Site icon Vistara News

Naveen Patnaik: ಒಡಿಶಾದಲ್ಲಿ ಮುಖ ತಿರುಗಿಸಿದ ನವೀನ್‌ ಪಟ್ನಾಯಕ್; ಬಿಜೆಪಿ- ಬಿಜೆಡಿ ಸ್ವತಂತ್ರ ಸ್ಪರ್ಧೆ

Odisha chief minister Naveen Patnaik

#image_title

ಹೊಸದಿಲ್ಲಿ: ಒಡಿಶಾದಲ್ಲಿ (Odisha) ನವೀನ್‌ ಪಟ್ನಾಯಕ್‌ (Naveen Patnaik) ಆಡಳಿತಾರೂಢ ಬಿಜು ಜನತಾ ದಳ (Biju Janata Dal – BJD) ಮತ್ತು ಭಾರತೀಯ ಜನತಾ ಪಕ್ಷ (BJP) ನಡುವಿನ ಬಹು ನಿರೀಕ್ಷಿತ ಚುನಾವಣಾ ಪೂರ್ವ ಮೈತ್ರಿ (BJP- BJD) ಮತ್ತು ಸೀಟು ಹಂಚಿಕೆ (Seat sharing) ಮಾತುಕತೆ ವಿಫಲವಾಗಿದೆ. ಹೀಗಾಗಿ ಎರಡೂ ಪಕ್ಷಗಳೂ ಮುಂಬರುವ ಲೋಕಸಭೆ ಚುನಾವಣೆ (Lok Sabha Election 2024) ಹಾಗೂ ವಿಧಾನಸಭೆ ಚುನಾವಣೆಯಲ್ಲಿ (Assembly Election) ಪ್ರತ್ಯೇಕವಾಗಿ ಸೆಣಸಲಿವೆ.

ನಿನ್ನೆ ದೆಹಲಿಯಲ್ಲಿ ನಡೆದ ಉಭಯ ಪಕ್ಷಗಳ ಮಾತುಕತೆಯು, ಎರಡು ಪ್ರಮುಖ ಕ್ಷೇತ್ರಗಳಾದ ಭುವನೇಶ್ವರ್ ಮತ್ತು ಪುರಿಯ ಕುರಿತ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ವಿಫಲವಾದವು. ಯಾವುದೇ ಒಮ್ಮತಕ್ಕೆ ಬರಲಿಲ್ಲ. ಶುಕ್ರವಾರ ಸಂಜೆ ಇತರ ಹಿರಿಯ ನಾಯಕರೊಂದಿಗೆ ಭುವನೇಶ್ವರಕ್ಕೆ ಹಿಂದಿರುಗಿದ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್, ಒಡಿಶಾದ ಎಲ್ಲಾ 147 ವಿಧಾನಸಭಾ ಮತ್ತು 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದರು.

“ದೆಹಲಿಯಲ್ಲಿನ ಚರ್ಚೆಗಳು ಮುಂಬರುವ ಚುನಾವಣೆಯ ಸಿದ್ಧತೆಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿವೆ. ಮೈತ್ರಿ ಅಥವಾ ಸೀಟು ಹಂಚಿಕೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸಮಲ್ ಹೇಳಿದರು. “ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾವು (ಬಿಜೆಪಿ) ಸ್ವತಂತ್ರವಾಗಿ ಚುನಾವಣೆಗೆ ಹೋಗುತ್ತೇವೆ” ಎಂದು ಸಮಾಲ್ ಹೇಳಿದ್ದಾರೆ. “ರಾಜ್ಯದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ನಮ್ಮ ಸಿದ್ಧತೆಗಳ ಕುರಿತು ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲು ನಾವು ದೆಹಲಿಗೆ ಹೋಗಿದ್ದೆವು. ಸಭೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಅಥವಾ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿಲ್ಲ. ಬಿಜೆಪಿ ಸ್ವಂತ ಬಲದ ಮೇಲೆ ಅವಳಿ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ” ಎಂದಿದ್ದಾರೆ.

15 ವರ್ಷಗಳ ಹಿಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (NDA) ಬಿಜೆಡಿ ನಿರ್ಗಮಿಸಿತ್ತು. ಬಿಜೆಪಿಯ ಮಾಜಿ ನಾಯಕಿ ಮತ್ತು ಸಚಿವೆ ಸುಷ್ಮಾ ಸ್ವರಾಜ್ ಅವರು ಅಂದು, ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಅವರು “11 ವರ್ಷಗಳ ಒಪ್ಪಂದದ ನಂತರ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಕ್ಕೆ ವಿಷಾದಿಸಲಿದ್ದಾರೆ” ಎಂದು ಭವಿಷ್ಯ ನುಡಿದಿದ್ದರು.

ಸೀಟು ಹಂಚಿಕೆ ಚರ್ಚೆ

ಮೂಲಗಳ ಪ್ರಕಾರ, ಸೀಟು ಹಂಚಿಕೆಯಲ್ಲಿ ಹೊಂದಾಣಿಕೆಯಾಗದಿರುವುದು ಮೈತ್ರಿ ಮಾತುಕತೆಗೆ ಪ್ರಾಥಮಿಕವಾಗಿ ತಡೆಯಾಗಿದೆ. ಎರಡೂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ತಾತ್ವಿಕವಾಗಿ ಆರಂಭದಲ್ಲಿ ಒಪ್ಪಿಕೊಂಡಿದ್ದವು. ನಂತರ ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.

147 ಸದಸ್ಯ ಬಲದ ಒಡಿಶಾ ಅಸೆಂಬ್ಲಿಯಲ್ಲಿ ಬಿಜೆಡಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಇಚ್ಛಿಸಿದೆ. ಬಿಜೆಪಿ ಇದಕ್ಕೆ ಒಪ್ಪಿಲ್ಲ. ಒಡಿಶಾದ 21 ಲೋಕಸಭಾ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಬಿಜೆಪಿ ಕೇಳಿದೆ. ಇದನ್ನು ಬಿಜೆಡಿ ತಿರಸ್ಕರಿಸಿದೆ. ಎರಡೂ ಪಕ್ಷಗಳು ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡ ಪರಿಣಾಮ ಬಿಕ್ಕಟ್ಟು ಉಲ್ಬಣಗೊಂಡಿತು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಡಿ 12 ಸ್ಥಾನಗಳನ್ನು ಪಡೆದುಕೊಂಡಿತ್ತು. ಬಿಜೆಪಿ ಒಟ್ಟು 21ರಲ್ಲಿ 8 ಸ್ಥಾನಗಳನ್ನು ಗೆದ್ದಿತ್ತು.

ರಾಜ್ಯ ಘಟಕ vs ಕೇಂದ್ರ ನಾಯಕತ್ವ

ಸಮಾಲ್ ನೇತೃತ್ವದಲ್ಲಿ ಒಡಿಶಾ ಬಿಜೆಪಿ ನಾಯಕರು ಮೂರು ದಿನಗಳ ಕಾಲ ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿದರು. ಆದರೆ, ಯಾವುದೇ ನಿರ್ಣಾಯಕ ನಿರ್ಧಾರಕ್ಕೆ ಬರಲಿಲ್ಲ. ಮಾರ್ಚ್ 5ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನಂತರ ಮೈತ್ರಿ ಮಾತುಕತೆಗಳು ತೊಡಗಿದ್ದವು.

ಎರಡೂ ಪಕ್ಷಗಳು 1998 ಮತ್ತು 2009ರ ನಡುವೆ 11 ವರ್ಷಗಳ ಕಾಲ ಮೈತ್ರಿ ಹೊಂದಿದ್ದವು. ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವು. ಒಡಿಶಾ 2004ರಿಂದ ಏಕಕಾಲಕ್ಕೆ ಮತದಾನಕ್ಕೆ ಸಾಕ್ಷಿಯಾಗಿದೆ. 2014ರವರೆಗೆ ಮತದಾರರು ಸಾಮಾನ್ಯವಾಗಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಡಿಗೆ ಒಲವು ತೋರಿದ್ದಾರೆ. 2019ರ ಚುನಾವಣೆಗಳಲ್ಲಿ ಈ ರೂಢಿ ಸ್ವಲ್ಪ ಬದಲಾಗಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ BJD 147 ಸ್ಥಾನಗಳಲ್ಲಿ 117 ಸ್ಥಾನಗಳನ್ನು ಪಡೆಯಿತು. BJP 10 ಮತ್ತು ಕಾಂಗ್ರೆಸ್ 16 ಅನ್ನು ಗೆದ್ದುಕೊಂಡವು. ಲೋಕಸಭಾ ಸ್ಥಾನಗಳಲ್ಲಿ BJD 20 ಸ್ಥಾನಗಳನ್ನು ಮತ್ತು ಬಿಜೆಪಿ ಒಂದು ಸ್ಥಾನವನ್ನು ಪಡೆದುಕೊಂಡವು. 2019ರಲ್ಲಿ ಬಿಜೆಡಿ 112 ವಿಧಾನಸಭಾ ಸ್ಥಾನಗಳನ್ನು, ಬಿಜೆಪಿ 23 ಮತ್ತು ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮತದಾನದ ಮಾದರಿಯಲ್ಲಿ ಬದಲಾವಣೆ ಸ್ಪಷ್ಟವಾಗಿತ್ತು.

ತಪ್ಪಾದುದು ಎಲ್ಲಿ?

ಒಮ್ಮೆ ಎನ್‌ಡಿಎಯಲ್ಲಿ ಬಿಜೆಪಿಯ ಅತ್ಯಂತ ವಿಶ್ವಾಸಾರ್ಹ ಮಿತ್ರ ಎಂದು ಬಿಜೆಡಿ ಪರಿಗಣಿಸಲ್ಪಟ್ಟಿತ್ತು. ಆದರೆ 2009ರಲ್ಲಿ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿ ಮೈತ್ರಿಯು ಕುಸಿಯಿತು. ಅಸೆಂಬ್ಲಿ ಸ್ಥಾನಗಳಲ್ಲಿ ಬಿಜೆಪಿಯ ಪಾಲು 63ರಿಂದ 40ಕ್ಕೆ ಮತ್ತು ಸಂಸದೀಯ ಸ್ಥಾನಗಳಲ್ಲಿ 9ರಿಂದ 6ಕ್ಕೆ ಇಳಿಸಲು ಬಿಜೆಡಿ ಬೇಡಿಕೆ ಇಟ್ಟಿತ್ತು. ಬಿಜೆಪಿ ನಾಯಕರು ಇದನ್ನು ಅಸಮಂಜಸವೆಂದು ಪರಿಗಣಿಸಿದರು. ಇದರಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರಕ್ಕೆ ಬಿಜೆಪಿ ಬೆಂಬಲವನ್ನು ಹಿಂತೆಗೆದುಕೊಂಡಿತು. ಇದು 11 ವರ್ಷಗಳ ರಾಜಕೀಯ ದಾಂಪತ್ಯವನ್ನು ಕೊನೆಗೊಳಿಸಿತು. ಬಿಜೆಡಿ- ಬಿಜೆಪಿ ಒಪ್ಪಂದವನ್ನು 1998ರಲ್ಲಿ ಮೊದಲ ಬಾರಿಗೆ ಹಿರಿಯ ನಾಯಕರಾದ ಬಿಜಯ್ ಮಹಾಪಾತ್ರ ಮತ್ತು ದಿವಂಗತ ಪ್ರಮೋದ್ ಮಹಾಜನ್ ಅವರು ಸಂಘಟಿಸಿದ್ದರು.

ಇದನ್ನೂ ಓದಿ: Naveen Patnaik: ಒಡಿಶಾದ ನವೀನ್‌ ಪಟ್ನಾಯಕ್‌ ಕೂಡ ಎನ್‌ಡಿಎಗೆ ಘರ್‌ ವಾಪ್ಸಿ, ಮಾತುಕತೆ ಅಂತಿಮ

Exit mobile version