Site icon Vistara News

ಈ ಚುನಾವಣೆಯಲ್ಲೂ ಸೋತರೆ ರಾಹುಲ್ ಗಾಂಧಿ ಕಾಂಗ್ರೆಸ್ ಹುದ್ದೆಯಿಂದ ಕೆಳಗಿಳಿಯಲೇಬೇಕು: ಪ್ರಶಾಂತ್ ಕಿಶೋರ್ ಸಲಹೆ

rahul gandhi, prashanth kishor

ನವದೆಹಲಿ: ಈ ಲೋಕಸಭಾ ಚುನಾವಣೆ (Lok Sabha Election 2024)ಯಲ್ಲಿ ಕಾಂಗ್ರೆಸ್ (Congress) ನಿರೀಕ್ಷಿತ ಫಲಿತಾಂಶ ಪಡೆಯದಿದ್ದರೆ ರಾಹುಲ್ ಗಾಂಧಿ (Rahul Gandhi) ಹುದ್ದೆಯಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸಬೇಕು ಎಂದು ಚುನಾವಣಾ ನಿಪುಣ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಸಲಹೆ ನೀಡಿದ್ದಾರೆ.

ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ʼʼರಾಹುಲ್ ಗಾಂಧಿ ಅವರು ಪಕ್ಷವನ್ನು ನಡೆಸುತ್ತಿದ್ದಾರೆ ಮತ್ತು 10 ವರ್ಷಗಳಲ್ಲಿ ಅವರು ಕಾರ್ಯನಿರ್ವಹಿಸಲು ಅಸಮರ್ಥರಾಗಿದ್ದರೂ ದೂರ ಸರಿಯಲು ಅಥವಾ ಬೇರೊಬ್ಬರಿಗೆ ಕಾಂಗ್ರೆಸ್ ಅನ್ನು ಮುನ್ನಡೆಸಲು ಅವಕಾಶ ನೀಡುತ್ತಿಲ್ಲʼʼ ಎಂದು ಹೇಳಿದ್ದಾರೆ. “ನನ್ನ ಪ್ರಕಾರ ಇದು ಪ್ರಜಾಪ್ರಭುತ್ವ ವಿರೋಧಿ ನಡೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಶಾಂತ್ ಕಿಶೋರ್‌ ಈ ಮೊದಲು ವಿರೋಧ ಪಕ್ಷವನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಸಿದ್ಧಪಡಿಸಿದ್ದರು. ಆದರೆ ಕಾರ್ಯತಂತ್ರದ ಅನುಷ್ಠಾನದ ಬಗ್ಗೆ ತಮ್ಮ ಮತ್ತು ನಾಯಕತ್ವದ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಹಿಂದೆ ಸರಿದಿದ್ದರು.

ಪ್ರಶಾಂತ್ ಕಿಶೋರ್ ನೀಡಿದ ಸಲಹೆ ಏನು?

“ನೀವು 10 ವರ್ಷಗಳಿಂದ ಯಾವುದೇ ಯಶಸ್ಸನ್ನು ಪಡೆಯದೆ ಅದೇ ಕೆಲಸವನ್ನು ಮಾಡುತ್ತಿದ್ದರೆ ವಿರಾಮ ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಗುರಿಯನ್ನು ತಲುಪಲು ನೀವು 5 ವರ್ಷಗಳ ಕಾಲ ಬೇರೊಬ್ಬರಿಗೆ ಅವಕಾಶ ನೀಡಬೇಕು. ನಿಮ್ಮ ತಾಯಿ ಅದನ್ನು ಈ ಹಿಂದೆ ಮಾಡಿದ್ದರು” ಎಂದು ರಾಹುಲ್‌ ಗಾಂಧಿ ಅವರಿಗೆ ಪ್ರಶಾಂತ್‌ ಕಿಶೋರ್‌ ಸಲಹೆ ನೀಡಿದ್ದಾರೆ. ಸೋನಿಯಾ ಗಾಂಧಿ ತಮ್ಮ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ರಾಜಕೀಯದಿಂದ ದೂರವಿರಲು ಮತ್ತು 1991ರಲ್ಲಿ ಪಿ.ವಿ.ನರಸಿಂಹ ರಾವ್ ಅವರಿಗೆ ಅಧಿಕಾರ ವಹಿಸಿಕೊಳ್ಳಲು ತೆಗೆದುಕೊಂಡ ನಿರ್ಧಾರವನ್ನು ಕಿಶೋರ್‌ ನೆನಪಿಸಿಕೊಂಡಿದ್ದಾರೆ.

ತಮ್ಮ ಕೊರತೆಯನ್ನು ಅರಿತುಕೊಳ್ಳುವುದು ಉತ್ತಮ ನಾಯಕರ ಪ್ರಮುಖ ಲಕ್ಷಣ ಎಂದು ಕಿಶೋರ್‌ ಅಭಿಪ್ರಾಯಪಟ್ಟರು. ʼʼನಿಮಗೆ ಯಾವಾಗ ಸಹಾಯದ ಅಗತ್ಯ ಇದೆ ಎನ್ನುವುದನ್ನು ನೀವು ಗುರುತಿಸದಿದ್ದರೆ ಯಾರೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ತನಗೆ ಸರಿ ಎನಿಸಿದ್ದನ್ನು ಕಾರ್ಯಗತಗೊಳಿಸಬಲ್ಲ ಯಾರಾದರೂ ಸಿಗಬೇಕು ಎಂದು ರಾಹುಲ್‌ ಗಾಂಧಿ ಹುಡುಕುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ” ಎಂದು ಕಿಶೋರ್ ಹೇಳಿದ್ದಾರೆ.

ʼʼ2019ರ ಚುನಾವಣೆಯಲ್ಲಿನ ಪಕ್ಷದ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ರಾಹುಲ್ ಗಾಂಧಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ತಾವು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವುದಾಗಿ ಮತ್ತು ಬೇರೆ ಯಾರಿಗಾದರೂ ಕೆಲಸ ಮಾಡಲು ಅವಕಾಶ ನೀಡುವುದಾಗಿ ಪತ್ರ ಬರೆದಿದ್ದರು. ಆದರೆ ಅವರು ಅಲ್ಲಿ ಹೇಳಿದ್ದಕ್ಕಿಂತ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆʼʼ ಎಂದು ಕಿಶೋರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Prashant Kishor: ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಲಾಜಿಕ್ಕೇ ಇಲ್ಲ! ಪ್ರಶಾಂತ್ ಕಿಶೋರ್ ಟೀಕೆ

ʼʼಅನೇಕ ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಯಾವುದೇ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಯಾವುದೇ ವ್ಯಕ್ತಿಗಿಂತ ದೊಡ್ಡವರು ಮತ್ತು ಪದೇ ಪದೆ ವೈಫಲ್ಯಗಳ ಹೊರತಾಗಿಯೂ ಪಕ್ಷಕ್ಕಾಗಿ ಸೇವೆ ಸಲ್ಲಿಸುವವರು ಅವರೇʼʼ ಎಂದು ಕಿಶೋರ್‌ ಹೇಳಿದ್ದಾರೆ. ʼʼಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಮಾಧ್ಯಮಗಳಂತಹ ಸಂಸ್ಥೆಗಳೊಂದಿಗೆ ರಾಜಿ ಮಾಡಿಕೊಳ್ಳದೇ ಇರುವುದರಿಂದ ತಮ್ಮ ಪಕ್ಷವು ಚುನಾವಣೆಯಲ್ಲಿ ಹಿನ್ನಡೆಯನ್ನು ಎದುರಿಸುತ್ತಿದೆ ಎಂಬ ರಾಹುಲ್‌ ಗಾಂಧಿ ಅವರ ವಾದವನ್ನು ಪ್ರಶ್ನಿಸಿದ ಅವರು, ಇದು ಭಾಗಶಃ ನಿಜವಾಗಿರಬಹುದು ಆದರೆ ಸಂಪೂರ್ಣ ಸತ್ಯವಲ್ಲ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನಗಳಿಂದ 44 ಸ್ಥಾನಗಳಿಗೆ ಕುಸಿದಿತ್ತು. ಮತ್ತು ಬಿಜೆಪಿ ವಿವಿಧ ಸಂಸ್ಥೆಗಳ ಮೇಲೆ ಕಡಿಮೆ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version