Site icon Vistara News

Somnath Bharti: ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಆಪ್‌ ನಾಯಕ ಯೂ ಟರ್ನ್‌; ನೀಡಿದ ಸಮರ್ಥನೆ ಏನು?

Somnath Bharti

Somnath Bharti

ನವದೆಹಲಿ: ಬಿಜೆಪಿ ನೃತೃತ್ವದ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ದೆಹಲಿಯ ಆಮ್‌ ಆದ್ಮಿ ಪಾರ್ಟಿ (Aam Aadmi Party) ನಾಯಕ ಸೋಮನಾಥ ಭಾರ್ತಿ (Somnath Bharti) ಈಗ ಯೂ ಟರ್ನ್‌ ಹೊಡೆದಿದ್ದಾರೆ. ತಲೆ ಬೋಳಿಸಿಕೊಳ್ಳಲು ನಿರಾಕರಿಸಿದ್ದಾರೆ.

ನರೇಂದ್ರ ಮೋದಿ ಸ್ವಂತ ಬಲದ ಮೇಲೆ ಪ್ರಧಾನ ಮಂತ್ರಿಯಾಗಿಲ್ಲ. ಅವರು ಮಿತ್ರ ಪಕ್ಷಗಳ ಸಹಾಯದಿಂದ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಹೀಗಾಗಿ ತಲೆ ಬೋಳಿಸುವುದಿಲ್ಲ ಎಂದು ಅವರು ಸಮರ್ಥನೆ ನೀಡಿದ್ದಾರೆ. ʼʼಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ಆದರೆ ಅವರು ಈಗ ಸ್ವಂತ ಬಲದಿಂದ ಪ್ರಧಾನಿ ಹುದ್ದೆಗೆ ಏರಿಲ್ಲ. ಮಿತ್ರಪಕ್ಷಗಳ ಸಹಾಯದಿಂದ ಪ್ರಧಾನಿಯಾಗಿದ್ದಾರೆʼʼ ಎಂದು ಸೋಮನಾಥ ಭಾರ್ತಿ ಹೇಳಿದ್ದಾರೆ.

ʼʼನನ್ನ ಹೇಳಿಕೆಯನ್ನು ಯಾವ ಕಾರಣಕ್ಕೂ ತಿರುಚುವುದಿಲ್ಲ. ಮೋದಿ ಅವರು ಸ್ವಂತ ಬಲದಿಂದ ಪ್ರಧಾನಿಯಾಗದಿದ್ದರೆ ಅದು ಅವರ ಗೆಲುವು ಎಂದು ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ನಾನು ಹೇಳಿದ ಪ್ರಕಾರ ಅವರು ಸ್ವತಂತ್ರವಾಗಿ ಜಯ ಗಳಿಸಿಲ್ಲ. ಹೀಗಾಗಿ ನಾನು ತಲೆಬೋಳಿಸಬೇಕಾಗಿಲ್ಲʼʼ ಎಂದೂ ವಿವರಿಸಿದ್ದಾರೆ.

ಜೂನ್‌ 1ರಂದು ಚುನಾವಣೋತ್ತರ ಪ್ರಕಟವಾದ ಬಳಿಕ ಸೋಮನಾಥ ಭಾರ್ತಿ ಪ್ರತಿಜ್ಞೆ ಕೈಗೊಂಡಿದ್ದರು. ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಎಕ್ಸಿಟ್‌ ಪೋಲ್‌ ಸಮೀಕ್ಷೆ ಸುಳ್ಳಾಗುತ್ತದೆ ಎಂದಿದ್ದ ಅವರು, ʼʼಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ! ಎಲ್ಲ ಎಕ್ಸಿಟ್ ಪೋಲ್‌ಗಳು ಜೂನ್ 4ರಂದು ತಪ್ಪಾಗುತ್ತವೆ ಮತ್ತು ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯಲ್ಲಿ ಎಲ್ಲ ಏಳು ಸ್ಥಾನಗಳಲ್ಲಿ ಇಂಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಜೂನ್‌ 9ರಂದು ಈ ಪ್ರತಿಜ್ಞೆಯನ್ನು ಎಕ್ಸ್‌ ಮೂಲಕ ನೆನಪಿಸಿದ ದೆಹಲಿಯ ಬಿಜೆಪಿ ನಾಯಕ ಪ್ರವೀಣ್‌ ಶಂಕರ್‌ ಕಪೂರ್‌ ಅವರು ಕೂಡಲೇ ತಲೆ ಬೋಳಿಸುವಂತೆ ಸೋಮನಾಥ ಭಾರ್ತಿ ಅವರಲ್ಲಿ ಹೇಳಿದ್ದರು. ʼʼನಮಗೆ ಗೊತ್ತು ಆಮ್‌ ಆದ್ಮಿ ಪಾರ್ಟಿ (ಆಪ್‌)ಯವರು ಯಾವತ್ತೂ ತಮ್ಮ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ನಾನು ಸೋಮನಾಥ ಭಾರ್ತಿ ಅವರಲ್ಲಿ ತಲೆ ಬೋಳಿಸಿಕೊಳ್ಳಲು ನೆನಪಿಸಿಕೊಳ್ಳುತ್ತಿದ್ದೇನೆ. ಮಾತು ಉಳಿಸಿಕೊಡದಿದ್ದರೆ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದುಕೊಳ್ಳಬೇಕುʼʼ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ.

ಇದನ್ನೂ ಓದಿ: Mohan Bhagwat: ಮಣಿಪುರ ಹಿಂಸೆ ನಿಲ್ಲಿಸಿ; ಅಧಿಕಾರ ಹಿಡಿದ ಮೋದಿಗೆ ಟಾಸ್ಕ್‌ ಕೊಟ್ಟ ಮೋಹನ್‌ ಭಾಗವತ್!

ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 292 ಸೀಟುಗಳನ್ನು ಪಡೆದುಕೊಂಡು ಅಧಿಕಾರವನ್ನು ಉಳಿಸಿಕೊಂಡಿದೆ. ಈ ಪೈಕಿ ಬಿಜೆಪಿ 240 ಸ್ಥಾನಗಳಲ್ಲಿ ಜಯ ಗಳಿಸಿದೆ. ವಿಶೇಷ ಎಂದರೆ ದೆಹಲಿಯಲ್ಲಿ ಬಿಜೆಪಿ ಕ್ಲೀನ್‌ ಸ್ವಿಪ್‌ ಮಾಡಿದ್ದು, 7 ಸ್ಥಾನಗಳಲ್ಲಿಯೂ ಜಯಭೇರಿ ಬಾರಿಸಿದೆ.

Exit mobile version