ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಅಖಾಡ ಸಿದ್ಧಗೊಂಡಿದೆ. ಎಲ್ಲೆಡೆ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೇ ಚರ್ಚೆ ನಡೆಯುತ್ತಿದೆ. ಮತದಾರರು ಸಹ ಇಂಥ ಪಕ್ಷಕ್ಕೆ, ಇಂಥ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಒಂದು ಹಂತದಲ್ಲಿ ಚಿಂತನೆ ನಡೆಸಿದ್ದಾರೆ. ಈ ಹೊತ್ತಿನಲ್ಲಿ ವಿಸ್ತಾರ ನ್ಯೂಸ್ (Vistara News) ಆರಂಭಿಸಿರುವ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನಾಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ. ಇದರ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರಕ್ಕೆ ಮತ್ತೊಮ್ಮೆ ಡಿ.ಕೆ.ಸುರೇಶ್ ಅವರೇ ಕಿಂಗ್ ಆಗಲಿದ್ದಾರೆ. ಇಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಆಟ ನಡೆಯಲ್ಲ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ.
ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ ಡಿ.ಕೆ. ಸುರೇಶ್ ಅವರನ್ನು ಶತಾಯಗತಾಯ ಮಣಿಸಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆದರೆ, ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಬಂದ ಕರೆಗಳನ್ನು ಗಮನಿಸಿದಾಗ ಡಾ. ಮಂಜುನಾಥ್ ಅವರ ಮ್ಯಾಜಿಕ್ ನಡೆಯುವುದಿಲ್ಲ ಎಂದು ಅಖಾಡಕ್ಕಿಳಿದರೂ ಫಲ ನೀಡಲ್ಲ ಎಂಬ ಸಂದೇಶವನ್ನು ಮತದಾರ ನೀಡಿದ್ದಾನೆ.
ಡಿ.ಕೆ. ಬ್ರದರ್ಸ್ ಭದ್ರಕೋಟೆಯಲ್ಲಿ ‘ಮೈತ್ರಿ ಆಟ’ ನಡೆಯೋದಿಲ್ಲ..!
ಡಿ.ಕೆ. ಸುರೇಶ್‌ಗೆ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರದ ಗದ್ದುಗೆ ಒಲಿಯಲಿದೆ. “ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್”ಗೆ ಬಂದ ಕರೆಗಳಲ್ಲಿ ಅತಿ ಹೆಚ್ಚು ಮಂದಿ ಡಿ.ಕೆ. ಸುರೇಶ್ ಪರವಾಗಿ ಹೇಳಿದ್ದಾರೆ. ಒಟ್ಟು 7,666 ಕರೆಗಳು ಬಂದಿದ್ದು, ಡಿ.ಕೆ. ಸುರೇಶ್‌ಗೆ 4,631 ಮತಗಳು ಚಲಾವಣೆಯಾಗಿವೆ. ಇನ್ನು ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ 2,953 ಮತಗಳು ಬಂದಿವೆ. ಇತರರಿಗೆ 82 ಮತಗಳು ಬಿದ್ದಿವೆ. ಡಾ. ಸಿ.ಎನ್. ಮಂಜುನಾಥ್ ಪರ 1,867 ಮತಗಳು ಬಂದರೆ, ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಿದರೆ 67 ಮತಗಳನ್ನು ಪಡೆದುಕೊಳ್ಳಲಿದ್ದಾರೆ. ಅದೇ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ 265 ಮತಗಳು ಬೀಳಲಿವೆ.
ಶೇಕಡಾವಾರು ಕರೆಗಳ ಪ್ರಮಾಣ
- ಕಾಂಗ್ರೆಸ್ – 4,631 (60%)
ಬಿಜೆಪಿ ಜೆಡಿಎಸ್ ಮೈತ್ರಿ – 2,953 (39%) - ಇತರೆ – 82 (1%)
- ಬಂದ ಒಟ್ಟು ಕರೆಗಳು – 58,450
- ಸ್ವೀಕರಿಸಿದ ಕರೆಗಳು – 7,666
ಮೈತ್ರಿ ಅಭ್ಯರ್ಥಿಯಾದರೂ ಒಲವು ಕಡಿಮೆ
ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್‌ಗೆ ಸೋಲಿನ ರುಚಿ ತೋರಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ. ಆದರೆ, ವಿಸ್ತಾರ ಪೋಲಿಂಗ್ ಬೂತ್‌ಗೆ ಕರೆ ಮಾಡಿದವರು ಬಿಜೆಪಿ-ಜೆಡಿಎಸ್ ಮೈತ್ರಿ ಪರ 2953 ಮತಗಳನ್ನಷ್ಟೇ ಚಲಾಯಿಸಿದ್ದಾರೆ. ಆದರೆ, ಡಿಕೆಸುಗೆ 4,631 ಮತಗಳನ್ನು ನೀಡಿದ್ದಾರೆ. ಅದೇ ಇತರೆ ಮತಗಳನ್ನು ನೋಡಿದರೆ ಕೇವಲ 82 ಮತಗಳು ಬಂದಿವೆ.
ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗಳಿಗೆ ಎಷ್ಟು ಮತ?
- ಡಿ.ಕೆ. ಸುರೇಶ್ ಪರ 4631 ಮತಗಳು
- ಡಾ.ಸಿ.ಎನ್. ಮಂಜುನಾಥ್ ಪರ 1,867 ಮತ
- ಸಿ.ಪಿ.ಯೋಗೇಶ್ವರ್ ಪರ 67 ಮತಗಳು
- ಬಿಜೆಪಿ ಪರ 754 ಮತಗಳು
- ಜೆಡಿಎಸ್ ಪರ 265 ಮತಗಳು
- ಇತರರಿಗೆ ಕೇವಲ 82 ಮತಗಳು
ಇದರ ಅನುಸಾರ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಪರ ಅತಿ ಹೆಚ್ಚು ಮಂದಿ ಕರೆ ಮಾಡಿದ್ದರೆ, ಡಾ. ಸಿ.ಎನ್. ಮಂಜುನಾಥ್, ಸಿ.ಪಿ. ಯೋಗೇಶ್ವರ್ ಅವರ ಹೆಸರನ್ನು ಹೇಳಿಕೊಂಡೇ ಮತ್ತೆ ಕೆಲವರು ಕರೆ ಮಾಡಿದ್ದಾರೆ. ಇನ್ನು ಬಿಜೆಪಿ, ಜೆಡಿಎಸ್ ಎಂದು ಪಕ್ಷಕ್ಕೆ ಸಂಬಂಧಿಸಿ ಹಲವರು ಕರೆ ಮಾಡಿದ್ದಾರೆ.
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ: Vistara News Polling Booth : ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್: ವಿನೂತನ ಪ್ರಯೋಗಕ್ಕೆ ಡಾ. ಮಂಜುನಾಥ್ ಚಾಲನೆ
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488