Site icon Vistara News

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

pm narendra Modi Varanasi road show

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Nanrendra Modi) ನಾಳೆ ಬೆಳಿಗ್ಗೆ ವಾರಾಣಸಿಯಲ್ಲಿ (Varanasi) ಲೋಕಸಭೆ ಚುನಾವಣೆ (Lok Sabha Election 2024) ಬಿಜೆಪಿ (BJP) ಸ್ಪರ್ಧಿಯಾಗಿ ನಾಮಪತ್ರ (nomination) ಸಲ್ಲಿಸಲಿದ್ದಾರೆ. ಇದಕ್ಕೆ ಒಂದು ದಿನ ಮೊದಲು, ಅಂದರೆ ಇಂದು ಸಂಜೆ ಭವ್ಯವಾದ ರೋಡ್‌ ಶೋ ನಡೆಯಲಿದೆ.

ರೋಡ್ ಶೋ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಗೇಟ್‌ನಿಂದ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಅಲ್ಲಿ ಮೋದಿ ಅವರು ಬಿಎಚ್‌ಯು ಸಂಸ್ಥಾಪಕ ಮಹಾಮಾನ ಪಂ. ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ 4ರಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ. ಮೋದಿ ರೋಡ್ ಶೋನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನಿ ಜೊತೆಗೆ ಸಾಥ್ ನೀಡಲಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದ ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೆ ಇತರ ಪ್ರಮುಖರು ಭಾಗವಹಿಸಲಿದ್ದಾರೆ.

ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪುಗಳು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲಿವೆ. ಐದು ಕಿಲೋಮೀಟರ್ ಉದ್ದದ ರೋಡ್ ಶೋ ಮಿನಿ ಇಂಡಿಯಾ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಗಳ ಒಂದು ನೋಟವನ್ನು ನೀಡಲಿದೆ.

ಭಾರತ ರತ್ನ, ಶಹನಾಯ್‌ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಕುಟುಂಬ ಸದಸ್ಯರು ಮದನಪುರ ಬಳಿ ಶೆಹನಾಯಿ ಬಾರಿಸುವ ಮೂಲಕ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋನಲ್ಲಿ 5,000ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಲಿದ್ದು, 100 ಕಡೆ ಪುಷ್ಪವೃಷ್ಟಿ ಮಾಡಲಾಗುವುದು. ಇದರೊಂದಿಗೆ ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾರಣಾಸಿಯ ಕಲಾವಿದರು ಮೋದಿಯನ್ನು ಸ್ವಾಗತಿಸಲು ಜಾನಪದ ನೃತ್ಯ ಮತ್ತು ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಮುಸ್ಲಿಂ ಸಮುದಾಯದವರೂ ಸ್ವಾಗತಕ್ಕೆ ಮುಂದೆ ಬಂದಿದ್ದು, ಮದನಪುರದಲ್ಲಿಯೇ ಮಾಜಿ ಸಂಸದ ರಾಜೇಶ್ ಮಿಶ್ರಾ ನೇತೃತ್ವದಲ್ಲಿ ಮುಸ್ಲಿಮರು ಪುಷ್ಪಾರ್ಚನೆ ಮಾಡಲಿದ್ದಾರೆ. ಪ್ರಧಾನಿ ತಮ್ಮ ತಾಯಿಯ ಪಾದಗಳನ್ನು ಸ್ಪರ್ಶಿಸುವ ಚಿತ್ರವೂ ರೋಡ್ ಶೋನಲ್ಲಿ ಇರುತ್ತದೆ. ಕಾರ್ಯಕ್ರಮ ಮುಕ್ತಾಯವಾದ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಳೆ ನಾಳೆ ಬೆಳಿಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕಾಶಿಯ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದ್ದು, ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ ಆರಂಭ; ʻಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿʼ ಎಂದ ಮೋದಿ

Exit mobile version