Site icon Vistara News

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

PM Modi

ಲೋಕಸಭಾ ಚುನಾವಣೆ- 2024ರ (Loksabha election-2024) ಬಿಜೆಪಿ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ಯಾಕುಮಾರಿಗೆ ತೆರಳಲಿದ್ದು, ( Kanyakumari) ಇಲ್ಲಿನ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ (Vivekananda Rock Memorial) ಮೇ 30ರಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇದೇ ಸ್ಥಳದಲ್ಲಿ ಭಾರತದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು 1892ರಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದರು.

2019ರ ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ 15 ಗಂಟೆಗಳ ‘ಏಕಾಂತವಾಸ್’ (ಏಕಾಂತ ಧ್ಯಾನ) ಕೈಗೊಂಡಿದ್ದರು.

2014 ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. 1659ರ ನವೆಂಬರ್ ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಕೊಂದು ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು. ಈ ವಿಜಯವು ಮರಾಠಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಹಿಂದವಿ ಸ್ವರಾಜ್ ಎಂದು ಛತ್ರಪತಿ ಶಿವಾಜಿ ಕರೆದರು.

ಇದೀಗ ಜೂನ್ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಮೋದಿ ಕನ್ಯಾಕುಮಾರಿ ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ.


ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು.

ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ವಿವೇಕಾನಂದರು, ಭಾರತೀಯ ಬಂಡೆಯ ಕೊನೆಯ ತುಣುಕಿನ ಮೇಲೆ ಕುಳಿತು ನಾನು ಒಂದು ಯೋಜನೆಯನ್ನು ಕಂಡಿದ್ದೇನೆ. ಸನ್ಯಾಸಿಗಳು ಅಲೆದಾಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಹುಚ್ಚುತನ. ಬಡವರು ಅತ್ಯಂತ ಕಷ್ಟವಾದ ಜೀವನ ನಡೆಸುತ್ತಿರುವುದು ಅವರ ಅಜ್ಞಾನದಿಂದಾಗಿ. ನಾವು ಅದನ್ನು ಹೋಗಲಾಡಿಸುವ ಬದಲು ಅವರ ರಕ್ತವನ್ನು ಹೀರುತ್ತಿದ್ದೇವೆ ಮತ್ತು ಅವರನ್ನು ಪಾದದಡಿಯಲ್ಲಿ ತುಳಿಯುತ್ತಿದ್ದೇವೆ ಎಂದು ಹೇಳಿದ್ದರು.

1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಮುನ್ನಾದಿನ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಡೆ ನೇತೃತ್ವದ ವಿವೇಕಾನಂದ ರಾಕ್ ಸ್ಮಾರಕ ಸಮಿತಿಯು ಈ ಸ್ಥಳವನ್ನು ನೆನಪಿಸಿತ್ತು. ಇದನ್ನು 1970 ರಲ್ಲಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಒಂದು ನಂಬಿಕೆಯ ಪ್ರಕಾರ ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿರುವಾಗ ಇದೇ ಬಂಡೆಯ ಮೇಲೆ ಒಂದೇ ಕಾಲಿನ ಮೇಲೆ ಧ್ಯಾನ ಮಾಡುತ್ತಿದ್ದಳು.

ವವತುರೈನಿಂದ 15 ನಿಮಿಷಗಳ ದೋಣಿ ಸಂಚಾರದ ಮೂಲಕ ಕಲ್ಲಿನ ದ್ವೀಪವನ್ನು ಪ್ರವೇಶಿಸಬಹುದು. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ.


ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ.

ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಈ ಬಾರಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಅವರು ಧ್ಯಾನ ಮಾಡಲು ಅವರು ಆಯ್ಕೆ ಮಾಡಿರುವುದು ಈ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷ ದಕ್ಷಿಣ ಭಾರತದಲ್ಲಿ ಬಲವಾಗಿರುವುದನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಅವರ ಒಟ್ಟು ಪ್ರವಾಸಗಳಲ್ಲಿ ಮೂರನೇ ಒಂದು ಭಾಗದಷ್ಟು ಅವರು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. 2024ರಲ್ಲಿ ತಮಿಳುನಾಡಿಗೆ ಏಳು ಭಾರಿ ಭೇಟಿ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಮೇಲೆ ದೃಷ್ಟಿ

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಹೊಂದಿವೆ. ತಮಿಳುನಾಡುವೊಂದೇ ಸಂಸತ್ತಿನಲ್ಲಿ 39 ಸ್ಥಾನಗಳನ್ನು ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಗೆ ಸಿದ್ಧತೆ ಏನು?

ಗುರುವಾರ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಪ್ರಧಾನಿಯವರ 45 ಗಂಟೆಗಳ ವಾಸ್ತವ್ಯ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು 2,000 ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ತಿರುನೆಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ಅವರೊಂದಿಗೆ ಇಲ್ಲಿನ ಕಲ್ಲಿನ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ಅನಂತರ ಪ್ರಧಾನಿ ಗುರುವಾರ ಮಧ್ಯಾಹ್ನ ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಸಂಜೆ ಕನ್ಯಾಕುಮಾರಿಯಲ್ಲಿರುವ ರಾಜ್ಯ ಅತಿಥಿ ಗೃಹ ತಲುಪಿ ದೋಣಿ ಮೂಲಕ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಶನಿವಾರ ಮಧ್ಯಾಹ್ನದವರೆಗೆ ಅಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

ಮೋದಿ ಶನಿವಾರ ಸಂಜೆ ವೇಳೆಗೆ ಕನ್ಯಾಕುಮಾರಿ ಹೆಲಿಪ್ಯಾಡ್ ತಲುಪಿ ತಿರುವನಂತಪುರಕ್ಕೆ ಹಿಂತಿರುಗಿ ಅದೇ ದಿನ ದೆಹಲಿಗೆ ತೆರಳಲಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವು ಪ್ರಧಾನಿಯವರ ಈ ಭೇಟಿಗೆ ಅನುಮತಿಯನ್ನು ವಿರೋಧಿಸಿ ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ನಡೆಯುತ್ತಿರುವ ಪ್ರವಾಸೋದ್ಯಮ ಋತುವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Exit mobile version