ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು (Election Results 2024), ಬಿಜೆಪಿ ನೇತೃತ್ವದ ಎನ್‌ಡಿಎ (NDA) 292 ಸೀಟುಗಳನ್ನು ಗೆದ್ದುಕೊಂಡು ಅತೀ ದೊಡ್ಡ ಒಕ್ಕೂಟವಾಗಿ ಹೊರ ಹೊಮ್ಮಿದೆ. ಈ ಮೂಲಕ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ ಅನ್ನು ದಾಟಿದ್ದು, ಸರ್ಕಾರ ರಚನೆಯ ಕಸರತ್ತು ಆರಂಭವಾಗಿದೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು (N Chandrababu Naidu) ನೇತೃತ್ವದ ಟಿಡಿಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯು ಈಗಾಗಲೇ ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದೆ. ಈ ಮಧ್ಯೆ ಎರಡೂ ಪಕ್ಷಗಳು ಹೊಸ ಸರ್ಕಾರದಲ್ಲಿ ಪ್ರಮುಖ ಹುದ್ದೆಯಾದ ಸ್ಪೀಕರ್ ಪೋಸ್ಟ್ ನೀಡುವಂತೆ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ.
ಸ್ಪೀಕರ್ ಹುದ್ದೆಯನ್ನು ಮೈತ್ರಿ ಕೂಟಗಳಿಗೆ ನೀಡಬೇಕು ಎಂದು ಉಭಯ ಪಕ್ಷಗಳು ಈಗಾಗಲೇ ಬಿಜೆಪಿ ನಾಯಕತ್ವಕ್ಕೆ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. 1990ರ ದಶಕದ ಕೊನೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾಗ ಟಿಡಿಪಿಯ ಜಿಎಂಸಿ ಬಾಲಯೋಗಿ ಸ್ಪೀಕರ್ ಆಗಿದ್ದರು.
ಭವಿಷ್ಯದಲ್ಲಿ ಸಂಭವಿಸಬಹುದಾದ ವಿಭಜನೆಯಿಂದ ಮೈತ್ರಿಯನ್ನು ರಕ್ಷಿಸುವ ಉದ್ದೇಶದಿಂದ ಪಕ್ಷಗಳು ಈ ಬೇಡಿಕೆ ಸಲ್ಲಿಸಿವೆ ಎಂದು ಅಂದಾಜಿಸಲಾಗಿದೆ. ಪಕ್ಷಾಂತರ ವಿರೋಧಿ ಕಾನೂನಿನಲ್ಲಿ ಸ್ಪೀಕರ್ ಪಾತ್ರವು ನಿರ್ಣಾಯಕವಾಗಿದೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಳ್ಳಬಹುದಾಗಿದ್ದು, ಇದೇ ಕಾರಣಕ್ಕೆ ಸ್ಪೀಕರ್ ಹುದ್ದೆ ಮುಖ್ಯ ಎನಿಸಿಕೊಂಡಿದೆ.
ಪ್ರಮುಖ ಖಾತೆಗಳಿಗೆ ಬೇಡಿಕೆ?
ಇದರ ಜತೆಗೆ ಕಿಂಗ್ ಮೇಕರ್ ಆಗಿರುವ ಟಿಡಿಪಿ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಖಾತೆಗಳನ್ನು ಕೋರಬಹುದು ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲ ಕೃಷಿ, ಜಲಶಕ್ತಿ, ಐಟಿ ಮತ್ತು ರಾಜ್ಯ ಹಣಕಾಸು ಖಾತೆಗಳಿಗೂ ಬೇಡಿಕೆ ಇಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಟಿಡಿಪಿ 5-6 ಖಾತೆಗಳಿಗಾಗಿ ಹಕ್ಕು ಮಂಡಿಸಲಿದೆ.
ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ 272. ಕಳೆದ ಬಾರಿ ಬಿಜೆಪಿ ಒಂದೇ 303 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಕಮಲ ಪಡೆಗೆ ಕೇವಲ 240 ಸ್ಥಾನ ಸಿಕ್ಕಿದೆ. ಹೀಗಾಗಿ ಸರ್ಕಾರ ರಚಿಸಲು ಮಿತ್ರಪಕ್ಷಗಳ ಸಹಕಾರ ಅನಿವಾರ್ಯ. ಮಿತ್ರಪಕ್ಷಗಳೆಲ್ಲ ಸೇರಿ ಎನ್‌ಡಿಎಗೆ 292 ಸ್ಥಾನಗಳಿವೆ. ಇತ್ತ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟ 234 ಸ್ಥಾನ ಪಡೆದುಕೊಂಡಿದ್ದು, ಸರ್ಕಾರ ರಚನೆಯ ಪ್ರಯತ್ನದಲ್ಲಿದೆ. ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆಯುವ ಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ. ಬುಧವಾರ ʼಇಂಡಿಯಾʼ ಒಕ್ಕೂಟ ಕೂಡ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದೆ.
ಇದನ್ನೂ ಓದಿ: Election Results 2024 : ಫಲಿತಾಂಶ ಬದಲಾಯಿಸಿದ್ದು ಮುಸ್ಲಿಂ ಮತಗಳೇ? ಈ ಬಾರಿ 15 ಮುಸ್ಲಿಂ ಸಂಸದರ ಆಯ್ಕೆ
ಜೂನ್ 8ರಂದು ಮೋದಿ ಪ್ರಮಾಣ ವಚವ ಸ್ವೀಕಾರ?
ಉತ್ತರ ಪ್ರದೇಶದ ವಾರಾಣಾಸಿಯಿಂದ ಸ್ಪರ್ಧಿಸಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿ ಜೂನ್ 8ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಅಂದು ಸಂಜೆ 4 ಗಂಟೆಗೆ ಸಮಾರಂಭ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.