ಪಟನಾ: ಬಿಹಾರದ ನವಾಡಾದಲ್ಲಿ ನಡೆದ ಎನ್‌ಡಿಎ (NDA) ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ತಮ್ಮೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ನಿತೀಶ್ ಕುಮಾರ್ ಅವರು 25 ನಿಮಿಷಗಳ ಭಾಷಣ ಮಾಡಿದ್ದರು. ಅವರು ಮಾತು ಮುಗಿಸುತ್ತಿದ್ದಂತೆ ಮೋದಿ ಅವರು, “ನೀವು ಉತ್ತಮ ಭಾಷಣವನ್ನು ಮಾಡಿದ್ದೀರಿ. ಇನ್ನು ನಾನು ಹೇಳಲು ಏನೂ ಉಳಿದಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನು ಕೇಳಿದ ನಿತೀಶ್ ಕುಮಾರ್ ಅವರು ಮುಗುಳ್ನಕ್ಕು, ಬಾಗಿ ಪ್ರಧಾನಿಯ ಕಾಲು ಸ್ಪರ್ಶಿಸಿದರು. ”ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮೆಲ್ಲ ವೋಟನ್ನು ಪ್ರಧಾನಿ ಮೋದಿ ಅವರಿಗೇ ನೀಡಲಿದ್ದಾರೆ” ಎಂದು ನಿತೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
This should go viral and everyone in Bihar should watch this
— AmOxxicillin FC (@amoxcicillin1) April 7, 2024
Nitish Kumar had to touch Modi's feet and then do Pranam to him. This is what Chief Minister has reduced to?
Stop treating someone like God. pic.twitter.com/6aH6UgR7CH
ವಿಪಕ್ಷಗಳ ವಿರಿದ್ಧ ಮೋದಿ ಗುಡುಗು
ಇಂಡಿಯಾ(I.N.D.I.A.) ಮೈತ್ರಿಕೂಟವು ಭ್ರಷ್ಟ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಅಡಗುತಾಣವಾಗಿದೆ ಎಂದು ನರೇಂದ್ರ ಮೋದಿ ಆರೋಪಿಸಿದರು. ಅವರು ಇಂಡಿಯಾ ಮೈತ್ರಿಕೂಟ, ಕಾಂಗ್ರೆಸ್ ಹಾಗೂ ಆರ್ಜೆಡಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು.
ಖರ್ಗೆ ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲವೇ? ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ, ಖರ್ಗೆ ಮಾತು ದೇಶ ವಿರೋಧಿಗಳ ಮಾತಿನಂತೆ ಭಾಸವಾಗುತ್ತಿದೆ. ʼಇಂಡಿಯಾʼ ಮೈತ್ರಿಕೂಟವು ತನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವವರೆಗೆ ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅವರ ನಾಯಕರೊಬ್ಬರು ಹಠ ಹಿಡಿದಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿಮ್ಮಂತೆ ನಾನೂ ಕೂಡ ಬಡತನದಿಂದ ಬಂದಿದ್ದೇನೆ. ದೇಶದ ಪ್ರತಿಯೊಬ್ಬ ಸಹೋದರ ಸಹೋದರಿಯರ ಬಡತನವನ್ನು ತೊಡೆದುಹಾಕುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ನಾನು ನೀಡಿದ ಭರವಸೆಗಳು ʼಇಂಡಿಯಾʼ ಮೈತ್ರಿ ಕೂಟಕ್ಕೆ ಇಷ್ಟವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
‘ಇಂಡಿಯಾ’ ಒಕ್ಕೂಟದ ಸಂಚಾಲಕನಾಗಲು ಒಪ್ಪಿಕೊಳ್ಳದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನವರಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ಆ ಮೂಲಕ ಬಿಜೆಪಿ ಜತೆಗಿನ ದೋಸ್ತಿಯೇ ಒಳಿತು ಎಂದು ಭಾವಿಸಿರುವ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಆರ್‌ಜೆಡಿ ಜತೆಗಿನ ಮೈತ್ರಿಗೆ ಇತಿಶ್ರೀ ಹಾಡಿದ್ದರು. ಇನ್ನು ನಿತೀಶ್ ಕುಮಾರ್ ಜತೆ ಕೈ ಜೋಡಿಸುವ ಮೂಲಕ ಬಿಜೆಪಿಯು ಬಿಹಾರ ರಾಜಕೀಯ ಹಾಗೂ ಲೋಕಸಭೆ ಚುನಾವಣೆ ಮೇಲೆ ಹಿಡಿತ ಸಾಧಿಸಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ.
ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್ ಕುಮಾರ್ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.
ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಇಲ್ಲ ಎಂದ ಟಿಎಂಸಿ