ಮಾರ್ಚ್ 31 ಸಮೀಪಿಸುತ್ತಿದೆ. ಎಲ್ಲ ಹಣಕಾಸು ವ್ಯವಹಾರಗಳಿಗೂ ಇದು ನಿರ್ಣಾಯಕ ಘಟ್ಟ ಮತ್ತು ಗಡುವು. ಈ ಮಾರ್ಚ್ 31ರೊಳಗೆ (Financial Year End) ನೀವು ಒಂದಷ್ಟು ಕಾರ್ಯಗಳನ್ನು ಮುಗಿಸಿರದೆ ಇದ್ದರೆ, ಇದು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅವು ಯಾವವು? ಇಲ್ಲಿದೆ ನೋಡಿ ಮಾರ್ಚ್ 31ರೊಳಗೆ ನೀವು ಬಹುಮುಖ್ಯವಾಗಿ ಮಾಡಬೇಕಾದ ಐದು ಕೆಲಸಗಳು..
1. ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿ
ಇದು ಅತ್ಯಂತ ಪ್ರಮುಖವಾಗಿ ನೀವು ಮಾಡಬೇಕಾದ ಕೆಲಸ. ನೀವಿನ್ನೂ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಿರದೆ ಇದ್ದರೆ, ಈ ಮಾರ್ಚ್ 31ರೊಳಗೆ ಮಾಡಿಬಿಡಿ. ಹಾಗೊಮ್ಮೆ ಮಾಡದೆ ಇದ್ದರೆ ನಿಮಗೆ 1000 ರೂಪಾಯಿ ದಂಡ ಬೀಳುತ್ತದೆ ಮತ್ತು ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಮತ್ತೆ ಪಾನ್ ಕಾರ್ಡ್ನ್ನು ಮರು ಸಕ್ರಿಯಗೊಳಿಸಲು 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.
2. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ
ನೀವಿನ್ನೂ ಯಾವುದೇ ರೀತಿಯ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರದೆ ಇದ್ದರೆ ಮಾರ್ಚ್ 31ರೊಳಗೆ ಅದನ್ನು ಮಾಡಿ. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ನಿಶ್ಚಿತ ಠೇವಣಿ (Fixed Deposit )ಗಳಲ್ಲಿ ಹಣ ಹೂಡಿಕೆ ಮಾಡಿ. ಈ ಮೂಲಕ ನಿಮ್ಮ ತೆರಿಗೆ ಉಳಿತಾಯದ ಲಾಭ ಪಡೆಯಿರಿ.
3. ಮ್ಯೂಚ್ಯುಯಲ್ ಫಂಡ್ಗಳ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳಿಸಿ
ಯಾವುದೇ ಮ್ಯೂಚ್ಯುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ. ಅದರಲ್ಲಿ ನೀವೊಮ್ಮೆ ವಿಫಲವಾದರೆ ನಿಮ್ಮ ಅಕೌಂಟ್ ಫ್ರೀಜ್ ಆಗುತ್ತದೆ. ಅಂದರೆ ಬ್ಯಾಂಕ್ ನಿಮ್ಮ ಅಕೌಂಟ್ನಿಂದ ಕೆಲವು ವ್ಯವಹಾರಗಳನ್ನು ತಡೆ ಹಿಡಿಯುತ್ತದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್
4. ಎನ್ಎಸ್ಇ ಮ್ಯೂಚುಯಲ್ ಫಂಡ್ ಪ್ಲಾಟ್ಫಾರ್ಮ್ನಲ್ಲಿ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ದೃಢೀಕರಿಸಿ
ನ್ಯಾಷನಲ್ ಸ್ಟಾಕ್ ಮಾರ್ಕೆಟ್ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ)ದ ಮ್ಯೂಚುಯಲ್ ಫಂಡ್ ವೇದಿಕೆ (ಎನ್ಎಫ್ಎಂ)ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ದೃಢೀಕರಿಸಬೇಕು. ಇದು ಮಾರ್ಚ್ 31ರೊಳಗೆ ಆಗಬೇಕು. ಎನ್ಎಸ್ಇಯಲ್ಲಿ ವ್ಯವಹಾರ ಹೊಂದಿರುವವರಿಗೆ ಇದು ಅನ್ವಯ.
5. ಪಿಪಿಎಫ್ ಅಕೌಂಟ್ಗೆ 500 ರೂ. ವರ್ಗಾಯಿಸಿ
ನಿಮ್ಮ ಪಿಪಿಎಫ್ ಅಕೌಂಟ್ (Public Provident Fund)ಗೆ ಮಾರ್ಚ್ 31ರೊಳಗೆ 500 ರೂಪಾಯಿ ವರ್ಗಾಯಿಸಿ. ಈ ಪಿಪಿಎಫ್ ನಿಯಮದ ಅನುಸಾರ ಪ್ರತಿ ಹಣಕಾಸು ವರ್ಷಾಂತ್ಯದಲ್ಲಿ ಖಾತೆದಾರರು ತಮ್ಮ ಖಾತೆಗೆ 500 ರೂ.ವರ್ಗಾಯಿಸಬೇಕು. ಅದಿಲ್ಲದೆ ಹೋದರೆ ಅವರ ಪಿಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುತ್ತದೆ. ನೀವು ಪಿಪಿಎಫ್ ಅಕೌಂಟ್ ಹೊಂದಿದ್ದರೆ, ತಿಂಗಳಾಂತ್ಯದೊಳಗೆ 500 ರೂ.ಹಾಕಿಬಿಡಿ.