Site icon Vistara News

Nitin Gadkari: ಯಾವ ಸರ್ಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

Nitin Gadkari

NHAI To Earn Additional Rs 10,000 Crore In Toll Revenue With GPS-Based Technology

ಮುಂಬೈ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ 4 ಹಂತಗಳ ಮತದಾನ ಮುಗಿದಿದೆ. ಮೇ 20ರಂದು 5ನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಶಿವಸೇನೆಯ ಹೇಮಂತ್ ಗೋಡ್ಸೆ ಪರ ನಡೆದ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ʼʼಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಯಾವ ಸರ್ಕಾರದಿಂದಲೂ ಬದಲಾಯಿಸಲು ಸಾಧ್ಯವಾಗದು. ಅದರಲ್ಲಿನ ಸೆಕ್ಷನ್‌ಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ತರಬಹುದಷ್ಟೆ. ಕಾಂಗ್ರೆಸ್ ಸಂವಿಧಾನವನ್ನು 80 ಬಾರಿ ತಿದ್ದುಪಡಿ ಮಾಡಿದೆ. ಅದರ ಹೊರತಾಗಿಯೂ, ನಾವು (ಬಿಜೆಪಿ) ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್‌ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ.

ʼʼಸಬ್‌ ಕ ಸಾಥ್‌, ಸಬ್‌ ಕ ವಿಕಾಸ್‌ʼ ಎನ್ನುವುದು ನರೆಂದ್ರ ಮೋದಿ ನೇತೃತ್ವದ ಸರ್ಕಾರದ ಧ್ಯೇಯ ವಾಕ್ಯ. ಅದರಂತೆ ಕೇಂದ್ರ ಸರ್ಕಾರ ಸಮಾಜದ ಪ್ರತಿಯೊಬ್ಬರಿಗೂ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದೆ. ಬಡವರು, ಶೋಷಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಅವರಿಗಾಗಿ ವಿವಿಧ ಯೋಜನೆಗಳನ್ನೂ ಪ್ರಕಟಿಸಲಾಗಿದೆʼʼ ಎಂದು ವಿವರಿಸಿದ್ದಾರೆ.

ʼʼನಾಸಿಕ್‌ನ ಎರಡು ಪ್ರಮುಖ ಬೆಳೆಗಳಾದ ಈರುಳ್ಳಿ ಮತ್ತು ದ್ರಾಕ್ಷಿಯ ಸಂಗ್ರಹಣೆ ಮತ್ತು ಸಂಸ್ಕರಣೆಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆʼʼ ಎಂದೂ ಸಚಿವರು ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಆರೋಪ ಹೊರಿಸಿದ್ದ ಖರ್ಗೆ

ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ಹಿಂದೆ ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. ಜತೆಗೆ ಅನೇಕ ಬಿಜೆಪಿ ನಾಯಕರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆʼʼ ಎಂದಿದ್ದರು. ಜತೆಗೆ ʼʼಸಂವಿಧಾನ ಬದಲಾವಣೆ ನಿಜವಾಗಿಯೂ ನಿಮ್ಮ ಉದ್ದೇಶವಲ್ಲದಿದ್ದರೆ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ನೀವು ಏಕೆ ಕ್ರಮ ಕೈಗೊಳ್ಳಬಾರದು?” ಎಂದು ಮೋದಿ ಅವರನ್ನು ಪ್ರಶ್ನಿಸಿದ್ದರು. ʼʼನೀವು (ಮೋದಿ) ನಿಮ್ಮ 56 ಇಂಚಿನ ಎದೆಯ ಬಗ್ಗೆ ಪದೇ ಪದೆ ಮಾತನಾಡುತ್ತೀರಿ. ಆದರೆ ಸಂವಿಧಾನದ ವಿರುದ್ಧವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಯಾಕೆ?ʼʼ ಎಂದು ಕೇಳಿದ್ದರು.

ಇದನ್ನೂ ಓದಿ: Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಸಿದ್ಧಾಂತಗಳ ನಡುವಿನ ಕದನ ಎಂದಿದ್ದ ಖರ್ಗೆ, ʼʼಒಂದು ಬಣ ಬಡವರಿಗಾಗಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಬಣ ಧರ್ಮದ ಆಧಾರದಲ್ಲಿ ತಮ್ಮ ಶ್ರೀಮಂತ ಗೆಳೆಯರಿಗಾಗಿ ಕಣ್ಣಕ್ಕಿಳಿದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡಲು ನಾವು ಹೋರಾಟ ನಡೆಸುತ್ತಿದ್ದೇವೆʼʼ ಎಂದು ಹೇಳಿದ್ದರು.

Exit mobile version