Site icon Vistara News

Nitish Kumar: ಇಂಡಿ ಒಕ್ಕೂಟದ ಸಂಚಾಲಕ ಹುದ್ದೆ ನೀಡಲು ನಿರಾಕರಿಸಿದ್ದ ನಿತೀಶ್ ಕುಮಾರ್‌ಗೆ ಈಗ ಪ್ರಧಾನಿಯ ಆಫರ್!

Nitish Kumar

Nitish Kumar

ನವದಹಲಿ: ಲೋಕಸಭಾ ಚುನಾವಣೆಯಲ್ಲಿ 292 ಸೀಟುಗಳನ್ನು ಪಡೆಯುವ ಮೂಲಕ ಎನ್‌ಡಿಎ (NDA) ಸತತ ಮೂರನೇ ಬಾರಿಗೆ ಅಧಿಕಾರ ನಡೆಸಲಿದೆ. ಈಗಾಗಲೇ ಒಕ್ಕೂಟದ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಅದರಂತೆ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ನಾಳೆ (ಜೂನ್‌ 9) ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಈ ಮಧ್ಯೆ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ಸೂಚಿಸಿರುವ ನಿತೀಶ್‌ ಕುಮಾರ್‌ (Nitish Kumar) ಅವರಿಗೆ ಪ್ರತಿಪಕ್ಷಗಳ ಇಂಡಿ ಮೈತ್ರಿಕೂಟ ಪ್ರಧಾನಿ ಹುದ್ದೆಯ ಆಫರ್‌ ನೀಡಿತ್ತು ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ (KC Tyagi) ಬಾಂಬ್‌ ಸಿಡಿಸಿದ್ದಾರೆ.

ʼʼತಮಗೆ ಬೆಂಬಲ ನೀಡಿದರೆ ಪ್ರಧಾನ ಮಂತ್ರಿ ಹುದ್ದೆ ನೀಡುವುದಾಗಿ ನಿತೀಶ್‌ ಕುಮಾರ್‌ ಅವರಿಗೆ ಇಂಡಿ ಒಕ್ಕೂಟದ ನಾಯಕರು ಆಮಿಷ ಒಡ್ಡಿದ್ದರು. ಆದರೆ ನಿತೀಶ್‌ ಕುಮಾರ್‌ ಈ ಆಫರ್‌ ನಿರಾಕರಿಸಿದ್ದಾರೆʼʼ ಎಂದು ತ್ಯಾಗಿ ಹೇಳಿದ್ದಾರೆ. ಬಿಹಾರದಲ್ಲಿ ಜೆಡಿಯು 12 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಆ ಮೂಲಕ ನಿತೀಶ್‌ ಕುಮಾರ್‌ ಕಿಂಗ್‌ ಮೇಕರ್‌ ಆಗಿ ಬದಲಾಗಿದ್ದಾರೆ.

16 ಲೋಕಸಭಾ ಸ್ಥಾನಗಳನ್ನು ಗೆದ್ದ ಆಂಧ್ರ ಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಸದ್ಯ ದೇಶದಲ್ಲಿ ಮತ್ತೊಬ್ಬ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಬೆಂಬಲ ನೀಡುವಂತೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರೊಂದಿಗೆ ಇಂಡಿ ಒಕ್ಕೂಟವು ಮಾತುಕತೆ ನಡೆಸಿದೆ ಎಂಬ ವರದಿಗಳ ಮಧ್ಯೆ ಕೆ.ಸಿ.ತ್ಯಾಗಿ ಈ ಸ್ಪಷ್ಟನೆ ನೀಡಿದ್ದಾರೆ.

ಇಬ್ಬರೂ ನಾಯಕರು ಇಂಡಿ ಒಕ್ಕೂಟದ ಆಫರ್‌ ನಿರಾಕರಿಸಿದ್ದು, ಈಗಾಗಲೇ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಖಿತ ಬೆಂಬಲ ನೀಡಿದ್ದಾರೆ. ಆದಾಗ್ಯೂ ಅವರು ಕ್ಯಾಬಿನೆಟ್ ಸ್ಥಾನಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಯುನ ಹಿರಿಯ ನಾಯಕರಾಗಿರುವ ತ್ಯಾಗಿ ಅವರು ಈ ಬಗ್ಗೆ ಮಾತನಾಡಿ, ʼʼಈ ಹಿಂದೆ ನಿತೀಶ್ ಕುಮಾರ್ ಅವರನ್ನು ಇಂಡಿ ಒಕ್ಕೂಟದ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲು ನಿರಾಕರಿಸಲಾಗಿತ್ತು. ಈಗ ಅವರೇ ಪ್ರಧಾನಿಯನ್ನಾಗಿ ಮಾಡಲು ಪ್ರಸ್ತಾಪಗಳನ್ನು ಮುಂದಿಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಸರಿಯದ ಪ್ರಾತಿನಿಧ್ಯ ಲಭಿಸದೇ ಇರುವುದು ನಿತೀಶ್‌ ಕುಮಾರ್‌ ಅವರು ಇಂಡಿ ಒಕ್ಕೂಟ ತೊರೆಯಲು ಕಾರಣ ಎಂದೂ ತ್ಯಾಗಿ ವಿವರಿಸಿದ್ದಾರೆ. ಯಾವುದೇ ಕಾರಣಕ್ಕೂ ಇನ್ನು ಇಂಡಿ ಒಕ್ಕೂಟಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರಿಯಾದ ಗೌರವ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಹುದ್ದೆಯ ಆಮಿಷ ಒಡ್ಡಿರುವ ಹೇಳಿಕೆಯನ್ನು ಕಾಂಗ್ರೆಸ್‌ ನಿರಾಕರಿಸಿದೆ.

ಇದನ್ನೂ ಓದಿ: Modi 3.0 Cabinet: ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲ ಸಚಿವ ಸ್ಥಾನ? ಇವರೇ ನೋಡಿ ಸಂಭಾವ್ಯ ಮಿನಿಸ್ಟರ್‌ಗಳು

ಜನವರಿಯಲ್ಲಿ ಇಂಡಿ ಮೈತ್ರಿಕೂಟದ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ ಕೆಲವೇ ದಿನಗಳ ನಂತರ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟ 234 ಗೆದ್ದುಕೊಂಡಿದೆ. ಸಂಸತ್ತಿನ ಮ್ಯಾಜಿಕ್‌ ನಂಬರ್‌ 272.

Exit mobile version