Site icon Vistara News

OpenAI: ಬಿಜೆಪಿಯನ್ನು ಸೋಲಿಸಲು ಇಸ್ರೇಲ್‌ ಮೂಲದ ಸಂಸ್ಥೆಯಿಂದ ಅಪಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

OpenAI

OpenAI

ನವದೆಹಲಿ: ಸುಮಾರು ಎರಡು ತಿಂಗಳ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election)ಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಚುನಾವಣೆಯ ಮೇಲೆ ಪ್ರಭಾವ ಬೀರಲು ಇಸ್ರೇಲ್‌ ಮೂಲದ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಲು ಪ್ರಯತ್ನಿಸಿದೆ ಎಂದು ಚಾಟ್‌ಜಿಪಿಟಿ (ChatGPT)ಯ ಓಪನ್ಎಐ (OpenAI) ಹೇಳಿದೆ.

ಇಸ್ರೇಲ್‌ ಮೂಲದ ಸಂಸ್ಥೆಯಾದ STOIC ಅಭಿಯಾನ ನಡೆಸಿ ಬಿಜೆಪಿ ವಿರೋಧಿ ಚಟುವಟಿಕೆ ನಡೆಸಲು ಪ್ರಯತ್ನಿಸಿ, ವಿಫಲವಾಗಿದೆ ಎನ್ನಲಾಗಿದೆ. ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಕಾಂಗ್ರೆಸ್ ಅನ್ನು ಶ್ಲಾಘಿಸುವ ಕಮೆಂಟ್‌, ಲೇಖನ, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸುವಂತಹ ಕಾರ್ಯಗಳಿಗಾಗಿ ಓಪನ್ಎಐಯ ಶಕ್ತಿಯುತ ಭಾಷಾ ಮಾದರಿಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓಪನ್‌ಎಐ ಹೇಳಿದ್ದೇನು?

“ಮೇಯಲ್ಲಿ STOIC ನೆಟ್‌ವರ್ಕ್‌ ಭಾರತದ ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವ ಕಮೆಂಟ್‌ಗಳನ್ನು ರಚಿಸಲು ಪ್ರಾರಂಭಿಸಿತು. ಚುನಾವಣೆಯ ಮೇಲೆ ಪರಿಣಾಮ ಬೀರಬಹುದಾದ ಇಂತಹ ಕೆಲವು ಚಟುವಟಿಕೆಗಳನ್ನು ನಾವು ತಡೆದಿದ್ದೇವೆʼʼ ಎಂದು ಓಪನ್‌ಎಐ ಹೇಳಿದೆ. ʼʼಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವೆಬ್‌ಸೈಟ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದ್ದ ಇಸ್ರೇಲ್‌ನಿಂದ ಕಾರ್ಯನಿರ್ವಹಿಸುವ ಖಾತೆಗಳ ಸಮೂಹವನ್ನು ನಿಷೇಧಿಸಲಾಗಿದೆʼʼ ಎಂದೂ ವಿವರಿಸಿದೆ.

ʼʼಈ ಅಭಿಯಾನವನ್ನು ಕೆನಡಾ, ಅಮೆರಿಕ ಮತ್ತು ಇಸ್ರೇಲ್‌ನಲ್ಲಿರುವವರನ್ನು ಗುರಿಯಾಗಿಸಿ ಆರಂಭಿಸಲಾಗಿತ್ತು. ಇದಕ್ಕಾಗಿ ಸಂದೇಶಗಳಲ್ಲಿ ಇಂಗ್ಲಿಷ್‌ ಮತ್ತು ಹಿಬ್ರೂ ಭಾಷೆಗಳನ್ನು ಬಳಸಲಾಗುತ್ತಿತ್ತು. ಬಳಿಕ ಮೇಯಲ್ಲಿ ಭಾರತೀಯರನ್ನು ತಲುಪುವ ಉದ್ದೇಶದಿಂಧ ಇಂಗ್ಲಿಷ್‌ನಲ್ಲಿ ಕಮೆಂಟ್‌ ರಚಿಸಲಾಗಿತ್ತುʼʼ ಎಂದು ಓಪನ್‌ಎಐ ತಿಳಿಸಿದೆ.

ಅಪಾಯಕಾರಿ ಬೆದರಿಕೆ ಎಂದ ಬಿಜೆಪಿ

ಈ ಬೆಳವಣಿಗೆ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಇದು ಅಪಾಯಕಾರಿ ಬೆದಿಕೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸಚಿವ ರಾಜೀವ್ ಚಂದ್ರಶೇಖರ್, ʼʼಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾಯಾದ ಬೆದರಿಕೆ. ಭಾರತ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಇದರಿಂದ ಸ್ಪಷ್ವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕಾಗಿದೆ ಮತ್ತು ಸತ್ಯವನ್ನು ಬಹಿರಂಗಪಡಿಸಬೇಕಾಗಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಂಟರ್‌ನೆಟ್‌ ಮೂಲಕ ನಮ್ಮ ಮಾದರಿಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದ ಇಂತಹ ಸುಮಾರು ಐದು ರಹಸ್ಯ ಕಾರ್ಯಾಚರಣೆಗಳನ್ನು ಕಳೆದ ಮೂರು ತಿಂಗಳಲ್ಲಿ ಗುರುತಿಸಲಾಗಿದೆ ಎಂದು ಓಪನ್ಎಐ ಹೇಳಿದೆ. 2015ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯೇ ಓಪನ್ಎಐ.

ಇದನ್ನೂ ಓದಿ: Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

2024ರ ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌, ಚರಣ್‌ಜೀತ್‌ ಸಿಂಗ್‌ ಚನ್ನಿ, ಅನುರಾಗ್ ಠಾಕೂರ್, ಅಭಿಷೇಕ್ ಬ್ಯಾನರ್ಜಿ, ಮೀಸಾ ಭಾರ್ತಿ ಮತ್ತಿತರರ ಪ್ರಮುಖ ನಾಯಕರ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

Exit mobile version