ಬೆಂಗಳೂರು: 1952ರಿಂದ 1991ರವರೆಗೆ ನಡೆದ 10 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣ ಮೇಲುಗೈ ಸಾಧಿಸುತ್ತ ಬಂದಿತ್ತು. ಅಂದರೆ ನಿರಂತರವಾಗಿ 44 ವರ್ಷಗಳ ಕಾಲ ಇಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿತ್ತು. ಈ 10 ಚುನಾವಣೆಗಳಲ್ಲಿ ಕಾಂಗ್ರೆಸ್ ಶೇ. 95ರಷ್ಟು ಸ್ಥಾನಗಳನ್ನು ತಾನೇ ಬಾಚಿಕೊಳ್ಳುತ್ತಿತ್ತು (Parliament Flashback).
ಆದರೆ 1996ರಲ್ಲಿ ಮೊದಲ ಬಾರಿ ಜನತಾ ದಳವು ಕಾಂಗ್ರೆಸ್‌ಗೆ ಹಿನ್ನಡೆಯ ರುಚಿ ತೋರಿಸಿತು. ಆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಜನತಾ ದಳ 16 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿತು. ಬಿಜೆಪಿ 6 ಕಡೆ ಗೆಲುವು ದಾಖಲಿಸಿದರೆ, ಕಾಂಗ್ರೆಸ್ ಕೇವಲ 5 ಕ್ಷೇತ್ರಕ್ಕೆ ಸೀಮಿತವಾಯಿತು. ಬಂಗಾರಪ್ಪ ಅವರ ಕೆಸಿಪಿ 1 ಸ್ಥಾನ ಗಳಿಸಿತು. ಇದೇ 16 ಸ್ಥಾನಗಳ ಬಲದಿಂದ ಜನತಾ ದಳದ ವರಿಷ್ಠ ನೇತಾರ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ಹುದ್ದೆಗೆ ಏರಿದ್ದು ಗಮನಾರ್ಹ.
98ರಲ್ಲಿ ಬಿಜೆಪಿ ಮೇಲುಗೈ
1998ರಲ್ಲಿ ಬಿಜೆಪಿ 13 ಸ್ಥಾನ ಮತ್ತು ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿ ಪಕ್ಷ 3 ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿತು. ಕಾಂಗ್ರೆಸ್ 9 ಸ್ಥಾನ ಗೆದ್ದರೆ, ಜನತಾ ದಳಕ್ಕೆ ಕೇವಲ 3 ಸ್ಥಾನ ಗೆಲ್ಲಲು ಸಾಧ್ಯವಾಯಿತು. 1999ರಲ್ಲಿ 18 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಮತ್ತೆ ಮೇಲುಗೈ ಸಾಧಿಸಿತು. ಬಿಜೆಪಿಗೆ 7 ಮತ್ತು ಅದರ ಮಿತ್ರಪಕ್ಷ ಜೆಡಿಯುಗೆ 3 ಸ್ಥಾನಗಳು ಲಭಿಸಿದವು. ಜನತಾ ದಳ ಶೂನ್ಯ ಸಾಧನೆ ಮಾಡಿತು.
2004ರಲ್ಲಿ ಬಿಜೆಪಿ 18 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಹಿಂದಿಕ್ಕಿತು. ಕಾಂಗ್ರೆಸ್‌ಗೆ 8 ಮತ್ತು ಜೆಡಿಎಸ್‌ಗೆ 2 ಸ್ಥಾನ ಲಭಿಸಿದವು. 2009ರಲ್ಲಿ ಬಿಜೆಪಿ ಇನ್ನೂ ಒಂದು ಸ್ಥಾನ ಹೆಚ್ಚು ಗಳಿಸಿ ಸಂಸದರ ಸಂಖ್ಯೆಯನ್ನು 19ಕ್ಕೆ ಏರಿಸಿಕೊಂಡಿತು. ಕಾಂಗ್ರೆಸ್ 6 ಕಡೆ ಮತ್ತು ಜೆಡಿಎಸ್‌ಗೆ 3 ಕಡೆ ಗೆಲುವು ಕಂಡಿತು. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಅಲೆ ಕಂಡಾಗಲೂ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವುದು ವಿಶೇಷ.
2014ರಲ್ಲಿ ಬಿಜೆಪಿಗೆ 17, ಕಾಂಗ್ರೆಸ್‌ಗೆ 9 ಮತ್ತು ಜೆಡಿಎಸ್‌ಗೆ 2 ಸ್ಥಾನ ಲಭಿಸಿದವು. ದೇಶದಲ್ಲಿ ಪ್ರಬಲ ಮೋದಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಎರಡು ಸ್ಥಾನ ಕಡಿಮೆ ಗಳಿಸಿತು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ ಭರ್ಜರಿ 25 ಕಡೆ ಗೆಲುವು ದಾಖಲಿಸಿತು. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ ಜಯ ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ದಕ್ಕಿದ್ದು ತಲಾ ಒಂದೊಂದು ಸ್ಥಾನ ಮಾತ್ರ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಗೆದ್ದಿರುವುದು ಎರಡು ಸ್ಥಾನಗಳಷ್ಟೆ!
2024ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಸರ್ಕಾರ ನಡೆಸುತ್ತಿದೆ. ಹಾಗಾಗಿ ಈ ಬಾರಿಯ ಚುನಾವಣೆ ಫಲಿತಾಂಶ ಕುತೂಹಲ ಮೂಡಿಸಿದೆ.
1984ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
1984ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು!
ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.
ಬಿಜೆಪಿಗೆ ಎರಡೇ ಸೀಟು
ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ.ಎ.ಕೆ.ಪಟೇಲ್ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್ ರಾವ್ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಯಿತು.