ಹೊಸದಿಲ್ಲಿ: ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನುಡಿದರು. ನೂತನ ಎನ್‌ಡಿಎ ಸಂಸದರ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು.
ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ಎಷ್ಟೋ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ ಎಂದು ಅವರು ಹೇಳಿದರು.
#WATCH | PM Narendra Modi says, "When results were coming out on 4th June, I was busy with work. Phone calls started coming in later. I asked someone, numbers are fine, tell me EVM zinda hai ki mar gaya. These people (Opposition) had decided to ensure that people stop believing… pic.twitter.com/X6nWABhzcH
— ANI (@ANI) June 7, 2024
ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್ ಕಲ್ಯಾಣ್ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು.
ಇವಿಎಂಗಳನ್ನು ವಿರೋಧಿಸಿದ ಇಂಡಿ ಒಕ್ಕೂಟ ಪ್ರಗತಿ ವಿರೋಧಿ, ತಂತ್ರಜ್ಞಾನದ ವಿರೋಧಿ ಎಂದು ಅವರು ನುಡಿದರು. ಪ್ರತಿಪಕ್ಷಗಳು ಇವಿಎಂ ಅನ್ನು ಟೀಕಿಸುತ್ತಿದ್ದವು. ಈಗ ಅದರ ಬಗ್ಗೆ ಮೌನವಾಗಿವೆ. ಹೀಗಾಗಿ ಇವಿಎಂಗಳು ಇವೆಯೋ ಇಲ್ಲವೋ ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದೂ ಅವರು ಚಟಾಕಿ ಸಿಡಿಸಿದರು. ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಚುನಾವಣೆ ಪ್ರಕ್ರಿಯೆಯ ಬಗ್ಗೆ ಅವಿಶ್ವಾಸ ಮೂಡಿಸುವುದೇ ಅವರ ಕೆಲಸವಾಗಿದೆ ಎಂದರು.
ಕಾಂಗ್ರೆಸ್ ನಡವಳಿಕೆಯನ್ನು ಟೀಕಿಸಿದ ಅವರು, ಅವರ ಪಕ್ಷದ ಪ್ರಧಾನಿಯನ್ನೇ ಅವರು ಅವಮಾನಕ್ಕೊಳಪಡಿಸುತ್ತಿದ್ದರು. ಅವರ ಪಕ್ಷದ ಪ್ರಧಾನಿ ಹೊರಗೆ ಹೋದಾಗ ಕುಳಿತುಕೊಳ್ಳಲು ಆಸನ ಇರುತ್ತಿರಲಿಲ್ಲ. ಅಂಥ ಸ್ಥಿತಿಯಿಂದ ಬಂದಿದ್ದರೂ ಈಗಲೂ ತಮ್ಮ ಗೌರವ ಉಳಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ ಎಂದು ಅವರು ಚಾಟಿ ಬೀಸಿದರು. ಹೀಗಿದ್ದರೂ, ಪ್ರತಿಪಕ್ಷದ ಸಂಸದರು ಸದನಕ್ಕೆ ಬಂದು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಎಂಬುದು ನನ್ನ ವಿಶ್ವಾಸ ಎಂದರು.
ಭಾರತದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಮೋದಿ ಲೇವಡಿ ಮಾಡಿದರು. 10 ವರ್ಷಗಳ ಬಳಿಕವೂ ಅದು ಪಾಠ ಕಲಿತಿಲ್ಲ. ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆದ್ದ ಸೀಟುಗಳನ್ನು ಸೇರಿಸಿದರೂ ಈ ಸಲ ಬಿಜೆಪಿ ಗೆದ್ದು ಸೀಟುಗಳಷ್ಟು ಆಗಲಾರದು ಎಂದರು. ಕಳೆದ 10 ವರ್ಷಗಳಲ್ಲಿ ಅದು ಸದನದಲ್ಲಿ ಒಳ್ಳೆಯ ಚರ್ಚೆಗಳನ್ನೇ ಮಾಡಿಲ್ಲ. ಅದಕ್ಕಾಗಿಯೇ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಿ ಎಂದು ಜನ ದಾರಿ ತೋರಿಸಿದ್ದಾರೆ ಎಂದರು.
ಕಾಂಗ್ರೆಸ್ ಈ ದೇಶದ ಜನರನ್ನು ಅಪಮಾನಿಸಿದೆ. ಗೆದ್ದರೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದೆ. ಆದರೆ ಒಂದು ಲಕ್ಷ ಎಲ್ಲಿಂದ ತರುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಇದೀಗ ಜನ ತಮಗೆ ಒಂದು ಲಕ್ಷ ಕೊಡಿ ಎಂದು ಸಾಲುಗಟ್ಟಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್ ಸರ್ಕಾರಗಳು ಬಡಿದೋಡಿಸುತ್ತಿವೆ. ಎನ್‌ಡಿಎ ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ. ಇಂಡಿ ಒಕ್ಕೂಟ ಮಾತ್ರ ಸುಳ್ಳುಗಳನ್ನೇ ಹರಡುತ್ತಾ ಹೋಗುತ್ತಿದೆ ಎಂದರು.
NDA ಎಂದರೆ New ಇಂಡಿಯಾ, Develop ಇಂಡಿಯಾ, Aspirational ಇಂಡಿಯಾ ಎಂದು ಮೋದಿ ನುಡಿದರು. ಚುನಾವಣೆ ವೇಳೆ ಹೇಳಿದಂತೆ ಜನರ ಕೆಲಸಕ್ಕೆ ನಾವು ಸಿದ್ಧ. ಎನ್‌ಡಿಎ ಅಲ್ಲದೆ ಬೇರೆ ಯಾರ ಮೇಲೂ ಜನತೆಗೆ ವಿಶ್ವಾಸವಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನಮ್ಮ ಗುರಿ. ಇದುವರೆಗಿನ 10 ವರ್ಷಗಳ ಆಡಳಿತ ಬರೀ ಟ್ರೇಲರ್ ಎಂದರು. ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಬದಲಾವಣೆಗೆ ಎನ್‌ಡಿಎ ಮುನ್ನುಡಿ ಬರೆದಿದೆ; ಇನ್ನಷ್ಟು ಸಾಧಿಸಿ ತೋರಿಸಲಿದೆ.