Site icon Vistara News

Mandya Lok Sabha constituency: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಟಾರ್‌ ಚಂದ್ರು ಕಾಂಗ್ರೆಸ್‌ ಅಭ್ಯರ್ಥಿ; ಯಾರಿವರು?

Star Chandru is the Congress candidate for Mandya Lok Sabha constituency

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರವು (Mandya Lok Sabha constituency) ನಾನಾ ಕಾರಣಗಳಿಂದ ಭಾರಿ ಸದ್ದು ಮಾಡುತ್ತಿದೆ. ಈ ಬಾರಿ ಬಿಜೆಪಿ – ಜೆಡಿಎಸ್‌ ಮೈತ್ರಿಯಿಂದಾಗಿ (BJP JDS Alliance) ಈ ಕ್ಷೇತ್ರ ಮತ್ತಷ್ಟು ಕುತೂಹಲಕ್ಕೆ ಸಾಕ್ಷಿಯಾಗಿದೆ. ಈ ಮಧ್ಯೆ ಹಾಲಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರ ನಡೆ ಏನು ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ. ಕಾರಣ, ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್‌ ಪಟ್ಟು ಹಿಡಿದಿದೆ. ಇದರ ಜತೆಗೆ ಈಗ ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಕ್ಷೇತ್ರಕ್ಕೆ ವೆಂಕಟೇರಮಣೇಗೌಡ (ಸ್ಟಾರ್ ಚಂದ್ರು) (Venkataramanegowda – Star Chandru) ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಮೊದಲ ಪಟ್ಟಿಯಲ್ಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಂದೇಶವನ್ನು ರವಾನೆ ಮಾಡಿರುವ ಕಾಂಗ್ರೆಸ್‌, ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಲು ಸೂಚನೆ ನೀಡಿದೆ. ಅಲ್ಲದೆ, ಸ್ಟಾರ್ ಚಂದ್ರು‌ ಅವರ ಹೆಸರು ಘೋಷಣೆಗೆ ಮೊದಲೇ ಕೇಳಿ ಬರುತ್ತಿತ್ತು. ಅವರೂ ಮಂಡ್ಯದ ಹಲವು ಕಡೆ ಸದ್ದಿಲ್ಲದೆ ಪ್ರಚಾರವನ್ನು ಪ್ರಾರಂಭ ಮಾಡಿದ್ದರು. ಈ ಸಂಬಂಧ ಪೋಸ್ಟರ್‌ಗಳು ಸಹ ಹರಿದಾಡಿದ್ದವು. ಆಗ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆಗೂ ಮೊದಲೇ ಸ್ಟಾರ್ ಚಂದ್ರು ಕಾಂಗ್ರೆಸ್‌ ಅಭ್ಯರ್ಥಿ ಆಗಿಬಿಟ್ಟರೇ ಎಂದು ಎಲ್ಲರೂ ಪ್ರಶ್ನೆ ಮಾಡಿದ್ದರು.

Congress announces candidate for Mandya Lok Sabha constituency Who is Star Chandru

ಚಂದ್ರು ಪ್ರಚಾರದ ಪೋಸ್ಟರ್‌ ವೈರಲ್!‌

ಇತ್ತ ಸ್ಟಾರ್‌ ಚಂದ್ರು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಪ್ರಚಾರದ ಪೋಸ್ಟರ್‌ ಅನ್ನು ವೈರಲ್‌ ಮಾಡಿದ್ದರು. ಎಂಪಿ ಚುನಾವಣೆಯಲ್ಲಿ ಸಹಕರಿಸುವಂತೆ ಕೈ ಮುಗಿದು ಮನವಿ ಮಾಡುತ್ತಿರುವ ಫೋಟೊವನ್ನು ಹಾಕಲಾಗಿತ್ತು. ಕಾಂಗ್ರೆಸ್‌ಗೆ ಮತ ದೇಶಕ್ಕೆ ಹಿತ. ಕಾಂಗ್ರೆಸ್ ಅಭ್ಯರ್ಥಿ ವೆಂಕಟೇರಮಣೇಗೌಡ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಲಾಗಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ‌.ಕೆ. ಶಿವಕುಮಾರ್ (DCM DK Shivakumar) ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರ ಫೋಟೊವನ್ನು ಸಹ ಹಾಕಲಾಗಿತ್ತು.

ಯಾರು ಈ ಸ್ಟಾರ್‌ ಚಂದ್ರು?

ಸ್ಟಾರ್‌ ಚಂದ್ರು ಒಬ್ಬ ಉದ್ಯಮಿಯಾಗಿದ್ದಾರೆ. ಇವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಸ್ಟಾರ್‌ ಬ್ಯುಲ್ಡರ್ಸ್‌ ಎಂಬ ಕಂಪನಿ ಇವರ ಒಡೆತನದಲ್ಲಿದ್ದು, ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳನ್ನು ಇವರು ನಡೆಸುತ್ತಾರೆ. ಸದ್ಯ ನಡೆಯುತ್ತಿರುವ ವಿಸಿ ನಾಲೆ ಆಧುನೀಕರಣ ಕಾಮಗಾರಿ ಸಹ ಇವರ ಕಂಪನಿಯಿಂದಲೇ ಆಗುತ್ತಿದೆ. ಅಲ್ಲದೆ, ಇವರು ಸಚಿವ ಎನ್.‌ ಚಲುವರಾಯ ಸ್ವಾಮಿ ಅವರ ಆಪ್ತರೂ ಹೌದು.

ಫೀಲ್ಡ್‌ಗಿಳಿದಿರುವ ಸ್ಟಾರ್‌ ಚಂದ್ರು

ಈಗಾಗಲೇ ತನಗೇ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಸ್ಟಾರ್‌ ಚಂದ್ರು ಅವರು ಮಂಡ್ಯ ಲೋಕಸಭಾ ಕ್ಷೇತ್ರ ಸಂಚಾರವನ್ನು ಆರಂಭಿಸಿದ್ದರು. ಈಗಾಗಲೇ ಫೀಲ್ಡ್‌ಗೆ ಇಳಿದಿದ್ದು, ಸ್ಥಳೀಯ ನಾಯಕರನ್ನು ಮಾತನಾಡಿಸಿದ್ದಾರೆ. ತಾಲೂಕು ಮಟ್ಟದ, ಗ್ರಾಮ ಮಟ್ಟದ ಮುಖಂಡರ ಭೇಟಿ ಮಾಡುವ ಮೂಲಕ ಅವರ ವಿಶ್ವಾಸವನ್ನು ಗಳಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದರು. ಈಗ ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ.

ಇದನ್ನೂ ಓದಿ: Aadhaar seeding: ಪಹಣಿಗೂ ಮಾಡಿ ಆಧಾರ್ ಲಿಂಕ್;‌ ‘ಲಿಂಕಿಂಗ್‌’ ಲೋಕದಲ್ಲಿ ರೈತ ಹೈರಾಣ!

ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದರು

ಈಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಸರ್ಕಾರದ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟಾರ್‌ ಚಂದ್ರು ವೇದಿಕೆಯನ್ನು ಹಂಚಿಕೊಂಡಿದ್ದರು.

Exit mobile version