Site icon Vistara News

Narendra Modi: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಯುವ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Election Result 2024

Election Result 2024: Congress Candidate Leads In Varanasi Against Narendra Modi

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ 7ನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದೆ. ದೇಶದ 57 ಕ್ಷೇತ್ರಗಳಲ್ಲಿ ಇಂದು (ಜೂನ್‌ 1) ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತದಾರರಿಗೆ ವಿಶೇಷವಾಗಿ ಯುವ ಜನತೆ ಮತ್ತು ಮಹಿಳೆಯರಿಗೆ ಸಂದೇಶ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ʼʼಇಂದು 2024ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಆಯೋಜಿಸಲಾಗಿದೆ. 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ. ಯುವ ಮತ್ತು ಮಹಿಳಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ ಎನ್ನುವ ಭರವಸೆ ಇದೆ. ಎಲ್ಲರೂ ಒಟ್ಟಾಗಿ, ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸೋಣʼʼ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. “ದೇಶ ಮತ್ತು ಉತ್ತರ ಪ್ರದೇಶದಲ್ಲಿ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಹೈಸ್ಪೀಡ್ ರೈಲುಗಳು ಮತ್ತು ಇಂಟರ್‌ನೆಟ್‌ ಜಾಲವನ್ನು ನಿರ್ಮಿಸುವ ಪ್ರಾಮಾಣಿಕ ಸರ್ಕಾರವನ್ನು ಆಯ್ಕೆ ಮಾಡಲು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಎಲ್ಲ ಮತದಾರರು ವಿಶೇಷವಾಗಿ ಯುವಕರಿಗೆ ಮನವಿ ಮಾಡುತ್ತೇನೆ. ಪ್ರತಿಯೊಬ್ಬ ಬಡ ವ್ಯಕ್ತಿಗೆ ಮನೆ, ಅನಿಲ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸುವ ವಿಶ್ವಾಸಾರ್ಹ ಸರ್ಕಾರವು ಭಾರತ ಮತ್ತು ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಾಯಿಸಬಹುದು” ಎಂದು ಶಾ ಹೇಳಿದ್ದಾರೆ.

ʼಇಂಡಿಯಾʼ ಒಕ್ಕೂಟಕ್ಕೆ ಅನುಕೂಲ ಎಂದ ಖರ್ಗೆ

ಇತ್ತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆ ಪ್ರತಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಇಂದು ಕೊನೆಯ ಹಂತದ ಮತದಾನ. ಸಂವಿಧಾನವನ್ನು ರಕ್ಷಿಸಲು ವೋಟು ಮಾಡಿ. ʼಇಂಡಿಯಾʼ ಮೈತ್ರಿಕೂಟ ಸರ್ವಾಧಿಕಾರಿ ಶಕ್ತಿಯ ವಿರುದ್ಧ ಹೋರಾಟ ನಡೆಸುತ್ತಿದೆ. ಆರು ಹಂತಗಳ ಮತದಾನದಲ್ಲಿಯೂ ನಾವು ಜಯ ಗಳಿಸಬೇಕೆಂದು ಮತದಾರರು ಬಯಸಿದ್ದಾರೆ. ಈ ಹಂತದಲ್ಲಿಯೂ ಕೈ ಹಿಡಿಯಲಿದ್ದಾರೆ. ಮೊದಲ ಬಾರಿ ಹಕ್ಕು ಚಲಾಯಿಸಲಿರುವ ಯುವ ಮತದಾರರ ಹೆಗಲ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಅವರನ್ನು ನಾನು ಸ್ವಾಗತಿಸುತ್ತೇನೆ. ಬದಲಾವಣೆಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಿʼʼ ಎಂದು ಖರ್ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ.

Exit mobile version