Site icon Vistara News

Narendra Modi: ಸಂದೇಶಖಾಲಿಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಗಿಸುವುದೇ ಬಿಜೆಪಿಯ ಗುರಿ ಎಂದ ಮೋದಿ

Narendra Modi

Narendra Modi

ಕೋಲ್ಕತ್ತಾ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಏರತೊಡಗಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಜತೆಗೆ ಆರೋಪ-ಪ್ರತ್ಯಾರೋಪಗಳೂ ಜೋರಾಗಿ ಕೇಳಿ ಬರತೊಡಗಿವೆ. ಗುರುವಾರ (ಏಪ್ರಿಲ್‌ 4) ಬಂಗಾಳದ ಕೂಚ್ ಬೆಹಾರ್ (Coochbehar)ನಲ್ಲಿ ಪ್ರಚಾರ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼಸಂದೇಶಖಾಲಿ ಘಟನೆಯ ಅಪರಾಧಿಗಳನ್ನು ರಕ್ಷಿಸಲು ತೃಣಮೂಲ ಕಾಂಗ್ರೆಸ್‌ ಹೇಗೆ ತನ್ನ ಶಕ್ತಿಯನ್ನು ಚಲಾಯಿಸಿತು ಎಂಬುದನ್ನು ಇಡೀ ದೇಶ ನೋಡಿದೆ. ಆದರೆ ಬಿಜೆಪಿಯು ಮಹಿಳಾ ಸಬಲೀಕರಣದತ್ತ ಗಮನ ಹರಿಸುತ್ತಿದೆ. ಸಂದೇಶಖಾಲಿಯ ಅಪರಾಧಿಗಳು ತಮ್ಮ ಮುಂದಿನ ಜೀವನವನ್ನು ಜೈಲಿನಲ್ಲಿ ಕಳೆಯುತ್ತಾರೆ” ಎಂದು ಮೋದಿ ಭರವಸೆ ನೀಡಿದ್ದಾರೆ.

ʼʼಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬಲಪಡಿಸಬೇಕುʼʼ ಎಂದು ಕರೆ ನೀಡಿದ್ದಾರೆ. “ಟಿಎಂಸಿಯ ದುರಾಡಳಿತದ ಪರಿಣಾಮವಾಗಿ ಸಂದೇಶಖಾಲಿಯಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಈ ಅಪರಾಧಿಗಳನ್ನು ಶಿಕ್ಷೆ ನೀಡುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ” ಎಂದು ಮೋದಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದ ಮೋದಿ

ನರೇಂದ್ರ ಮೋದಿ ತಮ್ಮ ಸಾರ್ವಜನಿಕ ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. “ಮೊದಲನೆಯದಾಗಿ, ನಾನು ಮಮತಾ ದೀದಿ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. 2019ರಲ್ಲಿ ನಾನು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇದೇ ಮೈದಾನಕ್ಕೆ ಬಂದಿದ್ದೆ. ಆ ಸಮಯದಲ್ಲಿ ಮಮತಾ ಅವರು ಈ ಮೈದಾನದ ಮಧ್ಯದಲ್ಲಿ ವೇದಿಕೆಯನ್ನು ನಿರ್ಮಿಸಿದ್ದರು. ಆ ಮೂಲಕ ಮೈದಾನದ ಗಾತ್ರ ಚಿಕ್ಕದಾಗಿಸಿದ್ದರು. ಇದಕ್ಕೆ ಸಾರ್ವಜನಿಕರು ಉತ್ತರ ನೀಡುತ್ತಾರೆ ಎಂದು ನಾನು ಆ ಸಮಯದಲ್ಲಿ ಹೇಳಿದ್ದೆ. ಅದರಂತೆ ನಡೆಯಿತು. ಇಂದು ಅವರು ಅಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ ಮತ್ತು ನಿಮ್ಮೆಲ್ಲರನ್ನೂ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಯಾವುದೇ ಅಡೆತಡೆಗಳನ್ನು ಸೃಷ್ಟಿಸದಿದ್ದಕ್ಕಾಗಿ ನಾನು ಬಂಗಾಳ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮಮತಾ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ರಾಜ್ಯದಲ್ಲಿ ಜಾರಿಗೆ ತರುತ್ತಿಲ್ಲ ಎಂದು ಪ್ರಧಾನಿ ಆರೋಪಿಸಿದ್ದಾರೆ. “ಇಲ್ಲಿನ ಟಿಎಂಸಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ದೇಶದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇದನ್ನು ಜಾರಿ ಮಾಡಲು ಟಿಎಂಸಿ ಸರ್ಕಾರ ನಮಗೆ ಅವಕಾಶ ನೀಡುತ್ತಿಲ್ಲ. ಪಶ್ಚಿಮ ಬಂಗಾಳಕ್ಕೆ ದಾಖಲೆಯ ಪ್ರಮಾಣದ ಅನುದಾನವನ್ನು ನೀಡಿದ್ದರೂ ಟಿಎಂಸಿಯಿಂದಾಗಿ ಅನೇಕ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಬಿಹಾರದಲ್ಲಿ ಮೋದಿ ಅಲೆ; ಚಿರಾಗ್‌ ಪಾಸ್ವಾನ್ ನನ್ನ ಬ್ರದರ್ ಎಂದ ಪ್ರಧಾನಿ

ವಿಶೇಷ ಎಂದರೆ ಇಂದು ಮಮತಾ ಬ್ಯಾನರ್ಜಿ ಅವರೂ ಕೂಚ್ ಬೆಹಾರ್‌ನಲ್ಲಿ ಪ್ರಚಾರ ನಡೆಸಿದ್ದರು. ಪಶ್ಚಿಮ ಬಂಗಾಳದ ಉತ್ತರದ ಜಿಲ್ಲೆಗಳಾದ ಕೂಚ್ ಬೆಹಾರ್, ಅಲಿಪುರ್ದುವಾರ್ ಮತ್ತು ಜಲ್ಪೈಗುರಿ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version