಪೌರತ್ವವನ್ನು ಪಡೆಯುತ್ತಾರೆ ಎಂದು ಮೋದಿ ಘೋಷಿಸಿದ್ದಾರೆ. ಹಿಂದುಗಳು ಮತ್ತು ಮಾಟುವಾಗಳು ಬಂಗಾಳದಲ್ಲಿ ನೆಲೆಸುವುದನ್ನು ಟಿಎಂಸಿ ವಿರೋಧೊಸುತ್ತದೆ ಎಂದು ಅವರು ಹೇಳಿದ್ದಾರೆ. ʼʼಪಶ್ಚಿಮ ಬಂಗಾಳದಲ್ಲಿ ಮೀಸಲಾತಿಯನ್ನು ದುರುಪಯೋಗಪಡಿಲಾಗುತ್ತಿದೆ. ಮುಸ್ಲಿಮರಿಗೆ ಅನುಕೂಲ ಮಾಡಿಕೊಟ್ಟು ಹಿಂದುಳಿದ ವರ್ಗ ಮತ್ತು ದಲಿತರಿಗೆ ಅನ್ಯಾಯ ಎಸಗಲಾಗುತ್ತಿದೆ. ಆ ಮೂಲಕ ಟಿಎಂಸಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆʼʼ ಎಂದು ದೂರಿದ್ದಾರೆ.

ʼʼಅಕ್ರಮ ಒಳನುಸುಳುವಿಕೆ ಕಾರಣದಿಂದ ರಾಜ್ಯದ ಸಾಕಷ್ಟು ಯುವ ಜನತೆ ಅವಕಾಶ ವಂಚಿತವಾಗುತ್ತಿದೆ. ಅಕ್ರಮ ವಲಸಿಗರು ಮುಂದೆ ನಿಮ್ಮ ಆಸ್ತಿ, ಜಾಗದ ಮೇಲೆ ಅತಿಕ್ರಮಣವನ್ನೂ ಮಾಡಬಹುದು. ಹೀಗಾಗಿ ಇಡೀ ದೇಶವೇ ಈ ಬಗ್ಗೆ ಆತಂಕಗೊಂಡಿದೆʼʼ ಎಂದು ಮೋದಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

ʼʼನಿಮ್ಮ ವೋಟು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಬಹುದು. ಜೂನ್‌ 4ರ ನಂತರ 6 ತಿಂಗಳೊಳಗೆ ರಾಜಕೀಯವಾಗಿ ಬಹಳಷ್ಟು ಬದಲಾವಣೆ ಕಂಡು ಬರಲಿದೆ. ವಂಶಪಾರಂಪರ್ಯ ರಾಜಕಾರಣದಲ್ಲಿ ಬೆಳೆಯುವ ರಾಜಕೀಯ ಪಕ್ಷಗಳು ತಾವಾಗಿಯೇ ಛಿದ್ರವಾಗುತ್ತವೆ. ಆ ಪಕ್ಷಗಳ ಕಾರ್ಯಕರ್ತರು ಸಹ ದಣಿದಿದ್ದಾರೆ. ಅವರೆಲ್ಲರೂ ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಅವರ ಪಕ್ಷಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದನ್ನು ಗಮನಿಸುತ್ತಿದ್ದಾರೆ” ಎಂದು ಪ್ರಧಾನಿ ವಿವರಿಸಿದ್ದಾರೆ. ಮೀನುಗಾರರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳು, ಉಜ್ವಲ ಮತ್ತು ಆಯುಷ್ಮಾನ್ ಭಾರತ್‌ ಮುಂತಾದ ಯೋಜನೆಗಳನ್ನು ಟಿಎಂಸಿ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದೂ ಮೋದಿ ಆರೋಪಿಸಿದ್ದಾರೆ.

Exit mobile version