Site icon Vistara News

Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

Uddhav Thackeray

Uddhav Thackeray

ಮುಂಬೈ: ಸುಮಾರು ಎರಡು ತಿಂಗಳು ಕಾಲ ಕಾಲ ನಡೆದ ಲೋಕಸಭಾ ಚುನಾವಣೆಯ ಪ್ರಕ್ರಿಯೆಗೆ ಜೂನ್‌ 4ರಂದು ಹೊರ ಬಿದ್ದ ಫಲಿತಾಂಶದ ಮೂಲಕ ತೆರೆ ಎಳೆಯಲಾಗಿದೆ (Election Results 2024). ಎಲ್ಲರ ನಿರೀಕ್ಷೆಯನ್ನು ಮೀರಿದ ರಿಸಲ್ಟ್‌ ಹೊರ ಬಿದ್ದಿದ್ದು, 294 ಕಡೆ ಗೆದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸರ್ಕಾರ ರಚನೆಗೆ ಮುಂದಾಗಿದೆ. ಜೂನ್‌ 8ರಂದು ನರೇಂದ್ರ ಮೋಲದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬುಧವಾರ (ಜೂನ್‌ 5) ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಇಂಡಿ ಒಕ್ಕೂಟದ ಸಭೆಯಲ್ಲಿ ಉದ್ಧವ್ ಠಾಕ್ರೆ (Uddhav Thackeray) ಭಾಗವಹಿಸದಿರುವುದು ಅವರು ಎನ್‌ಡಿಎಗೆ ಮರಳುತ್ತಾರೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. ಹೀಗಾಗಿ ಸದ್ಯ ಎಲ್ಲರ ಕಣ್ಣ ಮಹಾರಾಷ್ಟ್ರದತ್ತ ನೆಟ್ಟಿದೆ.

ಸಾಂಗ್ಲಿ ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದು, ಈ ಕಾರಣಕ್ಕಾಗಿ ಅವರು ಎನ್‌ಡಿಎ ಜತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ. ಇಂಡಿ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್‌ ಪವಾರ್)‌ ಅವರ ಮಹಾ ವಿಕಾಸ್‌ ಅಘಾಡಿಯು ಈ ಬಾರಿ 3೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿಯೂ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) 9 ಸ್ಥಾನಗಳನ್ನು ಗೆದ್ದುಕೊಂಡಿದೆ.

2022ರಲ್ಲಿ ಶಿವಸೇನೆಯು ಇಬ್ಭಾಗವಾಗಿತ್ತು. ಬಿಜೆಪಿಯ ಜತೆ ಕೈ ಜೋಡಿಸಿದ್ದ ಶಿವಸೇನೆಯ ಹಿರಿಯ ನಾಯಕ ಏನನಾಥ ಸಿಂಧೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡಿತ್ತು. ಹೀಗಾಗಿ ಸದ್ಯ ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್‌ ಶಿಂಧೆ ಬಣ ಮತ್ತು ಉದ್ಧವ್‌ ಠಾಕ್ರೆ ಬಣ ಇದೆ. ಈ ಪೈಕಿ ಉದ್ಧವ್‌ ಠಾಕ್ರೆ ಬಣ ಇಂಡಿ ಒಕ್ಕೂಟದೊಂದಿಗೆ ಗುರುತಿಸಿಕೊಂಡಿದ್ದರೆ ಏಕನಾಥ್‌ ಶಿಂದೆ ನೇತೃತ್ವದ ಶಿವಸೇನೆ ಎನ್‌ಡಿಎ ಮಿತ್ರಪಕ್ಷವಾಗಿದೆ. ಸದ್ಯ ಉದ್ಧವ್‌ ಠಾಕ್ರೆ ನಡೆ ಕುತೂಹಲ ಮೂಡಿಸಿದೆ.

ಎನ್‌ಡಿಎಗೆ ಮೋದಿಯೇ ಸಾರಥಿ ಎಂದು ಸಭೆ ತೀರ್ಮಾನ

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಬುಧವಾರ ಎನ್‌ಡಿಎ ಒಕ್ಕೂಟದ ಹೈಲೆವೆಲ್‌ ಸಭೆ ನಡೆದಿದೆ. ಈ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಜೆಡಿಯು, ಟಿಡಿಪಿ, ಎಲ್‌ಜೆಪಿ ಸೇರಿ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Devendra Fadnavis: ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಸಾಧನೆ; ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಫಡ್ನವೀಸ್

Exit mobile version