ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಗುರುವಾರ (ಮಾ. 14) ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಬಿಜೆಪಿ – ಜೆಡಿಎಸ್ ಮೈತ್ರಿಗೆ ಜನರು ಬಹುಪರಾಕ್ ಹೇಳಿದ್ದಾರೆ. ಬಂದಿದ್ದ ಸಾವಿರಾರು ಕರೆಗಳಲ್ಲಿ ಶೇ. 71 ಮಂದಿ ಮೈತ್ರಿ ಅಭ್ಯರ್ಥಿಗೆ ತಮ್ಮ ಮತ ಚಲಾವಣೆ ಮಾಡಿದ್ದಾರೆ. ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಒಟ್ಟು 5099 ಕರೆಗಳನ್ನು ಸ್ವೀಕರಿಸಲಾಗಿತ್ತು. ಇಲ್ಲಿ ಕಾಂಗ್ರೆಸ್ ಪರ ಶೇ. 29ರಷ್ಟು ಮಂದಿ ಒಲವು ತೋರಿದ್ದಾರೆ.
ವಿಸ್ತಾರ ಪೋಲಿಂಗ್ ಬೂತ್ ಕ್ಯಾಂಪೇನ್‌ಗೆ ಜನರಿಂದ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಈ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ ಎಂಬ ಸಂಗತಿ ತಿಳಿದುಬಂದಿದೆ. ಅಂದರೆ, ಒಂದು ವೇಳೆ, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಸಮಬಲ ಇರಲಿದೆ. ಆದರೆ, ಇಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇರುವುದರಿಂದ ಸಿಂಹಪಾಲು ಮತಗಳು ಮೈತ್ರಿ ಅಭ್ಯರ್ಥಿಗೆ ಬೀಳಲಿದೆ.
ಕೋಲಾರ ಜೆಡಿಎಸ್ ಅಭ್ಯರ್ಥಿ ಪ್ಲಸ್!
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಡುವೆ ಸಮಬಲದ ಕಾದಾಟ ಕಂಡುಬಂದರೂ ಜೆಡಿಎಸ್ – ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ದೊಡ್ಡ ಆಘಾತ ಆಗಲಿದೆ. ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಅಲ್ಲಿಗೆ ಭೇಟಿ ನೀಡಿ ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ. ಅಲ್ಲದೆ, ಯಾರೇ ಅಭ್ಯರ್ಥಿಯಾದರೂ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಲ್ಲಿಗೆ ನಿಸರ್ಗ ನಾರಾಯಣ ಸ್ವಾಮಿ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗ ಹಾಲಿ ಸಂಸದ ಮುನಿಸ್ವಾಮಿ ಅವರಿಂದ ಇದುವರೆಗೆ ಯಾವುದೇ ವಿರೋಧ ಬಂದಿಲ್ಲ. ಹೀಗಾಗಿ ದೋಸ್ತಿ ವರ್ಕೌಟ್ ಆಗುವ ಸ್ಪಷ್ಟ ಚಿತ್ರಣ ಇಲ್ಲಿ ಕಾಣುತ್ತಿದೆ.
ವಿಸ್ತಾರ ಪೊಲಿಂಗ್ ಬೂತ್‌ನಲ್ಲಿ ಗರಿಷ್ಠ ಮತ ಪಡೆದ ಬಿಜೆಪಿ
- 1,880 ಮತಗಳನ್ನು ಪಡೆದ ಭಾರತೀಯ ಜನತಾ ಪಾರ್ಟಿ (37%)
- 1,723 ಮತಗಳನ್ನು ಪಡೆದ ಜೆಡಿಎಸ್ಗೆ ಎರಡನೇ ಸ್ಥಾನ (34%)
- 1,484 ಮತಗಳನ್ನು ಪಡೆದ ಕಾಂಗ್ರೆಸ್‌ಗೆ ಮೂರನೇ ಸ್ಥಾನ (29%)
ಬಿಜೆಪಿಯಲ್ಲಿ ಮುನಿಸ್ವಾಮಿ, ಜೆಡಿಎಸ್‌ನಲ್ಲಿ ಮಲ್ಲೇಶ್ ಬಾಬು ಪರ ಹೆಚ್ಚಿದ ಒಲವು
ಬಿಜೆಪಿಯಲ್ಲಿ ಹಾಲಿ ಸಂಸದ ಮುನಿಸ್ವಾಮಿ ಪರ ಹೆಚ್ಚಿನ ಒಲವು ವ್ಯಕ್ತವಾಗಿದೆ. ಬಿಜೆಪಿ ಟಿಕೆಟ್ ರೇಸ್‌ನಲ್ಲಿರುವ ಮಹೇಶ್‌ರನ್ನು ಕೂಡ ಮತದಾರರು ಬೆಂಬಲಿಸಿದ್ದಾರೆ. ಜೆಡಿಎಸ್ ಟಿಕೆಟ್ ರೇಸ್‌ನಲ್ಲಿ ಮಲ್ಲೇಶ್ ಬಾಬುಗೆ ಮತದಾರರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದರೆ, ಸಮೃದ್ಧಿ ಮಂಜುನಾಥ್ ಎರಡನೇ ಸ್ಥಾನದಲ್ಲಿದ್ದಾರೆ. ನಿಸರ್ಗ ನಾರಾಯಣಸ್ವಾಮಿ ಪರವೂ ಮತದಾರರು ಒಲವು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುದ್ದುಗಂಗಾಧರ್ ಪರ ಒಲವು
ಕಾಂಗ್ರೆಸ್‌ನಲ್ಲಿ ಮುದ್ದುಗಂಗಾಧರ್ ಪರ ಹೆಚ್ಚಿನ ಒಲವು ವ್ಯಕ್ತವಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಕೂಡ ‘ಕೈ’ ರೇಸ್‌ನಲ್ಲಿದ್ದಾರೆ. ಸಿ.ಎಮ್. ಮುನಿಯಪ್ಪ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರನ್ನೂ ಮತದಾರರು ಬೆಂಬಲಿಸಿದ್ದಾರೆ. ಈ ನಡುವೆ ಮಾಜಿ ಸಚಿವ ನಾಗೇಶ್ ಪರ ಕೂಡ ಮತದಾರರು ಮತ ಚಲಾಯಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ: Vistara news polling booth: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ; ಪುತ್ತಿಲಗೆ ಜನಬೆಂಬಲ!
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488