ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕವು 2ನೇ ಹಂತದ ಮತದಾನಕ್ಕೆ ಸಜ್ಜಾಗುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೂ ಬಂದಿದ್ದಾರೆ. ಮೋದಿ ಶಿರಸಿಗೆ ಬಂದು ಪ್ರಚಾರ ಮಾಡಿ ಹೋದರು ಎಂಬುದಷ್ಟೇ ಹೊರ ಪ್ರಪಂಚಕ್ಕೆ ಗೊತ್ತು. ಆದರೆ, ಅವರು ಇದೇ ವೇಳೆ ನಾಲ್ವರು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಅವರ ಬಗ್ಗೆ ತಿಳಿದು ಹೆಮ್ಮೆ ಪಟ್ಟಿದ್ದಾರೆ.
ಇವರಲ್ಲಿ ಒಬ್ಬರು ವೃತ್ತಿಯಲ್ಲಿ ಮರ ಕಡಿಯುವವರಾದರೂ ಅಯೋಧ್ಯೆಯ ಕರಸೇವಕರಾಗಿದ್ದಾರೆ. ಇನ್ನೊಬ್ಬರು ನಿವೃತ್ತ ಪೌರ ಕಾರ್ಮಿಕ ಮಹಿಳೆಯಾಗಿದ್ದಾರೆ. ಮತ್ತೊಬ್ಬರು ಕಾಡು ಹಣ್ಣುಗಳನ್ನು ಮಾರಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಮಗದೊಬ್ಬರು ಕ್ಷೌರಿಕರಾಗಿದ್ದು, ಬಿಜೆಪಿಯ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಪಕ್ಕಾ ಅಭಿಮಾನಿಯಾಗಿದ್ದಾರೆ.
ಹಾಗಾದರೆ ಯಾರಿವರು?
ಲಕ್ಷ್ಮಣ್ ನಾಯ್ಕ ದೊಂಬೆ, ಸಿದ್ದಾಪುರ: ಲಕ್ಷ್ಮಣ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾಗಿದ್ದಾರೆ. ಇವರು ಅಯೋಧ್ಯೆಯ ಕರಸೇವಕರೂ ಆಗಿದ್ದವರು. ಲಕ್ಷ್ಮಣ ಅವರು ಅಯೋಧ್ಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ, ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಲಕ್ಷ್ಮಣ ಅವರು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರವನ್ನು ನಿರ್ಮಿಸುವವರೆಗೂ ಕ್ಷೌರ ಮಾಡಿಸುವುದಿಲ್ಲ ಎನ್ನುವ ವ್ರತವನ್ನು ಕೈಗೊಂಡಿದ್ದರು.
ರಾಧಾ ಹರಿಜನ: ಇವರು ಶಿರಸಿಯ ನಿವೃತ್ತ ಪೌರ ಕಾರ್ಮಿಕರಾಗಿದ್ದಾರೆ. ಸ್ವಚ್ಛತಾ ಕಾರ್ಯಕರ್ತೆಯಾಗಿ ದಣಿವರಿಯದೆ ಕೆಲಸ ಮಾಡಿದವರು ಇವರಾಗಿದ್ದಾರೆ. ತನ್ನ ಪ್ರಾಮಾಣಿಕ ಕೆಲಸಕ್ಕೆ ಹೆಸರುವಾಸಿಯಾಗಿರುವ ಇವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.
ಮೋಹಿನಿ ಗೌಡ: ಇವರು ಹಾಲಕ್ಕಿ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರು ಜೀವನಕ್ಕಾಗಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಕಾಡು ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಸ್ವಚ್ಛ ಭಾರತ್ ಸ್ವಯಂಸೇವಕಿಯಾಗಿ ತೊಡಗಿಸಿಕೊಂಡಿದ್ದಾರೆ. ಅವರು ಬಿಡುವಿದ್ದಾಗಲೆಲ್ಲಾ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಾರೆ.
ನಾಗೇಶ್ ಮಹಾಲೆ: ಇವರು ಒಬ್ಬ ಕ್ಷೌರಿಕರಾಗಿದ್ದಾರೆ. ನಾಗೇಶ್ ಅಂಕೋಲಾದಲ್ಲಿ 4 ಆಸನ ಸಾಮರ್ಥ್ಯವುಳ್ಳ ಸಲೂನ್‌ವೊಂದನ್ನು ಹೊಂದಿದ್ದಾರೆ. ಇವರು ಬಿಜೆಪಿಯ ಕಟ್ಟಾ ಬೆಂಬಲಿಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರ ಅಭಿಮಾನಿ. ಅವರ ಕೈಯಲ್ಲಿ ಮೋದಿ ಜಿ ಟ್ಯಾಟೂ ಇದೆ. ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ, ಅವರು ಇಡೀ ದಿನ ಉಚಿತವಾಗಿ ಕ್ಷೌರ ಮಾಡುತ್ತಾರೆ.
ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್ ಷಡ್ಯಂತ್ರ: ಮೋದಿ ವಾಗ್ದಾಳಿ
ಮೋದಿ ಭೇಟಿಯಾಗಿದ್ದು ಎಲ್ಲಿ?
ವಿಶೇಷ ವಿಮಾನದ ಮೂಲಕ ಶಿರಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಈ ನಾಲ್ವರು ವಿಶೇಷ ಸಾಧಕರನ್ನು ಪ್ರಧಾನಿ ನರೇಂದ್ರ ಅವರಿಗೆ ಪರಿಚಯ ಮಾಡಿಕೊಡಲಾಯಿತು. ಇದೇ ವೇಳೆ ಮೋದಿ ಸಹ ಅವರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.