ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) 294 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್‌ಡಿಎ (NDA) ಸರ್ಕಾರ ರಚಿಸಲು ಮುಂದಾಗಿದೆ. ಬುಧವಾರ (ಜೂನ್ 5) ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ (Narendra Modi) ಅವರ ನಿವಾಸದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಜೆಡಿಯು, ಟಿಡಿಪಿ, ಎಲ್‌ಜೆಪಿ ಸೇರಿ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿವೆ. ಈ ಸಭೆಯಲ್ಲಿ ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಯಿತು ಎನ್ನುವ ವಿವರ ಇಲ್ಲಿದೆ (NDA Meeting).
- ಕಳೆದ 10 ವರ್ಷಗಳಲ್ಲಿ ಎನ್‌ಡಿಎ (NDA) ಸರ್ಕಾರ ಸಾರ್ವಜನಿಕ ಕಲ್ಯಾಣ ನೀತಿಗಳ ಮೂಲಕ ಗಮನ ಸೆಳೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದುತ್ತಿದ್ದು, ಇದನ್ನು ಕೋಟ್ಯಂತರ ಮಂದಿ ಗಮನಿಸುತ್ತಿದ್ದಾರೆ.
- ಸುಮಾರು ಆರು ದಶಕಗಳ ಸುದೀರ್ಘ ಅಂತರದ ನಂತರ, ಭಾರತದ ಜನರು ಸತತ ಮೂರನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಬಲವಾದ ನಾಯಕತ್ವವನ್ನು ಆಯ್ಕೆ ಮಾಡಿದ್ದಾರೆ.
- 2024ರ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎದುರಿಸಿದ ಎನ್‌ಡಿಎ ಹೋರಾಡಿ ಗೆದ್ದಿದೆ. ಈ ವಿಷಯದ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ನಾವು (ಎಲ್ಲ ಎನ್‌ಡಿಎ ನಾಯಕರು) ನರೇಂದ್ರ ಮೋದಿ ಅವರನ್ನು ನಮ್ಮ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ.
- ಮೋದಿ ಅವರ ನಾಯಕತ್ವದಲ್ಲಿ, ಎನ್‌ಡಿಎ (NDA) ಸರ್ಕಾರವು ಭಾರತದ ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ತುಳಿತಕ್ಕೊಳಗಾದ, ವಂಚಿತರ ಸೇವೆ ಮಾಡಲು ಬದ್ಧ.
- ಭಾರತದ ಪರಂಪರೆಯನ್ನು ಸಂರಕ್ಷಿಸುವ ಮೂಲಕ ಎನ್‌ಡಿಎ ಸರ್ಕಾರವು ಪ್ರತಿಯೊಬ್ಬ ನಾಗರಿಕನ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.
Visuals from the National Democratic Alliance (NDA) meeting held at Prime Minister Shri Narendra Modi's residence. pic.twitter.com/S7yH7Fe5fj
— BJP (@BJP4India) June 5, 2024
ಯಾರೆಲ್ಲ ಭಾಗಿಯಾಗಿದ್ದರು?
ಎನ್‌ಡಿಎ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಜನತಾದಳ (ಜಾತ್ಯತೀತ) ನಾಯಕ ಎಚ್.ಡಿ.ಕುಮಾರಸ್ವಾಮಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ಮತ್ತಿತರರು ಭಾಗವಹಿಸಿದ್ದರು.
ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶದ ಪ್ರಕಾರ ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 99 ಕಡೆ ಜಯ ಗಳಿಸಿದೆ. ಮ್ಯಾಜಿಕ್ ನಂಬರ್ 272. 2019ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಮತ್ತು 2014ರ ಚುನಾವಣೆಯಲ್ಲಿ 282 ಸ್ಥಾನಗಳನ್ನು ಗೆದ್ದಿತ್ತು.
ಇದನ್ನೂ ಓದಿ: India Bloc Meeting: ಆಡಳಿತದ ಆಸೆ ಕೈಬಿಟ್ಟ ಇಂಡಿಯಾ ಒಕ್ಕೂಟ; ಒಗ್ಗಟ್ಟಿಗಾಗಿ ಸಭೆ, ಬಲಿಷ್ಠ ಪ್ರತಿಪಕ್ಷದ ಗುರಿ!