ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು, ಎಲ್ಲ ಮೈತ್ರಿಕೂಟಗಳು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿವೆ. ಚುನಾವಣೆ ಪೂರ್ವ ಸಮೀಕ್ಷೆಗಳು, ಮತಗಟ್ಟೆಗಳಲ್ಲಿ ವ್ಯಕ್ತವಾದ ಅಭಿಪ್ರಾಯ, ಜನರ ಬೆಂಬಲ ಯಾರಿಗಿದೆ ಎಂಬುದರ ವಿಶ್ಲೇಷಣೆ ಮಾಡುತ್ತಿವೆ. ಆಂತರಿಕ ಸಮೀಕ್ಷೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ಚುನಾವಣಾ ತಜ್ಞ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ (Yogendra Yadav) ಅವರು ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ, ಈ ಬಾರಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಲ್ಲ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭವಿಷ್ಯ ಏನಾಗಲಿದೆ ಎಂಬುದರ ಕುರಿತು ವಿಶ್ಲೇಷಣೆ ಮಾಡಿದ ವಿಡಿಯೊವನ್ನು ಯೋಗೇಂದ್ರ ಯಾದವ್ ಅವರು ಪೋಸ್ಟ್ ಮಾಡಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 233 ಕ್ಷೇತ್ರಗಳನ್ನು ಮಾತ್ರ ಗೆಲ್ಲಲಿದೆ. ಇದು 70 ಸೀಟುಗಳನ್ನು ಕಳೆದುಕೊಳ್ಳಲಿದೆ. ಇನ್ನು ಬಿಜೆಪಿ ಮೈತ್ರಿ ಪಕ್ಷಗಳು 35 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿವೆ. ಅಲ್ಲಿಗೆ ಎನ್‌ಡಿಎ ಮ್ಯಾಜಿಕ್ ನಂಬರ್ ಸಮೀಪ ಬರುತ್ತದೆಯೇ ಹೊರತು, ಸ್ಪಷ್ಟ ಬಹುಮತ ಸಿಗುವುದಿಲ್ಲ. ಮಾಧ್ಯಮಗಳು ಹಾಗೂ ರಾಜಕೀಯ ವಿಶ್ಲೇಷಕರು ಅಜೆಂಡಾ ಇಟ್ಟುಕೊಂಡು ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ವರದಿ ನೀಡುತ್ತಿವೆ” ಎಂದು ಟಾಂಗ್ ಕೊಟ್ಟರು.
ಯಾವ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ?
ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ ಪ್ರಕಾರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ 10 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇನ್ನುಳಿದಂತೆ, ಮಹಾರಾಷ್ಟ್ರದಲ್ಲಿ 20, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ತಲಾ 10 ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಇನ್ನು, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತಲಾ 10 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಆ ಮೂಲಕ ಎನ್‌ಡಿಎ ಒಟ್ಟು 100 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂಬುದಾಗಿ ಅಂದಾಜಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ಕೈಗೊಂಡ ಬಹುತೇಕ ಸಮೀಕ್ಷೆಗಳಲ್ಲಿ ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಯೋಗೇಂದ್ರ ಯಾದವ್ ಅವರು ಫಲಿತಾಂಶದ ಕುರಿತು ವಿಶ್ಲೇಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
2019ರಲ್ಲಿ ನುಡಿದ ಭವಿಷ್ಯ ಏನಾಗಿತ್ತು?
2019ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ಕುರಿತು 2018ರಲ್ಲಿಯೇ ಯೋಗೇಂದ್ರ ಯಾದವ್ ಅವರು ವಿಶ್ಲೇಷಣೆ ಮಾಡಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ 100 ಸೀಟುಗಳನ್ನು ಕಳೆದುಕೊಳ್ಳಲಿದೆ. ಬಿಜೆಪಿಯೊಂದೇ 65 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಆ ಮೂಲಕ ಎನ್‌ಡಿಎ ಬಹುಮತ ಸಾಬೀತುಪಡಿಸುವುದಿಲ್ಲ ಎಂದೇ ಹೇಳಿದ್ದರು. ಇನ್ನು, 2019ರಲ್ಲಿ ಲೇಖನ ಬರೆದಿದ್ದ ಯೋಗೇಂದ್ರ ಯಾದವ್, 2004ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ. ಆಗಲೂ ವಾಜಪೇಯಿ ಅವರ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನಲಾಗುತ್ತಿತ್ತು. ಆದರೆ, ಫಲಿತಾಂಶ ಉಲ್ಟಾ ಆಯಿತು. 2019ರ ಚುನಾವಣೆಯಲ್ಲೂ ಇದೇ ರೀತಿ ಆಗಲಿದೆ ಎಂದು ಲೇಖನದಲ್ಲಿ ಉಲ್ಲೇಖಿಸಿದ್ದರು. ಆದರೆ, ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಉಲ್ಟಾ ಆಗಿತ್ತು. ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ರೈತ ಚಳವಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಇವರು ಭವಿಷ್ಯ ನುಡಿದಿದ್ದರು. ಆದರೆ ಅಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸತತ ಎರಡನೇ ಬಾರಿ ಭಾರಿ ಬಹುಮತದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: Sita Temple: ಬಿಜೆಪಿಯಿಂದ ಶೀಘ್ರವೇ ಸೀತೆಗಾಗಿ ಮಂದಿರ ನಿರ್ಮಾಣ; ಅಮಿತ್ ಶಾ ಮಹತ್ವದ ಘೋಷಣೆ