Site icon Vistara News

Prajwal Revanna Pen Drive: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಪರಮೇಶ್ವರ್

Prajwal Revanna Pen Drive Case Prajwal Revanna accused of sex scandal No interference in SIT probe says Parameshwara

ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಂದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಪೆನ್‌ಡ್ರೈವ್‌ ಬಹಿರಂಗಗೊಂಡ (Prajwal Revanna Pen Drive) ಪ್ರಕರಣದ ತನಿಖೆಗೆ ಸರ್ಕಾರ ಎಸ್​ಐಟಿ ತಂಡ ರಚಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಶನಿವಾರ (ಏಪ್ರಿಲ್‌ 27) ಘೋಷಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Dr G Parameshwar) ಪ್ರತಿಕ್ರಿಯೆ ನೀಡಿದ್ದು, ಎಸ್‌ಐಟಿ ತನಿಖೆಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಕೇಸ್ ಅನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನು ಕೆಲವೇ ಸಮಯದಲ್ಲಿ ಅಧಿಕೃತವಾಗಿ ಎಸ್‌ಐಟಿ ರಚನೆ ಮಾಡಿ ಆದೇಶವನ್ನು ಹೊರಡಿಸಲಾಗುವುದು. ಎಡಿಜಿಪಿ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಲಿದೆ ಎಂದು ಹೇಳಿದರು.

ಎಸ್‌ಐಟಿಗೆ ಪರಮಾಧಿಕಾರ

ಮಹಿಳಾ ಆಯೋಗದಿಂದ ಬಂದಿರುವ ಪತ್ರದ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಿದ್ದೇವೆ. ಪ್ರಜ್ವಲ್ ರೇವಣ್ಣ ಅವರು ದೇಶ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಇದೆ. ಸಂತ್ರಸ್ತ ಮಹಿಳೆಯರನ್ನು ಮಹಿಳಾ ಆಯೋಗದವರು ಸಂಪರ್ಕಿಸುತ್ತಿದ್ದಾರೆ. ಎಸ್‌ಐಟಿ ರಚನೆಯಾದ ಮೇಲೆ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟು ತನಿಖೆ ಮಾಡುತ್ತೇವೆ. ಇದರಲ್ಲಿ ಸರ್ಕಾರದಿಂದ ಯಾವುದೇ ರೀತಿಯಾದಂತಹ ಹಸ್ತಕ್ಷೇಪ ಇರುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ವಿದೇಶದಿಂದ ಕರೆ ತರಲಾಗುತ್ತದೆಯೇ?

ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್‌ ಕೊಡುವ ವಿಚಾರ ಎಸ್‌ಐಟಿ ಅಧಿಕಾರಿಗಳಿಗೆ ಬಿಟ್ಟ ವಿಚಾರವಾಗಿದೆ. ಇನ್ನು ವಿದೇಶದಲ್ಲಿರುವ ಅವರನ್ನು ಕರೆತರುವ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳೇ ತೀರ್ಮಾನ ಮಾಡಬೇಕು. ಪ್ರಕರಣದಲ್ಲಿ ಸತ್ಯ ಕಂಡುಬಂದರೆ ಅವರ ರೀತಿಯಲ್ಲಿ ಅವರು ಕ್ರಮ ವಹಿಸುತ್ತಾರೆ. ಇದರಲ್ಲಿ ಸರ್ಕಾರದಿಂದ ಯಾವುದೇ ನಿರ್ದೇಶನ ಇರುವುದಿಲ್ಲ. ಹೀಗೇ ತನಿಖೆ ನಡೆಸಬೇಕು ಎಂದು ನಾವು ಹೇಳುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಎಸ್‌ಐಟಿ ತನಿಖೆ ಬಗ್ಗೆ ಘೋಷಿಸಿದ್ದ ಸಿಎಂ

ಹಲವಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿರುವ ಪೆನ್​ಡ್ರೈವ್ (Hassan pen drive cas) ಒಂದು ಬಹಿರಂಗಗೊಂಡಿದೆ. ಅದರ ಬಗ್ಗೆ ತನಿಖೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಮಾಧ್ಯಮ ಪ್ರಕಟಣೆ ಮೂಲಕ ಘೋಷಣೆ ಮಾಡಿದ್ದರು. ಭಾನುವಾರ ಈ ಸಂಬಂಧ ಅಧಿಕೃತ ಆದೇಶ ಹೊರಬರಬೇಕಿದೆ.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಚಲನ ಮೂಡಿಸಿದ್ದ ಪೆನ್​ ಡ್ರೈವ್ ಪ್ರಕರಣ

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಸೇರಿದೆ ಎನ್ನಲಾದ ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಕೆಲವು ದಿನಗಳ ಹಿಂದೆ ಬಹಿರಂಗೊಂಡಿತ್ತು. ಏಕಾಏಕಿ ಈ ಪೆನ್ ಡ್ರೈವ್ ಬಗ್ಗೆ ಚರ್ಚೆ ಆರಂಭವಾಗಿದ್ದು ಈ ಕುರಿತು ಸಾಕಷ್ಟು ಊಹಾಪೋಹಗಳು ಎದ್ದಿವೆ. ವಿಡಿಯೋಗಳನ್ನು ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ವಿಡಿಯೊ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಚಾಟಿತ ನಾಯಕ ಅರೆಸ್ಟ್‌

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಕೊನೇ ಹಂತದಲ್ಲಿ ರಾಸಲೀಲೆಯ ವಿಡಿಯೋಗಳು ಬಹಿರಂಗಗೊಂಡಿವೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು. ಇದೀಗ ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ.

ಮಹಿಳಾ ಆಯೋಗದ ಪತ್ರ ಇಲ್ಲಿದೆ

ಈ ಪೆನ್‌ಡ್ರೈನಲ್ಲಿ ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಪ್ರಜ್ವಲ್​ ಅವರು ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಲೈಂಗಿಕ ಕ್ರಿಯೆಯ ವಿಡಿಯೊಗಳನ್ನು ಮಾಡಿಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ಈ ಸಂಬಂಧ ಮಹಿಳಾ ಆಯೋಗ ಸಹ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದು, ತನಿಖೆ ನಡೆಸುವಂತೆ ಕೋರಿತ್ತು.

ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೊಗಳನ್ನು ತಾವು ಬಹಿರಂಗಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Exit mobile version