Site icon Vistara News

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

School Jobs Scam

School Jobs Scam

ಕೋಲ್ಕತ್ತಾ: ಟಿಎಂಸಿ (TMC)ಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ಕುನಾಲ್ ಘೋಷ್ (Kunal Ghosh) ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಶಾಲಾ ನೇಮಕಾತಿ ಹಗರಣ (School Jobs Scam)ದ ಬಗ್ಗೆ ತೃಣಮೂಲ ಕಾಂಗ್ರೆಸ್‌ಗೆ ತಿಳಿದಿತ್ತು ಎಂದು ದೂರಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟ ಕುನಾಲ್ ಘೋಷ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಮಾತ್ರವಲ್ಲ ಲೋಕಸಭಾ ಚುನಾವಣೆಯ ಮಧ್ಯೆ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ (ಏಪ್ರಿಲ್ 22) ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ನಡೆಸಿದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016ರ (State Level Selection Test-2016) ನೇಮಕಾತಿ ಪ್ರಕ್ರಿಯೆ ಅನೂರ್ಜಿತ ಎಂದು ಕೋಲ್ಕತ್ತಾ ಹೈಕೋರ್ಟ್ ಘೋಷಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು.

ಬುಧವಾರ ಬಿಜೆಪಿ ಲೋಕಸಭಾ ಅಭ್ಯರ್ಥಿಯೊಂದಿಗೆ ವೇದಿಕೆ ಹಂಚಿಕೊಂಡ ಕುನಾಲ್ ಘೋಷ್ ಅವರನ್ನು ಟಿಎಂಸಿ ಹುದ್ದೆಯಿಂದ ವಜಾ ಮಾಡಿತ್ತು. ʼʼಶಾಲಾ ಶಿಕ್ಷಣ ಇಲಾಖೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸುಲಿಗೆ ನಡೆಯುತ್ತಿದೆ ಎಂಬ ಅಂಶ ಪಕ್ಷಕ್ಕೆ ಚೆನ್ನಾಗಿ ತಿಳಿದಿತ್ತು. 2021ರ ವಿಧಾನಸಭಾ ಚುನಾವಣೆಗೆ ಮೊದಲೇ ಪಕ್ಷಕ್ಕೆ ಈ ಬಗ್ಗೆ ಅರಿವಿತ್ತು” ಎಂದು ಅವರು ಹೇಳಿದ್ದಾರೆ. “ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಹೊಂದಿದ್ದ ಕಾರಣಕ್ಕೆ 2021ರಲ್ಲಿ ಪಕ್ಷವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ ಪಾರ್ಥ ಚಟರ್ಜಿ ಅವರನ್ನು ಶಿಕ್ಷಣ ಸಚಿವಾಲಯದಿಂದ ಕೈಗಾರಿಕಾ ಇಲಾಖೆಗೆ ವರ್ಗಾಯಿಸಿತು” ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಜ್ಯ ಸರ್ಕಾರ 2016ರಲ್ಲಿ ಮಾಡಿದ್ದ 25,753 ಶಿಕ್ಷಕರ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿದ್ದಲ್ಲದೆ ರದ್ದಾದವರು, 2016ರಿಂದ ತಾವು ಪಡೆದ ಸಂಬಳವನ್ನೂ ಬಡ್ಡಿ ಸಹಿತ ವಾಪಸ್‌ ನೀಡಬೇಕು ಎಂಬ ಆದೇಶ ಹೊರಡಿಸಿತ್ತು. ಅಂದು 24,640 ಖಾಲಿ ಹುದ್ದೆಗಳಿಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016ಗೆ ಹಾಜರಾದ 25,753 ಮಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ಇದು 9, 10, 11 ಮತ್ತು 12ನೇ ತರಗತಿಗಳ ಶಿಕ್ಷಕರು ಮತ್ತು ಗುಂಪು-ಸಿ ಮತ್ತು ಡಿ ಸಿಬ್ಬಂದಿ ಹುದ್ದೆಗಳನ್ನು ಒಳಗೊಂಡಿತ್ತು.

ಎಸ್ಎಲ್ಎಸ್‌ಟಿ-2016ರಲ್ಲಿ ಹಾಜರಾಗಿ ಉದ್ಯೋಗ ಸಿಗದ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಅಕ್ರಮಗಳನ್ನು ಕಂಡುಕೊಂಡ ನಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಹಲವಾರು ಉದ್ಯೋಗಗಳನ್ನು ವಜಾಗೊಳಿಸಲು ಹೈಕೋರ್ಟ್ ತೀರ್ಪು ನೀಡಿತ್ತು.

Exit mobile version