Site icon Vistara News

S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

Nijjar Killing

jaishankar

ಹೊಸದಿಲ್ಲಿ: ಈ ಹಿಂದೆ ಕೇಂದ್ರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷ ವಿದೇಶಾಂಗ ನೀತಿಯಲ್ಲೂ ಮುಸ್ಲಿಂ ಮತ ಬ್ಯಾಂಕ್‌ ರಾಜಕಾರಣ ನಡೆಸುವ ಮೂಲಕ ದೇಶದ ಹಿತಾಸಕ್ತಿ ಕಡೆಗಣಿಸಿತ್ತು ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಆಪಾದಿಸಿದ್ದಾರೆ.

ವಿಡಿಯೊ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಮುಸ್ಲಿಂ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಮತ್ತು ಮುಸ್ಲಿಮರನ್ನು ಓಲೈಸಲು ಯಾವ ರೀತಿ ಕಾಂಗ್ರೆಸ್‌ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿತ್ತು ಎನ್ನುವುದನ್ನು ವಿವರಿಸಿದ್ದಾರೆ.

1948ರಲ್ಲಿ ಇಸ್ರೇಲ್‌ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ 1992ರವರೆಗೂ ಅಲ್ಲಿ ಭಾರತದ ರಾಯಭಾರಿಯನ್ನು ನೇಮಿಸಲಿಲ್ಲ. ಆ ಬಳಿಕ 1992ರಲ್ಲಿ ಇಸ್ರೇಲ್‌ನಲ್ಲಿ ತೀರ ವಿಳಂಬವಾಗಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ 2017ರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಲಿಲ್ಲ. ಇಸ್ರೇಲ್‌ ಜತೆ ಬಾಂಧವ್ಯ ಹೊಂದಿದರೆ, ಆ ದೇಶದ ಜತೆ ವ್ಯವಹಾರ ನಡೆಸಿದರೆ, ಆ ದೇಶಕ್ಕೆ ಭೇಟಿ ನೀಡಿದರೆ ಭಾರತದ ಮುಸಲ್ಮಾನರು ತಮ್ಮ ಪಕ್ಷದ ವಿರುದ್ಧ ಸಿಟ್ಟಾಗುತ್ತಾರೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್‌ ಆಡಳಿತ ಇಸ್ರೇಲ್‌ನಂಥ ಬಲಿಷ್ಠ ದೇಶವನ್ನು ಕಡೆಗಣಿಸಿತು ಎಂದು ಜೈಶಂಕರ್‌ ಹೇಳಿದ್ದಾರೆ.

ಕೃಷಿ, ತಂತ್ರಜ್ಞಾನ, ರಕ್ಷಣೆಯಂಥ ಹಲವು ವಿಷಯಗಳಲ್ಲಿ ಇಸ್ರೇಲ್‌ ಅತ್ಯಂತ ಬಲಿಷ್ಠ ಮತ್ತು ಪ್ರಮುಖ ದೇಶ. ಇಸ್ರೇಲ್‌ ಭಾರತದ ಮಿತ್ರ ದೇಶ. ಇಸ್ರೇಲ್‌ನಿಂದ ಭಾರತದ ರಕ್ಷಣಾ ವಲಯಕ್ಕೆ ಹಲವು ಪ್ರಯೋಜನಗಳು ಇದ್ದವು. ಇಷ್ಟಾಗಿಯೂ ಕಾಂಗ್ರೆಸ್‌, ಮುಸ್ಲಿಮರನ್ನು ಓಲೈಸಲು ಇಸ್ರೇಲ್‌ ಸಂಬಂಧದಿಂದ ದೂರ ಉಳಿಯಿತು. ಇದರಿಂದ ನಮ್ಮ ದೇಶಕ್ಕೆ ತುಂಬಾ ನಷ್ಟವಾಯಿತು ಎಂದು ಜೈಶಂಕರ್‌ ವಿವರಿಸಿದ್ದಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಮೂಲಕ, ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಭಾರತದ ಶತ್ರು ದೇಶ ಪಾಕಿಸ್ತಾನದ ವಿಚಾರದಲ್ಲೂ ಕಾಂಗ್ರೆಸ್‌ ಆಡಳಿತ ಮುಸ್ಲಿಂ ಓಲೈಕೆಯ ನೀತಿ ಅನುಸರಿಸಿತು. ದೇಶದ ಒಳಗಷ್ಟೇ ಅಲ್ಲ, ಹೊರಗೂ ಓಟ್‌ ಬ್ಯಾಂಕ್‌ ರಾಜಕಾರಣ ನಡೆಸಿತು ಎಂದು ಜೈಶಂಕರ್‌ ಆಪಾದಿಸಿದ್ದಾರೆ.

ಮೋದಿಯಿಂದಲೂ ಕಾಂಗ್ರೆಸ್‌ ವಿರುದ್ಧ ಮತ ಬ್ಯಾಂಕ್‌ ರಾಜಕಾರಣ ಆರೋಪ

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಮಂಗಳವಾರ ಬೆಳಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಕಾಂಗ್ರೆಸ್‌ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ದಲಿತರ ಮೀಸಲು ಮುಸಲ್ಮಾನರಿಗೆ

ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್‌ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್‌ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದ್ದರು.

ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?

ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದಿದ್ದರು.

ಇದನ್ನೂ ಓದಿ: S Jaishankar : ಪಾಠ ಹೇಳಲು ಬರಬೇಡಿ; ಭಾರತದ ಚುನಾವಣಾ ವಿಚಾರಕ್ಕೆ ಮೂಗು ತೂರಿಸಿದ ವಿಶ್ವ ಸಂಸ್ಥೆಗೆ ಜೈಶಂಕರ್​​ ತಿರುಗೇಟು

ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದ್ದರು.

Exit mobile version