Site icon Vistara News

Navneet Rana: 15 ಸೆಕೆಂಡು ಕೊಟ್ಟರೆ ಸಾಕು, ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ; ಓವೈಸಿ ಸಹೋದರರ ವಿರುದ್ಧ ಬಿಜೆಪಿ ನಾಯಕಿ ಗುಡುಗು

Navneet Rana

Navneet Rana

ಹೈದರಾಬಾದ್‌: 2013ರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಕ್ಬರುದ್ದೀನ್ ಓವೈಸಿ (Akbaruddin Owaisi) ನೀಡಿದ್ದ ಪ್ರಚೋದನಕಾರಿ ಹೇಳಿಕೆಯನ್ನು ಉಲ್ಲೇಖಿಸಿದ ಬಿಜೆಪಿ ನಾಯಕಿ ನವನೀತ್ ರಾಣಾ (Navneet Rana) ಹೈದರಾಬಾದ್‌ನಲ್ಲಿ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿನ ʼಹಿಂದೂ-ಮುಸ್ಲಿಂ ಅನುಪಾತವನ್ನುʼ ಸಮತೋಲನಗೊಳಿಸಲು ’15 ನಿಮಿಷʼ ಪೊಲೀಸರನ್ನು ತೆರವುಗೊಳಿಸಿದರೆ ಸಾಕು ಎಂದು ಅಕ್ಬರುದ್ದೀನ್ ಓವೈಸಿ ಅಂದು ಹೇಳಿಕೆ ನೀಡಿದ್ದರು. ಇದಕ್ಕೆ ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ನಡೆಸಿದ ನವನೀತ್‌ ರಾಣಾ ಈ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ. ʼʼನಮಗೆ 15 ನಿಮಿಷ ಬೇಡ, 15 ಸೆಕೆಂಡುಗಳ ಕಾಲ ಪೊಲೀಸರನ್ನು ತೆರವುಗೊಳಿಸಿದರೂ ಸಾಕು. ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆʼʼ ಎಂದಿದ್ದಾರೆ.

ಘಟಾನುಘಟಿಗಳ ಸ್ಪರ್ಧೆಯ ಕಾರಣದಿಂದ ಹೈದರಾಬಾದ್‌ ಲೋಕಸಭಾ ಕ್ಷೇತ್ರ ಈ ಬಾರಿ ದೇಶದ ಗಮನ ಸೆಳೆದಿದೆ. ಇಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ಮಾಧವಿ ಲತಾ ಅವರು ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi)  ವಿರುದ್ಧ ಕಣಕ್ಕಿಳಿದಿದ್ದಾರೆ. ಅಸಾದುದ್ದೀನ್‌ ಓವೈಸಿ ಅವರ ಸಹೋದರ ಈ ಅಕ್ಬರುದ್ದೀನ್ ಓವೈಸಿ. ಅವರು 2013ರಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ʼʼ15 ನಿಮಿಷ ಪೊಲೀಸರನ್ನು ತೆರವುಗೊಳಿಸಿ ನೋಡಿ. 100 ಕೋಟಿ ಹಿಂದುಗಳಿಗೆ ನಾವು ಏನು ಎಂಬುದನ್ನು ತೋರಿಸುತ್ತೇವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನವನೀತ್‌ ರಾಣಾ ಈ 15 ಸೆಕೆಂಡ್‌ಗಳ ಹೇಳಿಕೆ ನೀಡಿದ್ದಾರೆ. ʼʼಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರಿಬ್ಬರೂ ಅಣ್ಣ-ತಮ್ಮಂದಿರು ತಾನೇ. ಈ ಹಿಂದೆ ಅಕ್ಬುರುದ್ದೀನ್ ಓವೈಸಿ 15 ನಿಮಿಷ ಪೊಲೀಸರನ್ನು ತೆರವುಗೊಳಿಸಿದರೆ, ನಾವೇನೆಂದು ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ನಾವು ಹೇಳುತ್ತೇವೆ. ನಮಗೆ 15 ನಿಮಿಷ ಬೇಡ, 15 ಸೆಕೆಂಡು ಸಾಕು. 15 ಸೆಕೆಂಡು ಕಾಲ ಪೊಲೀಸರನ್ನು ತೆರವುಗೊಳಿಸಿದರೂ ಸಾಕು, ಅಣ್ಣ ತಮ್ಮಂದಿರಿಬ್ಬರು ಎಲ್ಲಿಂದ ಬಂದಿದ್ದಾರೆ, ಎಲ್ಲಿಗೆ ಹೋದರು ಎಂಬುದೂ ತಿಳಿಯಬಾರದು. ಹಾಗೆ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.

ಎಐಎಂಐಎಂ ಆಕ್ಷೇಪ

ನವನೀತ್ ರಾಣಾ ಅವರ ಹೇಳಿಕೆಗೆ ಎಐಎಂಐಎಂ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಮುಖಂಡ ವಾರಿಸ್ ಪಠಾಣ್, ʼʼನವನಿತ್ ರಾಣಾ ಅವರಿಗೆ ಈ ಬಾರಿ ಅಮರಾವತಿಯಲ್ಲಿ ಹೀನಾಯ ಸೋಲು ಖಚಿತವಾಗಿದೆ. ಹೀಗಾಗಿಯೇ ಅವರು ಈ ಆಘಾತವನ್ನು ತಾಳಲಾರದೆ ಹೀಗೆಲ್ಲ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಮಾತುಗಳಿಗೆ ಚುನಾವಣಾ ಆಯೋಗ ಯಾಕೆ ಕ್ರಮ ಕೈಗೊಂಡಿಲ್ಲ?ʼʼ ಎಂದು ಪ್ರಶ್ನಿಸಿದ್ದಾರೆ. ʼʼಬಿಜೆಪಿಯವರು ಕೋಮು ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದ್ದಾರೆʼʼ ಎಂದೂ ಅವರು ದೂರಿದ್ದಾರೆ.

ಇದನ್ನೂ ಓದಿ: Madhavi Lata: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಮಾಧವಿ ಲತಾಗೆ ವೈ+ಭದ್ರತೆ ಒದಗಿಸಿದ ಕೇಂದ್ರ

ಹಿಂದು ಧರ್ಮದ ಕುರಿತು ಪ್ರಖರವಾಗಿ ಮಾತನಾಡುವ, ಹೈದರಾಬಾದ್‌ನಲ್ಲಿ ಎಐಎಂಐಎಂ ಪಕ್ಷದ ವೈಫಲ್ಯಗಳನ್ನು ತೋರಿಸುವ ಛಾತಿ ಹೊಂದಿರುವ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಹಿಂದು ಫೈರ್‌ ಬ್ರ್ಯಾಂಡ್‌ ಎನಿಸಿದ್ದಾರೆ. ಇವರಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿಯು ಹೈದರಾಬಾದ್‌ ಲೋಕಸಭೆ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಹಾಗಾಗಿ, ಈ ಬಾರಿ ಹೈದರಾಬಾದ್‌ನಲ್ಲಿ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಅಸಾದುದ್ದೀನ್‌ ಓವೈಸಿ ಅವರಿಗೆ ತೀವ್ರ ಪೈಪೋಟಿ ನೀಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

Exit mobile version