Site icon Vistara News

Narendra Modi: ಕಾಂಗ್ರೆಸ್‌ ಪ್ರಣಾಳಿಕೆ ಮುಸ್ಲಿಂ ಲೀಗ್‌ ಚಿಂತನೆಯ ಪ್ರತಿಬಿಂಬ; ಮೋದಿ ವಾಗ್ದಾಳಿ

Narendra Modi

Narendra Modi

ಲಕ್ನೋ: ಲೋಕಸಭಾ ಚುನಾವಣೆ (Lok Sabha Election)ಗೆ ಇನ್ನು ಕೆಲವೇ ದಿನಗಳು ಬಾಕಿ. ಹೀಗಾಗಿ ರಾಜಕೀಯ ಪಕ್ಷಗಳು ಪ್ರಚಾರ, ಪ್ರಣಾಳಿಕೆ ಬಿಡುಗಡೆ ಮುಂತಾದ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಶನಿವಾರ (ಏಪ್ರಿಲ್‌ 6) ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ʼʼಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ದಶಕಗಳ ಹಿಂದಿನದು. ಈಗ ಉಳಿದುಕೊಂಡಿರುವ ಪಕ್ಷವು ಭಾರತದ ನಿರೀಕ್ಷೆಗಳನ್ನು ಈಡೇರಿಸುವಂಥದ್ದಲ್ಲ. ಇತ್ತೀಚೆಗೆ ಬಿಡುಗಡೆಯಾದ ಕಾಂಗ್ರೆಸ್‌ ಪ್ರಣಾಳಿಕೆಯಿಂದ ಇದು ಸ್ಪಷ್ಟವಾಗಿದೆ. ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆʼʼ ಎಂದು ಅವರು ಟೀಕಿಸಿದ್ದಾರೆ.

ʼʼಕಾಂಗ್ರೆಸ್‌ ಪ್ರಣಾಳಿಕೆ ಸುಳ್ಳಿನ ಕಂತೆಯಾಗಿದ್ದು, ಪ್ರತಿಯೊಂದು ಪುಟವೂ ಭಾರತವನ್ನು ಒಡೆಯುವ ಪ್ರಯತ್ನದಂತಿದೆ. ಈ ಮುಸ್ಲಿಂ ಲೀಗ್ ಪ್ರಣಾಳಿಕೆಯ ಉಳಿದ ಭಾಗಗಳಲ್ಲಿ ಎಡಪಂಥೀಯ ಧೋರಣೆ ಪ್ರಾಬಲ್ಯ ಸಾಧಿಸಿದೆʼʼ ಎಂದು ಹೇಳಿದ್ದಾರೆ. ʼʼಬಿಜೆಪಿ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಪ್ರತಿಯೊಂದು ವರ್ಗ, ಪ್ರತಿ ಜಾತಿ ಮತ್ತು ಎಲ್ಲರಿಗೂ ತಲುಪಬೇಕು ಎಂಬುದು ನಮ್ಮ ಆಲೋಚನೆ” ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

ದೇಶಕ್ಕಾಗಿ ಮುಡಿಪು

ʼʼನನ್ನ ಪ್ರತಿ ಕ್ಷಣವನ್ನು ದೇಶಕ್ಕಾಗಿ, ಜನರ ಸೇವೆಗಾಗಿ ಸಮರ್ಪಿಸಿದ್ದೇನೆ. ನಿಮ್ಮ ಕನಸುಗಳನ್ನು ಈಡೇರಿಸುವುದೇ ನನ್ನ ಆದ್ಯತೆʼʼ ಎಂದು ಅವರು ವಾಗ್ದಾನ ನೀಡಿದ್ದಾರೆ. ʼʼಬಡವರಿಗೆ ಬಿಜೆಪಿ ಪಡಿತರ ನೀಡಿದೆ. ಇದನ್ನು ಮುಂದಿನ 5 ವರ್ಷ ಕೂಡ ಮುಂದುವರಿಸುವುದಾಗಿ ನಾವು ಭರವಸೆ ನೀಡುತ್ತೇವೆ. ಎಲ್ಲ ಬಡವರಿಗೆ ಮನೆ, ಗ್ಯಾಸ್ ಸಂಪರ್ಕ ನೀಡಲಾಗಿದ್ದು, ಎಲ್ಲ ಮನೆಗಳಿಗೂ ನಲ್ಲಿ ನೀರು ನೀಡುತ್ತಿದ್ದೇವೆ. ಅಷ್ಟೇ ಅಲ್ಲ, ನಾವು ತ್ರಿವಳಿ ತಲಾಖ್ ವಿರುದ್ಧ ಕಾನೂನನ್ನು ತಂದಿದ್ದೇವೆ. ಮುಸ್ಲಿಂ ಮಹಿಳೆಯರು ಮಾತ್ರವಲ್ಲ, ಇಡೀ ಮುಸ್ಲಿಂ ಸಮುದಾಯವೂ ಸಹ ಇದನ್ನು ಸ್ವಾಗತಿಸಿದೆʼʼ ಎಂದು ಮೋದಿ ಅಭಿಪ್ರಾಯಪಟ್ಟರು.

“ನನ್ನ ಧೈರ್ಯಶಾಲಿ ಹೆಣ್ಣು ಮಕ್ಕಳಿಗೆ ಈ ಹಿಂದೆ ಸೈನ್ಯಕ್ಕೆ ಸೇರಲು ಸಾಧ್ಯವಾಗಿರಲಿಲ್ಲ. ನಾನು ಅದಕ್ಕೆ ಅವಕಾಶ ಮಾಡಿಕೊಟ್ಟೆ. ಸೈನಿಕ ಶಾಲೆಗಳ ಬಾಗಿಲು ತೆರೆದೆ. ನಾವು ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆಯನ್ನು ಖಚಿತಪಡಿಸಿದ್ದೇವೆ ಮತ್ತು ಶಾಸಕಾಂಗಗಳಲ್ಲಿ ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಮೀಸಲಾತಿಗಾಗಿ ಕಾನೂನನ್ನು ಅಂಗೀಕರಿಸಿದ್ದೇವೆ. ಸೈಕಲ್ ಸವಾರಿ ಮಾಡಲು ಸಾಧ್ಯವಾಗದ ನಮ್ಮ ಹಳ್ಳಿಗಳಲ್ಲಿ ಮಹಿಳೆಯರು ಈಗ ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ ಮತ್ತು ಇಸ್ರೋ ಯೋಜನೆಗಳನ್ನು ಸಹ ಮಹಿಳೆಯರು ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಪ್ರಕಟ; ಉದ್ಯೋಗ, 1 ಲಕ್ಷ ರೂ. ಸೇರಿ ಏನೆಲ್ಲ ಗ್ಯಾರಂಟಿ?

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನಿದೆ?

ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಇದೇ ಮಾದರಿಯಲ್ಲಿ ಪ್ರಣಾಳಿಕೆ ಘೋಷಿಸಿದೆ. ಪಂಚ ನ್ಯಾಯ ತತ್ವದಲ್ಲಿ ಯುವಕರಿಗಾಗಿ ಯುವ ನ್ಯಾಯ, ಮಹಿಳೆಯರಿಗೆ ನಾರಿ ನ್ಯಾಯ, ರೈತರಿಗಾಗಿ ಕಿಸಾನ್‌ ನ್ಯಾಯ, ಕಾರ್ಮಿಕರಿಗಾಗಿ ಶ್ರಮಿಕ್‌ ನ್ಯಾಯ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯ ನೀಡುವ ಹಿಸ್ಸೇದಾರಿ ನ್ಯಾಯ ಎಂಬ ಐದು ಘೋಷಣೆಗಳನ್ನು ಕಾಂಗ್ರೆಸ್‌ ಮಾಡಿದೆ. ಅಷ್ಟೇ ಅಲ್ಲ, ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version