Site icon Vistara News

Vistara news polling booth: ಬೆಳಗಾವಿಯಲ್ಲಿ ಬಿಜೆಪಿಯೇ ಬಿಗ್‌ಬಾಸ್‌; ಜನರ ಅಭ್ಯರ್ಥಿ ಶೆಟ್ಟರೂ ಅಲ್ಲ, ಕವಟಗಿಮಠವೂ ಅಲ್ಲ!

Vistara News polling booth BJP is major party to win in Election

ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಹೋರಾಟಕ್ಕೆ ಅಖಾಡವನ್ನು ಸಜ್ಜುಗೊಳಿಸುತ್ತಿವೆ. ಈ ಹೊತ್ತಿನಲ್ಲಿ ನಾಗರಿಕರಲ್ಲಿ ಮತದಾನ ಜಾಗೃತಿ ಮೂಡಿಸಲು ಮತ್ತು ಜನರ ನಾಡಿಮಿಡಿತ ಅರಿಯಲು ವಿಸ್ತಾರ ನ್ಯೂಸ್‌ (Vistara News) ಆರಂಭಿಸಿರುವ ಅತ್ಯಂತ ವಿನೂತನ ಹಾಗೂ ಮೊಟ್ಟಮೊದಲ ಪೋಲಿಂಗ್‌ ಬೂತ್‌ಗೆ (Vistara news polling booth) ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್‌. ಮಂಜುನಾಥ್‌ (Dr CN Manjunath) ಅವರು ಸೋಮವಾರ ಬೆಳಗ್ಗೆ ಚಾಲನೆ ನೀಡಿದರು. ಇದರ ಭಾಗವಾಗಿ ಮೊಟ್ಟ ಮೊದಲ ಕ್ಷೇತ್ರವನ್ನಾಗಿ ಮಂಡ್ಯ ಲೋಕಸಭಾ ಕಣವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಎರಡನೇ ಕ್ಷೇತ್ರವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪರಿಗಣಿಸಲಾಗಿತ್ತು. ಇವುಗಳಿಗೆ ಆಯಾ ಭಾಗದ ಮತದಾರರಿಂದ ಕರೆಗಳ ಮಹಾಪೂರವೇ ಹರಿದುಬಂದಿದೆ. ಆ ಜಿಲ್ಲೆಯ ಮತದಾರರು ಭವಿಷ್ಯದ ಸಂಸದರ ಬಗ್ಗೆ ಷರಾ ಬರೆದಿದ್ದಾರೆ. ತಮ್ಮ ನೆಚ್ಚಿನ ಸಂಸದರಾಗಲು ಯಾರು ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದಾರೆ. ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಿಸಿ ಬಂದಿರುವ ಕರೆಗಳ ಆಧಾರದ ಮೇಲೆ ಬಿಜೆಪಿ ನಂ. 1 ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಇದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಸಾಕಷ್ಟು ಕರೆಗಳು ಬಂದಿದ್ದು, ಜನರು ತಮ್ಮ ಮನದಾಳವನ್ನು ತಿಳಿಸಿದ್ದಾರೆ. ಅದರ ಫಲಿತಾಂಶವನ್ನು ಈಗ ಬಹಿರಂಗ ಮಾಡಲಾಗಿದ್ದು, ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯೇ ‘ಬಿಗ್ ಬಾಸ್’ ಆಗಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ ಗೆದ್ದುಕೊಂಡು ಬರಲಾಗುತ್ತಿದೆ. ಈ ಬಾರಿಯೂ ಮತದಾರರು ಕಮಲ ಪಕ್ಷದ ಮೇಲೆಯೇ ತಮ್ಮ ಒಲವನ್ನು ತೋರಿದ್ದಾರೆ. ಮತದಾರರ ಪ್ರಕಾರ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗಳು ಯಾರಾಗಬೇಕು? ತಮ್ಮ ನೆಚ್ಚಿನ ನಾಯಕ ಯಾರು ಎಂದು ತಿಳಿಸಿದ್ದಾರೆ. ವಿಚಿತ್ರವೆಂದರೆ ಈಗಾಗಲೇ ಚಾಲ್ತಿಯಲ್ಲಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಶಾಸಕ ಮಹಾಂತೇಶ್‌ ಕವಟಗಿ ಮಠ ಅವರನ್ನು ಮತದಾರ ಪಕ್ಕಕ್ಕಿಟ್ಟಿದ್ದು, ತನ್ನ ಮನದಾಳದ ಅಭ್ಯರ್ಥಿಯನ್ನು ಸೂಚಿಸಿದ್ದಾನೆ. ಹೀಗಾಗಿ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆಗಳಲ್ಲಿ ಚಿತ್ರಣದಲ್ಲೇ ಇಲ್ಲದ ಈರಣ್ಣ ಕಡಾಡಿ ಅವರು ಕಪ್ಪು ಕುದುರೆ (Black Horse) ಆಗಿ ಮೂಡಿಬಂದಿದ್ದಾರೆ!

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಬೆಳಗಾವಿ ಮತಕ್ಷೇತ್ರದಿಂದ ಒಟ್ಟು 6064 ಕರೆಗಳು ಬಂದಿವೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರೆಗಳ ಮಹಾಪೂರವೇ ಹರಿದುಬಂದಿದೆ. ವಿಸ್ತಾರ ನ್ಯೂಸ್‌ಗೆ ಬಂದ ಒಟ್ಟಾರೆ ಕರೆಗಳ ಪೈಕಿ ಬಿಜೆಪಿ ಅಭ್ಯರ್ಥಿ ಪರವೇ ಅತಿ ಹೆಚ್ಚು ಅಂದರೆ 5123 ಮತಗಳು ಬಂದಿವೆ. ಕಾಂಗ್ರೆಸ್‌ಗೆ ಬಂದಿರುವ ಮತಗಳು 923, ಇತರೆ -18 ಮತಗಳನ್ನು ಜನರು ನೀಡಿದ್ದಾರೆ.

ಶೇಕಡಾವಾರು ಮತಗಳ ವಿವರ

ಬೆಳಗಾವಿ ಮತದಾರರ ನೆಚ್ಚಿನ ಅಭ್ಯರ್ಥಿಗಳು ಇವರು!

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಸುದ್ದಿ ಇದೆ. ಕಾರಣ, ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಸಮೀಪದ ಅಂತರದಿಂದ ಅವರು ಗೆಲುವು ಕಂಡಿದ್ದರು. ಪತಿ ಸುರೇಶ್‌ ಅಂಗಡಿ ಸಾವಿನ ಅನುಕಂಪದ ನಡುವೆಯೂ ಅವರಿಗೆ ಹೆಚ್ಚಿನ ಜನಬೆಂಬಲ ದೊರೆತಿರಲಿಲ್ಲ. ಇದಕ್ಕಾಗಿ ಬಹಳ ಕಡಿಮೆ ಮಾರ್ಜಿನ್‌ನಲ್ಲಿ ಗೆಲುವು ಕಂಡಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಯುವ ಮುಖಕ್ಕೆ ಮಣೆ ಹಾಕಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಸೊಸೆ ಹಾಗೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಪುತ್ರಿ ಶ್ರದ್ಧಾ ಶೆಟ್ಟರ್‌ ಅವರಿಗೆ ಮಣೆ ಹಾಕಬಹುದು. ಇಲ್ಲವೇ ಜಗದೀಶ್‌ ಶೆಟ್ಟರ್‌ ಅವರಿಗೇ ಟಿಕೆಟ್‌ ಕೊಡಬಹುದು ಎಂಬ ಚರ್ಚೆಗಳು ಬೆಳಗಾವಿ ಕ್ಷೇತ್ರದಲ್ಲಿ ಇದೆ. ಆದರೆ, ಅಲ್ಲಿನ ಮಂದಿ ಇದ್ಯಾವುದನ್ನೂ ಪರಿಗಣಿಸಿಲ್ಲ ಎಂಬುದು ವಿಸ್ತಾರ ನ್ಯೂಸ್‌ನ ಪೋಲಿಂಗ್‌ ಬೂತ್‌ಗೆ ಬಂದ ಕರೆಗಳಿಂದ ಗೊತ್ತಾಗಿದೆ. ಹೀಗಾಗಿ ಹಾಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಕರೆ ಮಾಡಿದ ಬಹುಪಾಲು ಮಂದಿಯ ಇಂಗಿತವಾಗಿತ್ತು!

ಇದನ್ನೂ ಓದಿ: Vistara News Polling Booth: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜನ ಬೆಂಬಲ; ಕಾಂಗ್ರೆಸ್‌ ನಂ. 2

ಹೌದು. ಬಿಜೆಪಿಯ ಈರಣ್ಣ ಕಡಾಡಿಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿಯ ಮಹಾಂತೇಶ್‌ ಕವಟಗಿಮಠ ಇದ್ದಾರೆ. ಮೂರನೇ ಸ್ಥಾನದಲ್ಲಿ ಬಿಜೆಪಿಯ ಸಂಜಯ್‌ ಪಾಟೀಲ್ ಇದ್ದರೆ, ಹಾಲಿ ಸಂಸದೆ ಮಂಗಳ ಅಂಗಡಿಗೆ ಹೆಚ್ಚಿನ ಜನ ಬಲ ಇಲ್ಲ ಎಂಬುದು ಗೊತ್ತಾಗಿದೆ. ಇನ್ನು ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್‌ ಪರ ಕಡಿಮೆ ಮಂದಿ ಮತವನ್ನು ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪರ ಒಲವು ತೋರಿಲ್ಲ ಎಂಬುದು ಪೋಲಿಂಗ್‌ ಬೂತ್‌ ಫಲಿತಾಂಶದಿಂದ ಗೊತ್ತಾಗಿದೆ.

Exit mobile version