Site icon Vistara News

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

Rahul Gandhi

Rahul Gandhi

ಲಕ್ನೋ: ಲೋಕಸಭೆ ಚುನಾವಣೆ (Lok Sabha Election)ಯಲ್ಲಿ ಈ ಹಿಂದೆ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮೇ 3ರಂದು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ರಾಹುಲ್‌ ಗಾಂಧಿ ಒಟ್ಟು 20.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ 3 ಕೋಟಿ 81 ಲಕ್ಷದ 33 ಸಾವಿರ ರೂ. ಮೌಲ್ಯದ ಷೇರುಗಳು ಮತ್ತು 15 ಲಕ್ಷದ 21 ಸಾವಿರ ರೂ. ಮೌಲ್ಯದ ಚಿನ್ನದ ಬಾಂಡ್‌ಗಳು ಸೇರಿವೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಇನ್ನು ರಾಹುಲ್‌ ಗಾಂಧಿ ಅವರ ಬಳಿ 55 ಸಾವಿರ ರೂ. ನಗದು ಇದೆ. ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಸ್ಥಿರಾಸ್ತಿ ಪೈಕಿ 9 ಕೋಟಿ 4 ಲಕ್ಷ 89 ಸಾವಿರ ರೂ. ಮೌಲ್ಯದ ಸ್ವ-ಖರೀದಿ ಆಸ್ತಿ ಹಾಗೂ 2 ಕೋಟಿ 10 ಲಕ್ಷ 13 ಸಾವಿರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿದೆ.

ವಾಹನವಿಲ್ಲ

ಅಚ್ಚರಿ ಎಂದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. ಆದರೆ ಗುರುಗ್ರಾಮದಲ್ಲಿ 9.04 ಕೋಟಿ ರೂ. ಮೌಲ್ಯದ ಸ್ವಂತ ಕಚೇರಿಯೊಂದನ್ನು ಹೊಂದಿದ್ದಾರೆ. ಹೊಸದಿಲ್ಲಿಯ ಮೆಹ್ರೌಲಿಯ ಸುಲ್ತಾನ್‌ಪುರ ಗ್ರಾಮದಲ್ಲಿ ಸುಮಾರು 3.778 ಎಕರೆ ಕೃಷಿ ಭೂಮಿ ಇದ್ದು, ಇದು ರಾಹುಲ್‌ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿದೆ. ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಅಲ್ಲದೆ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿರುವುದು ಅಫಿಡವಿಟ್‌ನ ವಿವರದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

ರಾಯ್‌ ಬರೇಲಿಯಲ್ಲಿ ನಾಮ ಪತ್ರ

ಸುಮಾರು 20 ವರ್ಷಗಳ ಕಾಲ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಉತ್ತರ ಪ್ರದೇಶದ ರಾಯ್​ ಬರೇಲಿಯಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ. ಇಲ್ಲಿ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ.

Exit mobile version