ಹೆಚ್ಚಿನ ಮಂದಿ ಎಫ್‌ಡಿಯಲ್ಲಿ (Bank FD Rates) ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತಾರೆ. ಸಮಯ ಅಥವಾ ಅವಧಿಯ ಠೇವಣಿ ಎಂದೂ ಕರೆಯಲ್ಪಡುವ ಸ್ಥಿರ ಠೇವಣಿಗಳು (Fixed deposits) ಅಂದರೆ ಎಫ್‌ಡಿಗಳು ಕಡಿಮೆ ರಿಸ್ಕ್ ಹೊಂದಿರುವುದರಿಂದ ಹೆಚ್ಚು ಜನಪ್ರಿಯವಾಗಿವೆ. ಎಫ್‌ಡಿಯಲ್ಲಿ ನಿಗದಿತ ಅವಧಿಗೆ ನಿರ್ದಿಷ್ಟ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಬಹುದು ಮತ್ತು ನಿಯಮಿತ ಅಥವಾ ಠೇವಣಿ ಪಕ್ವವಾದಾಗ ಸ್ಥಿರ ಬಡ್ಡಿಯನ್ನು ಪಡೆಯಬಹುದು.
ಎಫ್‌ಡಿಯಲ್ಲಿ ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಬ್ಯಾಂಕ್‌ಗಳು ಸಾಮಾನ್ಯವಾಗಿ ಶೇ. 3ರಿಂದ ಶೇ 7.50 ನಡುವಿನ ಬಡ್ಡಿ ದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಹೆಚ್ಚುವರಿ ಶೇ. 0.5 ಬಡ್ಡಿ ದರವನ್ನು ಪಡೆಯುತ್ತಾರೆ. ಎಫ್ ಡಿಯಲ್ಲಿ ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸುವ ಮೊದಲು ವಿವಿಧ ಬ್ಯಾಂಕ್‌ಗಳ ಬಡ್ಡಿ ದರಗಳನ್ನು ಹೋಲಿಸುವುದು ಮುಖ್ಯವಾಗಿದೆ. ದೇಶದ ಪ್ರಮುಖ ನಾಲ್ಕು ಬ್ಯಾಂಕ್ ಗಳು ಎಫ್‌ಡಿಗಳಿಗೆ ನೀಡುವ ಬಡ್ಡಿ ದರಗಳು ಇಂತಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಹೂಡಿಕೆ ಮಾಡಿದರೆ ಶೇ. 3 ಮತ್ತು ಶೇ. 7 ನಡುವಿನ ಬಡ್ಡಿ ದರಗಳನ್ನು ನಿರೀಕ್ಷಿಸಬಹುದು. ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇ. 0.50 ಬಡ್ಡಿ ದರವನ್ನು ಪಡೆಯುತ್ತಾರೆ. ಒಂದು ವರ್ಷ ಪೂರ್ಣಗೊಂಡ ಬಳಿಕ ಬ್ಯಾಂಕ್ ಎಫ್ ಡಿಗಳಿಗೆ ಶೇ. 6.80 ಬಡ್ಡಿ ದರವನ್ನು ಮತ್ತು ಎರಡು ವರ್ಷಗಳಿಂದ ಕೇವಲ ಮೂರು ವರ್ಷಗಳವರೆಗಿನ ಅವಧಿಗೆ ಶೇ. 7 ಬಡ್ಡಿ ದರವನ್ನು ನೀಡಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.50ರಿಂದ ಶೇ. 7.50ವರೆಗಿನ ಸ್ಥಿರ ಠೇವಣಿ ಬಡ್ಡಿ ದರಗಳನ್ನು ನೀಡುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರು ಶೇ. 6.75 ಬಡ್ಡಿ ಗಳಿಸುತ್ತಾರೆ. ಆದರೆ ಹಿರಿಯ ನಾಗರಿಕರು ಶೇ. 7.25ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಯೋಜನೆಗಳಿಗೆ ಶೇ. 3 ಮತ್ತು ಶೇ. 7.50ರ ನಡುವಿನ ಬಡ್ಡಿ ದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಶೇ. 3.50ರಿಂದ ಶೇ. 7.50ರವರೆಗೆ ಹೆಚ್ಚುವರಿ ಶೇ.0.5 ಬಡ್ಡಿ ದರವನ್ನು ಪಡೆಯುತ್ತಾರೆ. ಒಂದು ವರ್ಷದ ನಿಶ್ಚಿತ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ಶೇ. 6.70 ಬಡ್ಡಿ ದರವನ್ನು ನೀಡಲಾಗುತ್ತದೆ.
ಇದನ್ನೂ ಓದಿ: Rent Agreement: ಬಾಡಿಗೆ ಒಪ್ಪಂದ 11 ತಿಂಗಳ ಅವಧಿಗೆ ಮಾತ್ರ ಯಾಕೆ ಅನ್ನೋದು ಗೊತ್ತಾ?
ಹೆಚ್‌ಡಿಎಫ್‌ಸಿ
ಹೆಚ್‌ಡಿಎಫ್‌ಸಿ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ನೀಡುತ್ತದೆ. ಸಾಮಾನ್ಯ ಹೂಡಿಕೆದಾರರು ಶೇ. 6.60 ಬಡ್ಡಿ ದರವನ್ನು ಗಳಿಸುತ್ತಾರೆ ಮತ್ತು ಹಿರಿಯ ನಾಗರಿಕರು ಶೇ. 7.10ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ. ಮೆಚ್ಯೂರಿಟಿ ಅವಧಿಗೆ ಅನುಗುಣವಾಗಿ ಸಾಮಾನ್ಯ ಗ್ರಾಹಕರಿಗೆ ಶೇ. 3ರಿಂದ ಶೇ. 7.75ವರೆಗಿನ ಬಡ್ಡಿ ದರಗಳನ್ನು ಬ್ಯಾಂಕ್ ಒದಗಿಸುತ್ತದೆ.